ತೆರೆಮರೆಗೆ ಸಮಾಜವಾದದ ಇನ್ನೊಂದು ಅಧ್ಯಾಯ

7

ತೆರೆಮರೆಗೆ ಸಮಾಜವಾದದ ಇನ್ನೊಂದು ಅಧ್ಯಾಯ

Published:
Updated:
ತೆರೆಮರೆಗೆ ಸಮಾಜವಾದದ ಇನ್ನೊಂದು ಅಧ್ಯಾಯ

ಇತ್ತೀಚೆಗೆ (ಮೇ 11, 2012) ಹೃದಯಾಘಾತದಿಂದ ನಿಧನರಾದ ಹುಗಲವಳ್ಳಿ ಸುರೇಂದ್ರ ಅವರ ಕಣ್ಮರೆಯೊಂದಿಗೆ ಶಿವಮೊಗ್ಗ ಜಿಲ್ಲೆಯ ಸಮಾಜವಾದದ ಚಳವಳಿಯ ಕೊಂಡಿಯೊಂದು ಕಳಚಿದಂತಾಯಿತು.

 

ಶಿವಮೊಗ್ಗ ಸಮೀಪದ ಹೊಳೆಹೊನ್ನೂರು ತಾಲ್ಲೂಕಿನ ಕನಸಿನಕಟ್ಟೆಯ ತಮ್ಮ ಜಮೀನಿನಿಂದ ತೆಂಗಿನಕಾಯಿ ಸಾಗಿಸುವಾಗ, ಟಿಲ್ಲರ್ ಓಡಿಸುವಾಗಲೇ ಸುರೇಂದ್ರ ಕುಸಿದುಬಿದ್ದರಂತೆ.

 

ಇದ್ದಕ್ಕಿದ್ದಂತೆ ಎರಗಿದ ಹೃದಯಾಘಾತ ಬದುಕುವ ಕಿಂಚಿತ್ ಅವಕಾಶಕ್ಕೂ ಎಡೆಮಾಡಿಕೊಡಲಿಲ್ಲ. ರಾಜಧಾನಿಯ ರಾಜಕೀಯ ಪಲ್ಲಟದ ಅಬ್ಬರದ ಮಧ್ಯೆ ಅವರ ಸಾವು ಸುದ್ದಿಯಾಗಲಿಲ್ಲ. ಇದು ಇತ್ತೀಚಿನ ದಿನಗಳಲ್ಲಿ ವಿಶೇಷವೇನೂ ಅಲ್ಲ.ಶಿವಮೊಗ್ಗ ಜಿಲ್ಲೆಯಲ್ಲಿ ಸುದ್ದಿಯಾಗದೆ ಉಳಿದ ನೂರಾರು ಅಪ್ಪಟ ಸಮಾಜವಾದಿಗಳಿದ್ದಾರೆ. ಶಾಂತವೇರಿ ಗೋಪಾಲಗೌಡರ ಜೊತೆಗೆ ಅವರ ಚಳವಳಿಯೊಂದಿಗೆ ಗುರುತಿಸಿಕೊಂಡಿದ್ದ ಇವರೆಲ್ಲ ಆಧುನಿಕ ರಾಜಕಾರಣದ ಭರಾಟೆಗೆ ಹೆದರಿ ತಮ್ಮ ಪಾಡಿಗೆ ತಾವು ಮಾನವಂತರಾಗಿ ಬದುಕಿದವರು; ಹಲವರು ಸುದ್ದಿಯಾಗದೇ ಅಸುನೀಗಿದವರು. ಅಂಥವರಲ್ಲಿ ಸುರೇಂದ್ರ ಕೂಡ ಒಬ್ಬರು.1938ರಲ್ಲಿ ಹುಗಲವಳ್ಳಿಯಲ್ಲಿ ಜನಿಸಿದ ಸುರೇಂದ್ರ ಅತಿ ಚಿಕ್ಕ ವಯಸ್ಸಿನಲ್ಲೇ ತಮ್ಮ ತಂದೆಯ ಜಮೀನುದಾರಿಕೆಯ ಜವಾಬ್ದಾರಿ ಹೊರಬೇಕಾಯಿತು. ತೀರ್ಥಹಳ್ಳಿಯಲ್ಲಿ ಓದುವಾಗಲೇ, ಸ್ವಾತಂತ್ರ್ಯದ ಬಗ್ಗೆ ಅಷ್ಟೇನೂ ತಿಳಿವಳಿಕೆಯಿಲ್ಲದಿದ್ದರೂ ಹೋರಾಟದ ಮೆರವಣಿಗೆಯಲ್ಲಿ ಭಾಗವಹಿಸುವ ಉತ್ಸಾಹ ತೋರುತ್ತಿದ್ದರು. 9ನೇ ವಯಸ್ಸಿನಲ್ಲಿ ಶುರುವಾದ ಈ ಹೋರಾಟದ ಹಂಬಲ ನಂತರ ಶಾಂತವೇರಿ ಗೋಪಾಲಗೌಡರ ಸಮಾಜವಾದಿ ಚಳವಳಿಯವರೆಗೂ ಮುಂದುವರಿಯಿತು.ಶಾಂತವೇರಿ ಗೋಪಾಲಗೌಡರು ಗೇಣಿದಾರರ ಕುಟುಂಬದಲ್ಲಿ ಜನಿಸಿದವರು. ಆದರೆ, ಹುಗಲವಳ್ಳಿ ಸುರೇಂದ್ರ ಅಪ್ಪಟ ಜಮೀನುದಾರರ ಮನೆಯ ಹುಡುಗ. ಆದರೂ ಗೋಪಾಲಗೌಡರ ಭಾಷಣ, ತತ್ವ ಸಿದ್ಧಾಂತಗಳು, ಲೋಹಿಯಾ ಅವರ ಚಿಂತನೆಗಳು ಸುರೇಂದ್ರರ ಮನದಲ್ಲಿ ಅಚ್ಚೊತ್ತಿ ನಿಂತವು.ಸುರೇಂದ್ರರ ತಂದೆ ದಾಸಪ್ಪಗೌಡರಿಗೆ ನೂರಾರು ಎಕರೆ ಜಮೀನಿತ್ತು. ಅಜ್ಜನ ಜೊತೆ ಗೇಣಿ ಭತ್ತ ತರಲು ಗೇಣಿದಾರರ ಮನೆಗೆ ಚಿಕ್ಕಂದಿನಿಂದ ಹೋಗುತ್ತಿದ್ದ ಸುರೇಂದ್ರನಿಗೆ ಗೇಣಿದಾರರ ಬವಣೆ, ಜಮೀನುದಾರರ ದುರಾಸೆ, ಅಟ್ಟಹಾಸಗಳೆಲ್ಲ ಮನವರಿಕೆಯಾಗಿದ್ದವು.

 

ವರ್ಷವೆಲ್ಲ ಕಷ್ಟಪಟ್ಟು ಬೆಳೆ ಬೆಳೆದ ರೈತರು, ತಮಗೆ ತಮ್ಮ ಮಕ್ಕಳಿಗೆ ಏನೂ ಉಳಿಸಿಕೊಳ್ಳದೆ ಜಮೀನುದಾರರ `ಕಣಜ~ ತುಂಬುವುದು ಅವರಿಗೆ ಆಘಾತಕಾರಿ ವಿಷಯವಾಗಿ ಕಂಡಿತು.ಮನೆಯ ಜವಾಬ್ದಾರಿ ವಹಿಸಿಕೊಂಡ ಸಂದರ್ಭದಲ್ಲೇ ಸುರೇಂದ್ರ, ಗೋಪಾಲಗೌಡರ ಅನುಯಾಯಿಯಾಗಿ ಸಮಾಜವಾದಿ ಪಕ್ಷದ ಕಾರ್ಯಕರ್ತರಾದರು. `ಉಳುವವನೇ ನೆಲದೊಡೆಯ~ ಅನ್ನುವ ಸಮಾಜವಾದಿ ಸಿದ್ಧಾಂತದ ಅನುಷ್ಠಾನವನ್ನು ಜಮೀನುದಾರರಾಗಿ ತಮ್ಮಿಂದಲೇ ಮೊದಲು ಆರಂಭಿಸಿಬಿಟ್ಟರು. ತೀರ್ಥಹಳ್ಳಿ ತಾಲ್ಲೂಕಿನ ಹುಗಲವಳ್ಳಿಯ ಗೇಣಿ ಜಮೀನನ್ನೆಲ್ಲ ಸಂಬಂಧಪಟ್ಟ ಗೇಣಿದಾರರ ಹೆಸರಿಗೆ ಬರೆದು ಹೊಸತೊಂದು ಅಧ್ಯಾಯ ಆರಂಭಿಸಿಬಿಟ್ಟರು.ಇಡೀ ತೀರ್ಥಹಳ್ಳಿ ತಾಲ್ಲೂಕಿನ ಇತಿಹಾಸದಲ್ಲಿ `ಸ್ವಯಂಪ್ರೇರಿತ~ರಾಗಿ ಸಮಾಜವಾದಿ ಚಿಂತನೆಯನ್ನು ಚಾಲನೆಗೆ ತಂದ ಉದಾಹರಣೆ ಇದೇ ಮೊದಲನೆಯದು. ಬಹುಶಃ ಇದೇ ಕಡೆಯದೂ ಇರಬಹುದು.ಗೋಪಾಲಗೌಡರ ಮೆಚ್ಚಿನ ಶಿಷ್ಯರಾಗಿ, ಸಮಾಜವಾದಿ ಪಕ್ಷದ ಕಾರ್ಯದರ್ಶಿಯಾಗಿ ಗೌಡರ ಎಲ್ಲ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರು ಸುರೇಂದ್ರ.1972ರ ಚುನಾವಣೆಯ ಸಂದರ್ಭದಲ್ಲಿ ಗೋಪಾಲಗೌಡರು ತೀವ್ರ ಅಸ್ವಸ್ಥರಾಗಿದ್ದಾಗ ತೀರ್ಥಹಳ್ಳಿ ಕ್ಷೇತ್ರಕ್ಕೆ ಸಮಾಜವಾದಿ ಪಕ್ಷದಿಂದ ಸೂಚಿತವಾದ ಎರಡು ಹೆಸರುಗಳಲ್ಲಿ ಸುರೇಂದ್ರರದೂ ಒಂದು. ಇನ್ನೊಂದು ಹೆಸರು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರದು.

ತೇಜಸ್ವಿಯವರು ಒಲ್ಲೆ ಎಂದರು. ಹೊಳೆಹೊನ್ನೂರಿನ ಕನಸಿನಕಟ್ಟೆಯಲ್ಲಿ ಜಮೀನು ಕೊಂಡು, ರೈತಾಪಿ ಕೆಲಸದ ಒತ್ತಡವಿದ್ದುದರಿಂದ  ಸುರೇಂದ್ರ ಅವರೂ ಒಪ್ಪಲಿಲ್ಲ. ಕೋಣಂದೂರು ಲಿಂಗಪ್ಪನವರು ಗೋಪಾಲಗೌಡರ ನಂತರ ಶಾಸಕರಾಗಿ ಆಯ್ಕೆಯಾದರು.ಗೋಪಾಲಗೌಡರ ಸಾವಿನ ನಂತರ ಸಮಾಜವಾದಿ ಚಳವಳಿ ತುಸು ಕಾವು ಕಳೆದುಕೊಂಡು ಗೌಡರ ಜೊತೆಗಿದ್ದವರನ್ನು ಹಿಂಜರಿಯುವಂತೆ ಮಾಡಿತು. ಶಾಸಕರಾದವರು ಬೇರೆ ಬೇರೆ ಪಕ್ಷ ಸೇರಿದರು. ನಿಸ್ವಾರ್ಥದ ಕಾರ್ಯಕರ್ತರು ಸಪ್ಪಗಾದರು. ಸುರೇಂದ್ರ ತಮ್ಮ ಹುಗಲವಳ್ಳಿ ಊರನ್ನೇ ಬಿಟ್ಟು ಕನಸಿನ ಕಟ್ಟೆಯ ನಿವಾಸಿ ಆದರು.1989ರಲ್ಲಿ ಹಳೆಯ ಸಮಾಜವಾದಿಗಳಿಗೆಲ್ಲ ಮತ್ತೆ ಹುರುಪು ಬಂದು ಸುರೇಂದ್ರ ಅವರನ್ನು ತೀರ್ಥಹಳ್ಳಿಯಿಂದ ಕಣಕ್ಕಿಳಿಸಿದರು. ಆದರೆ ಗೋಪಾಲಗೌಡರ ಚುನಾವಣೆಗೂ ಸುರೇಂದ್ರ ಚುನಾವಣೆಗೆ ನಿಂತ ಸಂದರ್ಭಕ್ಕೂ ಅಜಗಜ ವ್ಯತ್ಯಾಸವಿತ್ತು. ಹಣ, ಹೆಂಡ, ಅಬ್ಬರದ ಮುಂದೆ ಸುರೇಂದ್ರರು ಗೆಲ್ಲಲಾಗಲಿಲ್ಲ. ಆದರೆ ಈ ಸ್ಪರ್ಧೆಯಿಂದ ಹಳೆಯ ಸಮಾಜವಾದಿ ಚಿಂತಕರಲ್ಲಿ ಹೊಸ ಚೈತನ್ಯವಂತೂ ಮೂಡಿತ್ತು.

 

ಸುರೇಂದ್ರ ಅವರಿಗೆ ಈ ಚುನಾವಣೆಯ ಸಂದರ್ಭದಲ್ಲಿ ಹಲವರು ಅಲ್ಪಸ್ವಲ್ಪ ಧನಸಹಾಯ ಮಾಡಿದ್ದರು. ಚುನಾವಣೆ ಮುಗಿದ ನಂತರ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಒಂದು ಪತ್ರ ಬರೆದು, ಹಣ ಸಹಾಯ ಮಾಡಿದವರಿಗೆಲ್ಲ ಕೊಟ್ಟ ಹಣವನ್ನು ವಾಪಾಸು ಮಾಡಿದರು.ಪಾರದರ್ಶಕ ವ್ಯಕ್ತಿತ್ವ, ನಿಷ್ಕಪಟ, ಅಪ್ಪಟ ನೈತಿಕತೆಯ ಸುರೇಂದ್ರರ ನಿಧನ ತೀರ್ಥಹಳ್ಳಿಯ ಸಮಾಜವಾದಿ ಮನಸ್ಸುಗಳಿಗಂತೂ ಆಘಾತ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry