ತೆರಿಗೆ ಸುಧಾರಣೆಗೆ ಸಲಹೆ

7

ತೆರಿಗೆ ಸುಧಾರಣೆಗೆ ಸಲಹೆ

Published:
Updated:

ನವದೆಹಲಿ (ಪಿಟಿಐ): ದೇಶದ ವಿತ್ತೀಯ ಕೊರತೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಬಜೆಟ್‌ನಲ್ಲಿ ಅಂದಾಜಿಸಿರುವ ಗುರಿ ಮೀರುವ ಸಾಧ್ಯತೆ ಇರುವುದರಿಂದ ಸೂಕ್ತ ತೆರಿಗೆ ಸುಧಾರಣೆ ತರುವ ಮೂಲಕ ವರಮಾನ ಹೆಚ್ಚುವಂತೆ ಮಾಡಬೇಕು ಎಂದು ಆರ್ಥಿಕ ತಜ್ಞರು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರನ್ನು ಆಗ್ರಹಿಸಿದ್ದಾರೆ.  ಆರ್ಥಿಕ ವೃದ್ಧಿ ದರ (ಜಿಡಿಪಿ) ಹಿಂದಿನ ಗರಿಷ್ಠ ಮಟ್ಟಕ್ಕೆ ಮರಳಲು ತುರ್ತು ಕ್ರಮಕೈಗೊಳ್ಳಬೇಕು. ಪ್ರಸಕ್ತ ಬಾರಿಯ ಬಜೆಟ್ ನೀತಿಗಳು ಸುಸ್ಥಿರ ಆರ್ಥಿಕ ಪ್ರಗತಿಗೆ ಮುನ್ನುಡಿ ಬರೆಯಬೇಕು. ಸಂಪನ್ಮೂಲ ಕ್ರೋಡಿಕರಣ ಮತ್ತು ವಿತ್ತೀಯ ಕೊರತೆ ತಗ್ಗಿಸಲು ಸರ್ಕಾರ ಗಂಭೀರವಾಗಿ ಪ್ರಯತ್ನಿಸುತ್ತಿದೆ ಎನ್ನುವುದು ಜಗತ್ತಿಗೆ ಮನವರಿಕೆ ಆಗಬೇಕು~ ಎಂದು  ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ಪ್ರಧಾನ ಕಾರ್ಯದರ್ಶಿ ರಾಜೀವ್ ಕುಮಾರ್, ಪ್ರಣವ್ ಅವರೊಂದಿಗೆ ಬುಧವಾರ ನಡೆದ ಬಜೆಟ್ ಪೂರ್ವ ಸಭೆಯಲ್ಲಿ ಹೇಳಿದ್ದಾರೆ.ಕಳೆದ ವರ್ಷದ ಬಜೆಟ್‌ನಲ್ಲಿ ಸರ್ಕಾರ ಪ್ರಸಕ್ತ ವರ್ಷದ ವರಮಾನ ಮತ್ತು ವೆಚ್ಚದ ನಡುವಿನ ಅಂತರವು `ಜಿಡಿಪಿ~ಯ ಶೇ 4.6ರಷ್ಟು ಇರಲಿದೆ ಎಂದು ಹೇಳಿತ್ತು. ಆದರೆ, ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಷೇರು ವಿಕ್ರಯಕ್ಕೆ ಹಿನ್ನಡೆ ಉಂಟಾಗಿರುವುದು, ಆಹಾರ, ತೈಲ, ರಸಗೊಬ್ಬರ ಸಬ್ಸಿಡಿ ಹೆಚ್ಚಿರುವುದರಿಂದ ವಿತ್ತೀಯ ಕೊರತೆಯು ಶೇ 5.6ಕ್ಕೆ ಹೆಚ್ಚುವ ಸಾಧ್ಯತೆ ಇದೆ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿಯ ಸದಸ್ಯ ಎಂ ಗೋವಿಂದ ರಾವ್ ಅಭಿಪ್ರಾಯಪಟ್ಟಿದ್ದಾರೆ.ವಿತ್ತೀಯ ಕೊರತೆಯು ಪ್ರಸಕ್ತ ವರ್ಷ ಶೇ 1ರಷ್ಟು ಹೆಚ್ಚುವುದರಿಂದ ಹಲವು ಆರ್ಥಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ತೆರಿಗೆ ಸುಧಾರಣೆ ತರುವ ಮೂಲಕ, ಈ ಅಂತರವನ್ನು ಶೇ 4.1ಕ್ಕೆ ತಗ್ಗಿಸಬೇಕು ಎಂದು ರಾವ್ ಸಲಹೆ ನೀಡಿದ್ದಾರೆ.  ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಗರಿಷ್ಠ ಬಡ್ಡಿ ದರದಿಂದ ಹೂಡಿಕೆಗೆ ಹಿನ್ನಡೆ ಉಂಟಾಗಿದ್ದು, `ಜಿಡಿಪಿ~ ತೀವ್ರವಾಗಿ ಇಳಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರವು ದೇಶದ ಚಿಲ್ಲರೆ ಬಹುಬ್ರಾಂಡ್ ವಹಿವಾಟು ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಬೇಕು ಎಂದೂ ಉದ್ಯಮ ಮುಖಂಡರು ಪ್ರಣವ್ ಅವರಿಗೆ ಮನವಿ  ಸಲ್ಲಿಸಿದ್ದಾರೆ.ಸರ್ಕಾರವು ನೇರ ಮತ್ತು ಪರೋಕ್ಷ ತೆರಿಗೆ ನೀತಿಗಳಲ್ಲಿ ಸುಧಾರಣೆ ತರಲು ಶ್ರಮಿಸುತ್ತಿದೆ. ನೇರ ತೆರಿಗೆ ಕಾಯ್ದೆ (ಡಿಟಿಸಿ) ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆಯು ಸದ್ಯಕ್ಕೆ  ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಪರಿಶೀಲನೆಯಲ್ಲಿದೆ ಎಂದು ಸಚಿವಾಲಯ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry