ಶನಿವಾರ, ಏಪ್ರಿಲ್ 17, 2021
31 °C

ತೆರೆದಷ್ಟೂ ಚಿತ್ರಪಟ!

ಸಾಕ್ಷಿ Updated:

ಅಕ್ಷರ ಗಾತ್ರ : | |

ಕಡಲಿನ ಅಂಚಿನಲ್ಲಿ ಸೂರ್ಯ ಮುಳುಗುತ್ತಿದ್ದಾನೆ. ಉಹುಂ, ಸೂರ್ಯ ಮುಳುಗುತ್ತಿರುವುದು ಕಡಲಿನ್ಲ್ಲಲಿ ಅಲ್ಲ, ತನ್ನೊಳಗೇ ಎನ್ನುವಂತೆ ಪುಳಕಗೊಂಡಿದೆ ಕಡಲು. ಅದರ ಒಡಲ ತುಂಬ ಸೂರ್ಯನ ಕಿತ್ತಳೆ ರಂಗು. ಮುಗಿಲಿನಲ್ಲಿ ಸೂರ್ಯಾಸ್ತ, ಕಡಲಿನೊಳಗೆ ಅದರ ಪ್ರತಿಬಿಂಬ. ಇತ್ತ ಕಡಲಿನ ದಂಡೆಯಲ್ಲಿ ನಿಂತಿದ್ದಾನೆ ಏಕಾಂಗಿ. ಆತ ಸೌಂದರ್ಯ ಉಪಾಸಕನೇ? ಗೊತ್ತಿಲ್ಲ. ಊರುಗೋಲು, ಮೊಂಡು ಕಾಲು ನೋಡಿದರೆ ಆತನ ಪರಿಸ್ಥಿತಿ ಮರುಕ ಹುಟ್ಟಿಸುವಂತಿದೆ. ಈ ಚಿತ್ರ ನೋಡಿದ ಸಹೃದಯರೊಬ್ಬರ ಉದ್ಗಾರ - `ಒಂದು ಕಡೆ ಸೌಂದರ್ಯ, ಇನ್ನೊಂದು ಕಡೆ ದೌರ್ಬಲ್ಯ... ವ್ಹಾ!~. ಈ ಪ್ರತಿಕ್ರಿಯೆ, ಮೆಚ್ಚುಗೆ ಹಾಗೂ ವಿಷಾದ ಎರಡನ್ನೂ ಧ್ವನಿಸುವಂತಿದೆ ಅಲ್ಲವೇ?

ಸಹೃದಯರ ಪ್ರತಿಕ್ರಿಯೆ ಮತ್ತೂ ಮುಂದುವರೆಯುತ್ತದೆ- “ನಿಮ್ಮ ಫೋಟೊಗ್ರಫಿಗೆ `ದೃಷ್ಟಿ~ ಬೀಳದಿರಲಿ”.ಹೀಗೆ, ಸಹೃದಯರಿಂದ `ದೃಷ್ಟಿ~ ನಿವಾಳಿಸಿಕೊಳ್ಳುವಷ್ಟು ಮೆಚ್ಚುಗೆಗೆ ಒಳಗಾದ ಛಾಯಾಚಿತ್ರಕಾರ ಜಿ.ಎಚ್. ದಿಗ್ವಾಸ್. ಯಾರೀ ಚಿತ್ರ ಕಲಾವಿದ? ಉಹುಂ, ಪರಿಚಯ ಅಸ್ಪಷ್ಟ. ಊರು ಶಿರಸಿ. ತಳ ಊರಿರುವುದು ಬೆಂಗಳೂರಿನಲ್ಲಿ. ತಾನು ತನ್ನಿಷ್ಟ ಎನ್ನುವ ಹಾಗೆ ಬದುಕುತ್ತಿರುವಂತೆ ಕಾಣಿಸುವ ದಿಗ್ವಾಸ್‌ಗೆ ಛಾಯಾಗ್ರಹಣದಲ್ಲಿ ಇನ್ನಿಲ್ಲದಷ್ಟು ಆಸಕ್ತಿ.

 

ಕ್ಯಾಮೆರಾ ಹೆಗಲಿಗೇರಿಸಿಕೊಂಡ ಮೇಲೆ ನಿಂತಲ್ಲಿ ನಿಲಲಾದೀತೆ? ಹಾಗಾಗಿ, ದಿಗ್ವಾಸ್ ಅವರನ್ನು ಅಲೆಮಾರಿ ಎಂದೂ ಕರೆಯಬಹುದು. ಪರಿಚಯ ಇದಿಷ್ಟಕ್ಕೆ ಸೀಮಿತ. ಉಳಿದಂತೆ ಛಾಯಾಚಿತ್ರಗಳೇ ಮಾತನಾಡಬೇಕು. ನಾವು ಎದೆತುಂಬಿಸಿಕೊಳ್ಳಬೇಕು.`ಚಿತ್ರಪಟ~ (chithrapata.blogspot.in)  ದಿಗ್ವಾಸ್‌ರ ಬ್ಲಾಗಿನ ಹೆಸರು. ಶೀರ್ಷಿಕೆಯೇ ಹೇಳುವಂತೆ ಇದು ಛಾಯಾಚಿತ್ರಗಳ ಸಂಪುಟ. ಒಂದು ಛಾಯಾಚಿತ್ರ ನೂರು ಶಬ್ದಗಳಿಗೆ ಸಮ ಎನ್ನುವ ಮಾತಿದೆ. ಇಲ್ಲೋ ನೂರಾರು ಛಾಯಾಚಿತ್ರ.ಈ ಚಿತ್ರಗಳ ಮೆರವಣಿಗೆಯಲ್ಲಿ ಅಕ್ಷರಗಳು ನಾಚಿಕೊಂಡಂತೆ ಚಿತ್ರಶೀರ್ಷಿಕೆಗಷ್ಟೇ ಸೀಮಿತವಾಗಿವೆ. ಕೆಲವು ಚಿತ್ರಗಳಿಗೆ ಶೀರ್ಷಿಕೆಗಳೂ ಇಲ್ಲ. ಉಳಿದಂತೆ ಕಾಮೆಂಟಿಗರ ಕಾಮೆಂಟುಗಳ ರೂಪದಲ್ಲಿ ಬರವಣಿಗೆಯನ್ನು ಕಾಣಬಹುದು. ಆ ಕಾಮೆಂಟುಗಳು ಕೂಡ ಚುಟುಕು ಮತ್ತು ಚಿತ್ರವತ್ತು.ದಿಗ್ವಾಸರ ಬ್ಲಾಗನ್ನು ಚಿತ್ರಗಳ ಮೂಲಕವೇ ಪರಿಚಯಿಸಿಕೊಳ್ಳಬೇಕು. ಬೀಳುತ್ತಿರುವ ಗರಿಯೊಂದರ ಚಿತ್ರವಿದೆ. ಈ ಗರಿ, ಬೇಂದ್ರೆಯವರ `ಗರಿ~ ಕವಿತೆಯನ್ನು ನೆನಪಿಸುವಂತಿದೆ. ಕಾಣುವುದು ಗರಿಯಷ್ಟೇ ಆದರೂ, ಅದರ ಹಿಂದೆ ಹಕ್ಕಿಯೊಂದರ ಬದುಕೂ ಇದೆ, ಅದು ಒಳಗಣ್ಣಿಗೆ ಗೋಚರಿಸುವಂತಿದೆ. (ನವಿಲುಗರಿಯ ಚಿತ್ರವನ್ನೂ ತೆಗೆಯಿರಿ ಎನ್ನುವುದು ಒಂದು ಕಾಮೆಂಟಿನಲ್ಲಿನ ಮನವಿ).`ಯಕ್ಷಗಾನದ ಕೆಲವು ಮುಖಭಾವನೆಗಳು~ ಶೀರ್ಷಿಕೆಯಡಿಯ ಕೆಲವು ಚಿತ್ರಗಳು ಯಕ್ಷಲೋಕದ ಸಿರಿತುಣುಕೊಂದನ್ನು ಬ್ಲಾಗಿನಲ್ಲಿ ಅಂಟಿಸಿದಂತಿದೆ. ಈ ಚಿತ್ರಗಳಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಮಂಟಪ ಉಪಾಧ್ಯಾಯ ಮತ್ತು ಸದಾನಂದ ಹೆಗಡೆ ಅವರನ್ನು ಕಾಣಬಹುದು.`ಚಿತ್ರಪಟ~ದ ಅನೇಕ ಚಿತ್ರಗಳು ಒಂದು ಕವಿತೆಯಂತೆಯೇ ಮುಖಾಮುಖಿಯಾಗುತ್ತವೆ. ಆಕಾಶದ ನೀಲಿಯೂ ನೀರ ನೀಲಿಯೂ ಒಂದೇ ಆಗಿರುವ ಚಿತ್ರವನ್ನು ನೋಡಿ. ಇಡೀ ಜಗತ್ತೇ ನೀಲಮಯವೆಂದು ಭ್ರಮೆ ಹುಟ್ಟಿಸುವ ಈ ಚಿತ್ರದಲ್ಲಿ ನೀಲಿಯನ್ನೇ ಹುಟ್ಟು ಹಾಕುತ್ತಿರುವಂತೆ ದೋಣಿಯೊಂದು ಕಾಣಿಸುತ್ತಿದೆ.

ಬದಿಗೊಂದು ಕಪ್ಪನೆ ಗುಡ್ಡ ಹಾಗೂ ಅದರ ಅಂಗಳದಲ್ಲೊಂದು ಮರವಿದೆ. ಅವೆರಡರ ನೆರಳೂ ನೀರಲ್ಲಿದೆ. ಹೀಗೆ, ಅನೇಕ ಪ್ರತಿಮೆಗಳನ್ನು ಒಟ್ಟಿಗೆ ಹೆಣೆದಂತಿರುವ ಈ ನೀಲರೂಪಕ ಕವಿತೆಯಲ್ಲದೆ ಮತ್ತಿನ್ನೇನು?ದಿಗ್ವಾಸರ ಬಹುತೇಕ ಚಿತ್ರಗಳಲ್ಲಿ ಒಡೆದು ಕಾಣಿಸುವ ಅಂಶಗಳು ಎರಡು- ಏಕಾಂತ ಮತ್ತು ಮೌನ. ಇವೆರಡೂ ಪ್ರಕೃತಿಗೆ ಸಂಬಂಧಿಸಿದ್ದೂ ಹೌದು, ಮನುಷ್ಯ ಪ್ರಕೃತಿಗೆ ಸಂಬಂಧಿಸಿದ್ದೂ ಹೌದು. ಚಿತ್ರಗಳ ಬಗ್ಗೆ ಹೆಚ್ಚು ಹೇಳುವುದೇನಿದೆ... ಚಿತ್ರಪಟದ ಬಾಗಿಲು ಎಲ್ಲರಿಗೂ ಮುಕ್ತವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.