ಬುಧವಾರ, ನವೆಂಬರ್ 20, 2019
20 °C

ತೆರೆದ ಚರಂಡಿ: ಅಪಾಯಕ್ಕೆ ಆಹ್ವಾನ

Published:
Updated:
ತೆರೆದ ಚರಂಡಿ: ಅಪಾಯಕ್ಕೆ ಆಹ್ವಾನ

ಮಂಡ್ಯ: ನಗರದ ಕಲ್ಲಹಳ್ಳಿ (ವಿ.ವಿ.ನಗರ) ಹಾಗೂ ಪಿಇಎಸ್ ಕಾನೂನು ಕಾಲೇಜು ಆವರಣ ಗೋಡೆ ಪಕ್ಕದ ರಸ್ತೆಯಲ್ಲಿ ದೊಡ್ಡ ಚರಂಡಿಯೊಂದು ಹರಿದು ಹೋಗುತ್ತದೆ. ಆ ರಸ್ತೆಯಲ್ಲಿ ಸಂಚರಿಸುವವರು ಕೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸಬೇಕಾದ ಸ್ಥಿತಿ ಇದೆ.ಎಂಟು ಅಡಿಯಷ್ಟು ಅಗಲವಿದ್ದರೆ, ಹೆಚ್ಚು ಕಡಿಮೆ ಅಷ್ಟೇ ಆಳವೂ ಇದೆ. ಆದರೆ ಅದರ ಮೇಲೆ ಕಾಂಕ್ರಿಟ್ ಹಾಕದೆ ತೆರೆದ ಸ್ಥಿತಿಯಲ್ಲಿ ಹಾಗೆಯೇ ಬಿಡಲಾಗಿದೆ. ವಾಹನಗಳ ವೇಗ, ಬ್ಯಾಲೆನ್ಸ್‌ನಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವಕ್ಕೆ ಅಪಾಯ ಖಂಡಿತ.ವಿ.ವಿ. ನಗರ, ಮರಿಗೌಡ ಬಡಾವಣೆಯ ಕೆಲವು ಭಾಗದ ಜನರು ವಾಹನಗಳಲ್ಲಿ ಈ ರಸ್ತೆಯ ಮೂಲಕವೇ ಸಂಚರಿಸುತ್ತಾರೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಆಟೊಗಳೂ ಅಲ್ಲಿಯೇ ಸಂಚರಿಸುತ್ತವೆ.ಚರಂಡಿಗೆ ಹೊಂದಿಕೊಂಡಂತೆಯೇ ಅಲ್ಲಿ ಸಾಕಷ್ಟು ಮನೆಗಳೂ ಇವೆ. ಅವರೂ ಚರಂಡಿ ದಾಟಲು ಪರದಾಡಬೇಕಾದ ಸ್ಥಿತಿ ಇದೆ. ಮನೆಗಳವರೇ ಒಂದಷ್ಟು ವ್ಯವಸ್ಥೆ ಮಾಡಿಕೊಂಡಿದ್ದು ಬಿಟ್ಟರೆ, ಸೂಕ್ತ ವ್ಯವಸ್ಥೆ ಆಗಿಲ್ಲ.ಮಳೆಗಾಲ ಬಂದಾಗ ಚರಂಡಿಯಲ್ಲಿ ಬಹಳಷ್ಟು ನೀರು ಹರಿಯುತ್ತದೆ. ಅಂಥ ಸಂದರ್ಭದಲ್ಲಿ ಕಾಲು ಜಾರಿ ಬಿದ್ದರೆ, ಬಿದ್ದದ್ದು ಗೊತ್ತಾಗದೇ ಇರುವಂಥ ಸ್ಥಿತಿ ಇದೆ. ಅಲ್ಲಿರುವ ರಸ್ತೆಯ ತಿರುವು ಬಹಳ ಅಪಾಯಕಾರಿಯಾಗಿದೆ. ಆವರಣದ ಗೋಡೆ ಇರುವುದರಿಂದ ಇನ್ನೊಂದು ಕಡೆಯಿಂದ ಬರುವವರು ಕಾಣುವುದೇ ಇಲ್ಲ. ಸ್ವಲ್ಪ ಮೈಮರೆತರೂ ಅಪಘಾತ ಗ್ಯಾರಂಟಿ.ರಸ್ತೆಯ ಅಗಲ ಕಡಿಮೆ ಇರುವುದರಿಂದ ಎರಡೂ ಕಡೆಯಿಂದ ನಾಲ್ಕು ಚಕ್ರದ ವಾಹನಗಳು ಬಂದರೆ ಟ್ರಾಫಿಕ್ ಜಾಮ್ ಆಗುತ್ತದೆ. ಚರಂಡಿ ಮೇಲೆ ಕಾಂಕ್ರಿಟ್ ಹಾಕಿದರೆ ರಸ್ತೆ ಅಗಲವಾಗಿ ಸಂಚಾರಕ್ಕೆ ಒಂದಷ್ಟು ಅನುಕೂಲವಾಗುತ್ತದೆ.ಚರಂಡಿ ದೊಡ್ಡದಾಗಿದೆ. ಜತೆಗೆ ಅಪಾಯಕಾರಿಯಾಗಿಯೂ ಇದೆ. ಆದರೆ ಅದಕ್ಕೊಂದು ತಡೆಗೋಡೆಯನ್ನು ನಿರ್ಮಿಸುವ ಕೆಲಸ ನಗರಸಭೆಯಿಂದ ಆಗಿಲ್ಲ. ಚರಂಡಿಗೆ ಕಾಂಕ್ರಿಟ್ ಹಾಕುವ ಕೆಲಸ ಆಗಬೇಕು. ಆಗ ನಮಗೂ, ವಾಹನಗಳಲ್ಲಿ ಸಂಚರಿಸುವ ಜನರಿಗೂ ಅನುಕೂಲವಾಗುತ್ತದೆ ಎನ್ನುತ್ತಾರೆ ಅಲ್ಲಿಯ ಜನತೆ.

ಪ್ರತಿಕ್ರಿಯಿಸಿ (+)