ತೆರಿಗೆ ಸಂಗ್ರಹ ವೈಫಲ್ಯಕ್ಕೆ ತರಾಟೆ

7

ತೆರಿಗೆ ಸಂಗ್ರಹ ವೈಫಲ್ಯಕ್ಕೆ ತರಾಟೆ

Published:
Updated:
ತೆರಿಗೆ ಸಂಗ್ರಹ ವೈಫಲ್ಯಕ್ಕೆ ತರಾಟೆ

ಬೆಂಗಳೂರು: ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸುವುದರಲ್ಲಿ ವಿಫಲ, ಯೋಜನೆಗಳ ಬಗ್ಗೆ ಅಸಮರ್ಪಕ ಮಾಹಿತಿ, ಆಸ್ತಿಗಳಿಗೆ ಪಿಐಡಿ ಸಂಖ್ಯೆ ನೀಡುವಲ್ಲಿನ ಅಧಿಕಾರಿಗಳ ವಿಳಂಬ ಕುರಿತು ಮೇಯರ್ ಡಿ. ವೆಂಕಟೇಶಮೂರ್ತಿ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಎಂಟು ವಲಯಗಳ ಜಂಟಿ ಆಯುಕ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಅವರು, ಅಧಿಕಾರಿಗಳು ನೀಡಿದ ಅಸಮರ್ಪಕವಾದ ಉತ್ತರದ ಬಗ್ಗೆ `ಗರಂ~ ಆದರು.

ಈ ವರ್ಷ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಆಸ್ತಿ ತೆರಿಗೆ ಸಂಗ್ರಹಿಸದಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್, ನಿಗದಿತ ಅವಧಿಯೊಳಗೆ ಗರಿಷ್ಠ ಪ್ರಮಾಣದಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವ ಮೂಲಕ ವರದಿಯನ್ನು ತಮಗೆ ನೀಡಬೇಕು ಎಂದು ಸೂಚಿಸಿದರು.ಎಲ್ಲ ಎಂಟು ವಲಯಗಳಲ್ಲಿ ಆಸ್ತಿಗಳಿಗೆ ಪಿಐಡಿ ಸಂಖ್ಯೆಗಳನ್ನು ನೀಡುವಲ್ಲಿ ವಿಳಂಬವಾಗಿರುವುದು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಬಹಿರಂಗಗೊಂಡಿತು. ಇನ್ನೊಂದು ತಿಂಗಳೊಳಗೆ ಪಾಲಿಕೆ ವ್ಯಾಪ್ತಿಯೊಳಗಿನ ಎಲ್ಲ ಆಸ್ತಿಗಳಿಗೆ ಪಿಐಡಿ ಸಂಖ್ಯೆ ನೀಡದಿದ್ದಲ್ಲಿ ಹೊರಗುತ್ತಿಗೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.ನಗರದ ಅನೇಕ ಕಡೆಗಳಲ್ಲಿ ಓಎಫ್‌ಸಿ ಕೇಬಲ್ ಅಳವಡಿಸುವುದಕ್ಕಾಗಿ ರಸ್ತೆ ಅಗೆದಿರುವ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ತಪ್ಪಿತಸ್ಥರ ವಿರುದ್ಧ ಕಾನೂನುರೀತ್ಯ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.ಕಿತ್ತೂರುರಾಣಿ ಚೆನ್ನಮ್ಮ ಆಟದ ಮೈದಾನದ ಕಾಮಗಾರಿ ವಿಳಂಬದ ಬಗ್ಗೆ ಆಡಳಿತ ಪಕ್ಷದ ನಾಯಕ ಎನ್. ನಾಗರಾಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಆರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ಆಟದ ಮೈದಾನವನ್ನು ಸಾರ್ವಜನಿಕ ಬಳಕೆಗೆ ಸಮರ್ಪಿಸಲಾಗುವುದು ಎಂಬ ಅಧಿಕಾರಿಗಳ ಉತ್ತರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಮೇಯರ್ , ಇನ್ನು 3  ತಿಂಗಳೊಳಗೆ ಕಾಮಗಾರಿ ಮುಗಿಸುವಂತೆ ನಿರ್ದೇಶನ ನೀಡಿದರು.ಸೂಕ್ತ ಕ್ರಮ ಜರುಗಿಸುವ ಎಚ್ಚರಿಕೆ:ವಿಡಿಯೋ ಕಾನ್ಫರೆನ್ಸ್‌ನಲ್ಲಿ ಅಧಿಕಾರಿಗಳು ಅಸಮರ್ಪಕ ಉತ್ತರ ನೀಡಿದ ಬಗ್ಗೆ ಬೇಸರ ವ್ಯಕ್ತಪಡಿಸಿದ ಮೇಯರ್ ವೆಂಕಟೇಶಮೂರ್ತಿ ಹಾಗೂ ಆಡಳಿತ ಪಕ್ಷದ ನಾಯಕ ಎನ್. ನಾಗರಾಜ್, ಮುಂದಿನ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಮರ್ಪಕವಾದ ಉತ್ತರ ನೀಡದಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಕೆಲವು ವಲಯಗಳ ಅಧಿಕಾರಿಗಳಿಗೆ ತಮ್ಮ ವಲಯ ವ್ಯಾಪ್ತಿಯಲ್ಲಿ ಏನೇನು ಕಾಮಗಾರಿಗಳು ನಡೆಯುತ್ತಿವೆ ಎಂಬುದರ ಬಗ್ಗೆ ಅರಿವೇ ಇಲ್ಲ. ಉತ್ತರ ನೀಡಲು ಕೆಲವು ಅಧಿಕಾರಿಗಳು ತಡಬಡಿಸಿದರು. ಇನ್ನು ಮುಂದಾದರೂ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry