ತೆರಿಗೆ ಸಂಗ್ರಹ: ನಗರಸಭೆಗೆ ಸಿಹಿ-ಕಹಿ ಅನುಭವ

7

ತೆರಿಗೆ ಸಂಗ್ರಹ: ನಗರಸಭೆಗೆ ಸಿಹಿ-ಕಹಿ ಅನುಭವ

Published:
Updated:

ಮಡಿಕೇರಿ: ಕಳೆದ 2010-11ನೇ ಸಾಲಿನ ತೆರಿಗೆ ಸಂಗ್ರಹ ವಿಷಯದಲ್ಲಿ ಮಡಿಕೇರಿ ನಗರಸಭೆಗೆ ಸಿಹಿ ಹಾಗೂ ಕಹಿ ಎರಡೂ ಅನುಭವವಾಗಿದೆ. ಆಸ್ತಿ ತೆರಿಗೆ ಸಂಗ್ರಹಿಸುವಲ್ಲಿ ಅತ್ಯುತ್ತಮ ಸಾಧನೆ ತೋರಿರುವ ನಗರಸಭೆಯು ನೀರಿನ ಕರ ಸಂಗ್ರಹಿಸುವಲ್ಲಿ ಹಿಂದೆ ಬಿದ್ದಿದೆ.ನಗರಸಭೆ ವ್ಯಾಪ್ತಿ ಪ್ರದೇಶದಲ್ಲಿರುವ ವಸತಿ ಹಾಗೂ ವಾಣಿಜ್ಯ ಮಳಿಗೆಗಳಿಂದ ಇದುವರೆಗೆ ಶೇ 74ರಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದ್ದರೆ, ನೀರಿನ ತೆರಿಗೆ ಸಂಗ್ರಹ ಶೇ 30ಕ್ಕಿಂತಲೂ ಕಡಿಮೆಯಾಗಿದೆ.

 

ಆಸ್ತಿ ತೆರಿಗೆಯ ಬಾಕಿ ಉಳಿದಿರುವ ತೆರಿಗೆಯನ್ನು ಒಂದೆರಡು ತಿಂಗಳಲ್ಲಿ ಸಂಪೂರ್ಣವಾಗಿ ಸಂಗ್ರಹಿಸುವ ವಿಶ್ವಾಸವನ್ನು ನಗರಸಭೆ ಹೊಂದಿದೆ. ನೀರಿನ ತೆರಿಗೆಯನ್ನು ನೀಡಲು ಸಾರ್ವಜನಿಕರು ಮುಂದೆ ಬರಬೇಕು ಎಂದು ಮನವಿ ಮಾಡಿದೆ.ರಿಯಾಯಿತಿ ಉಂಟು: ಪ್ರಸಕ್ತ 2011-12ನೇ ಸಾಲಿನ ತೆರಿಗೆಯನ್ನು ಏಪ್ರಿಲ್ ತಿಂಗಳಿನಲ್ಲಿ ಕಟ್ಟಿದರೆ ಅಂತಹವರ ತೆರಿಗೆ ಮೊತ್ತದಲ್ಲಿ ಶೇ 5ರಷ್ಟು ರಿಯಾಯಿತಿ ದೊರೆಯುತ್ತದೆ. ಮೇ-ಜೂನ್ ತಿಂಗಳಿನಲ್ಲಿ ತೆರಿಗೆ ಕಟ್ಟುವವರೆಗೆ ಯಾವುದೇ ರೀತಿಯ ದಂಡ ವಿಧಿಸುವುದಿಲ್ಲ.

 

ಜುಲೈ ನಂತರ ತೆರಿಗೆ ಕಟ್ಟುವವರಿಗೆ ಪ್ರತಿ ತಿಂಗಳು ಶೇ 2ರಷ್ಟು ದಂಡವನ್ನು ವಿಧಿಸಲಾಗುವುದು. ಆದ್ದರಿಂದ ಜನರು ತಮ್ಮ ತೆರಿಗೆಯನ್ನು ನಿಗದಿತ ಅವಧಿಯೊಳಗೆ ಕಟ್ಟಬೇಕು ಎಂದು ನಗರಸಭೆ ಆಯುಕ್ತ ಶಶಿಕುಮಾರ್ ಕೋರಿದ್ದಾರೆ.ನೀರಿನ ವೆಚ್ಚ ಹೆಚ್ಚು, ತೆರಿಗೆ ಸಂಗ್ರಹ ಕಮ್ಮಿ: ಇಡೀ ನಗರಕ್ಕೆ ಪ್ರತಿದಿನ 45 ಲಕ್ಷ ಲೀಟರ್ ಕುಡಿಯುವ ನೀರು ಪೂರೈಸಲಾಗುತ್ತಿದೆ. ನೀರು ಪೂರೈಸಲು ನಗರಸಭೆಗೆ ಪ್ರತಿವರ್ಷ 1 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಆದರೆ, ಜನರು ಕಟ್ಟುವ ನೀರಿನ ತೆರಿಗೆ ತೀರ ಅತ್ಯಲ್ಪ ಪ್ರಮಾಣವಾಗಿದೆ.ಬೇಸಿಗೆ ದಿನಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತದೆ. ಯಾವುದೇ ರೀತಿಯ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ನಾಗರಿಕರು ನಗರಸಭೆಯ ಜೊತೆ ಸಹಕರಿಸಬೇಕು.ನೀರಿನ ತೆರಿಗೆಯನ್ನು ರೂ 120ಕ್ಕೆ ಹೆಚ್ಚಿಸುವಂತೆ ಸರ್ಕಾರದ ಸ್ಪಷ್ಟ ಆದೇಶವಿದ್ದರೂ, ಜನರಿಗೆ ತೊಂದರೆಯಾಗದಿರಲಿ ಎಂದು ಕೇವಲ ರೂ 90 ನಿಗದಿಪಡಿಸಲಾಗಿದೆ. ಕುಡಿಯಲು ನೀರು ಬೇಕೆಂದು ಕೇಳುವ ಜನರು ಅದೇ ರೀತಿ ನೀರಿನ ತೆರಿಗೆಯನ್ನು ಕಟ್ಟಿ ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ನಗರಸಭೆ ಅಧ್ಯಕ್ಷ ಎಚ್.ಎಂ. ನಂದಕುಮಾರ ಮನವಿ ಮಾಡಿದರು.ಆಸ್ತಿ ತೆರಿಗೆ: 36,000 ಜನಸಂಖ್ಯೆ ಹೊಂದಿರುವ ನಗರ ವ್ಯಾಪ್ತಿಯಲ್ಲಿ 7,780 ಮನೆಗಳಿವೆ. ಮನೆ ಹಾಗೂ ವಾಣಿಜ್ಯ ಮಳಿಗೆಗಳನ್ನು ಹೊಂದಿರುವವರು ತಮ್ಮ ಆಸ್ತಿಯ ಬಗ್ಗೆ ತಾವೇ ಸ್ವಯಂ ಘೋಷಿಸಿಕೊಂಡು, ತೆರಿಗೆ ಕಟ್ಟುವ ಪದ್ಧತಿ ಈಗ ಜಾರಿಯಲ್ಲಿದೆ. ಇದರನ್ವಯ ಸಾರ್ವಜನಿಕರು ನಗರಸಭೆಯಲ್ಲಿ ತಮ್ಮ ಆಸ್ತಿ ವಿವರವನ್ನು ಘೋಷಿಸಿ, ಅದಕ್ಕೆ ಅನ್ವಯವಾಗುವ ತೆರಿಗೆಯನ್ನು ಕಟ್ಟಬೇಕಾಗುತ್ತದೆ.ಸದ್ಯಕ್ಕೆ ನಗರದಲ್ಲಿರುವ ಖಾಲಿ ನಿವೇಶನಗಳ ಮೇಲೆ ತೆರಿಗೆ ವಿಧಿಸಲಾಗುತ್ತಿಲ್ಲ. ಕೇವಲ ಜನರು ವಾಸವಿರುವ ವಸತಿ ಹಾಗೂ ವಾಣಿಜ್ಯ ಮಳಿಗೆಗಳ ಮೇಲೆ ಮಾತ್ರ ನಗರಸಭೆಯ ತೆರಿಗೆ ವಿಧಿಸುತ್ತಿದೆ. ಜನರು ವಾಸಿಸುವ ವಸತಿ ಆಸ್ತಿ ತೆರಿಗೆಯಲ್ಲಿ ಶೇ 50ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

 

ವಾಣಿಜ್ಯ ಮಳಿಗೆಗಳ ಮೇಲೆ ಯಾವುದೇ ರಿಯಾಯಿತಿ ಇಲ್ಲ. ಇದುವರೆಗೆ ತಮ್ಮ ಆಸ್ತಿಯನ್ನು ನಗರಸಭೆಯಲ್ಲಿ ನೋಂದಣಿ ಮಾಡಿಕೊಳ್ಳದ ನಾಗರಿಕರು ಶೀಘ್ರವೇ ನೋಂದಾಯಿಸಿಕೊಳ್ಳಬೇಕು ಎಂದು ನಗರಸಭೆ ಆಯುಕ್ತ ಶಶಿಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry