ತೆರಿಗೆ ಸಂಗ್ರಹಣೆಯಲ್ಲಿ ಹೆಚ್ಚಳ

5

ತೆರಿಗೆ ಸಂಗ್ರಹಣೆಯಲ್ಲಿ ಹೆಚ್ಚಳ

Published:
Updated:

ಹಾಸನ: ‘ತೆರಿಗೆ ಸಂಗ್ರಹಣೆಯಲ್ಲಿ ಈ ವರ್ಷ ಹಾಸನ ನಗರಸಭೆ ಉತ್ತಮ ಅಭಿವೃದ್ಧಿ ದಾಖಲಿಸಿದೆ. ಒಟ್ಟಾರೆ ನಗರಪಾಲಿಕೆಗೆ ಬರಬೇಕಾಗಿದ್ದ 8.83 ಕೋಟಿ ರೂಪಾಯಿಯಲ್ಲಿ ಈ ವರ್ಷ 6.18 ಕೋಟಿ ರೂಪಾಯಿ ಸಂಗ್ರಹವಾಗಿದೆ’ ಎಂದು ಹಾಸನ ನಗರಸಭೆ ಆಯುಕ್ತ ಶಿವನಂಜೇಗೌಡ ತಿಳಿಸಿದ್ದಾರೆ.ಪತ್ರಕರ್ತರೊಡನೆ ಮಾತನಾಡುತ್ತ ಅವರು ಈ ವಿಚಾರ ತಿಳಿಸಿದರು.‘ಸ್ವಯಂಘೋಷಿತ ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ಯಾವುದೇ ತೊಂದರೆ ಆಗಿಲ್ಲ. ಬಾಕಿ ಮನ್ನಾ ಮಾಡುವಂತೆ ಅಥವಾ ಬಡ್ಡಿ ಮನ್ನಾ ಮಾಡಿ ಏಕ ಕಂತಿನ ಪಾವತಿಗೆ ಅವಕಾಶ ಕೊಡುವಂತೆ ನಾಗರಿಕರಿಂದ ಬೇಡಿಕೆ ಬಂದಿಲ್ಲ. ಆದರೆ ನಗರಸಭೆಗೆ ಕೆಲವರಿಂದ ದೊಡ್ಡ ಮೊತ್ತ ಬರಬೇಕಾಗಿದ್ದು, ಈ ಬಗ್ಗೆ ಬಡ್ಡಿ ಮನ್ನಾ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸುವಂತೆ ನಗರಸಭೆ ಸದಸ್ಯರು ಸೂಚನೆ ನೀಡಿದ್ದಾರೆ. ಆ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದರು.‘ರಾಜೀವಗಾಂಧಿ ಸಂಕೀರ್ಣ ಹಾಗೂ ಕಟ್ಟಿನಕೆರೆ ಸಂಕೀರ್ಣಗಳಲ್ಲಿ ನಗರಸಭೆಯ 523 ಮಳಿಗೆಗಳಿದ್ದು, ಅವುಗಳಿಂದ 34 ಲಕ್ಷ ಬಾಡಿಗೆ ಬಾಕಿ ಉಳಿದುಕೊಂಡಿದೆ. ಹಲವು ವರ್ಷಗಳಿಂದ ಇದು ಬಾಕಿ ಉಳಿದಿದ್ದು ಕೆಲವು ಮಳಿಗೆಗಳನ್ನು ಪಡೆದವರು ಅದಕ್ಕೆ ಬೀಗ ಹಾಕಿದ್ದಾರೆ. ಸಂಪರ್ಕಕ್ಕೂ ಸಿಗುತ್ತಿಲ್ಲ. ಕಾನೂನು ಪ್ರಕಾರ ಕೆಲವು ಮುಂಗಟ್ಟುಗಳಿಗೆ ಈಗಾಗಲೇ ನೋಟಿಸ್ ಅಂಟಿಸಲಾಗಿದೆ. ಉತ್ತರ ಬಾರದಿದ್ದಲ್ಲಿ ಈ ಮಳಿಗೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾ ಗುವುದು. ಆರಂಭದಲ್ಲಿ ಮಳಿಗೆಗಳನ್ನು ಪಡೆದವರು ಅವುಗಳನ್ನು ಇನ್ನೊಬ್ಬರಿಗೆ ನೀಡಿ ಹೋಗಿರುವ ಪ್ರಕರಣಗಳು ಇವೆ. ಶೇ 60ಕ್ಕಿಂತ ಹೆಚ್ಚು ಮಳಿಗೆಗಳು ಇದೇ ರೀತಿ ಇವೆ. ಈಗ ಇಲ್ಲಿ ವ್ಯಾಪಾರ ನಡೆಸುತ್ತಿರುವವರು ಹಿಂದಿನವರ ಹೆಸರಿನಲ್ಲೇ ಬಾಡಿಗೆ ಕಟ್ಟುತ್ತಿ ರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಕಷ್ಟ ಎಂದರು.27ರಂದು ಚುನಾವಣೆ


ಸದಸ್ಯರ ಮರಣದಿಂದ ತೆರವಾಗಿರುವ ನಹರಸಭೆಯ 9 ಹಾಗೂ 26ನೇ ವಾರ್ಡ್‌ಗಳಿಗೆ ಇದೇ ಫೆ. 27ರಂದು ಉಪ ಚುನಾವಣೆ ನಡೆಯಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಜ. 29ರಿಂದಲೇ ಈ ವಾರ್ಡ್‌ಗಳಲ್ಲಿ ನೀತಿಸಂಹಿತೆ ಜಾರಿಯಾಗಿದ್ದು, ಮಾ.3ರವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫೆ. 8ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು. ಫೆ.15 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ. 17ರಂದು ನಾಮಪತ್ರ ಪರಿಶೀಲನೆ ಮತ್ತು 19 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯದಿನವಾಗಿರುತ್ತದೆ.ಭಾನುವಾರ 27ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯುವುದು. ಮಾರ್ಚ್ 1 ರಂದು ಬೆಳಿಗ್ಗೆ 8ರಿಂದ ಮತ ಎಣಿಕೆ ನಡೆಸಲಾ ಗುವುದು. 9ನೇ ವಾರ್ಡ್ ಸಾಮಾನ್ಯವಾಗಿದ್ದರೆ 26ನೇ ವಾರ್ಡ್‌ನ್ನು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ. ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲ ಅಭಿಯಂತ ಅವರನ್ನು ಚುನಾವ ಣಾಧಿಕಾರಿಯಾಗಿ ಹಾಗೂ ಬಾಲವಿಕಾಸ ಯೋಜನಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರನ್ನು ಉಪ ಚುನಾವಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry