ಸೋಮವಾರ, ಆಗಸ್ಟ್ 26, 2019
27 °C
ಆಂಧ್ರವಿಭಜನೆ: ಎನ್‌ಇಕೆಆರ್‌ಟಿಸಿ ಬಸ್ ಸಂಚಾರ

ತೆಲಂಗಾಣ ಅಬಾಧಿತ: ಸೀಮಾಂಧ್ರಕ್ಕೆ ಸ್ಥಗಿತ

Published:
Updated:

ಗುಲ್ಬರ್ಗ: ಆಂಧ್ರಪ್ರದೇಶ ವಿಭಜನೆ ವಿರೋಧಿಸಿ ಸೀಮಾಂಧ್ರ (ಉದ್ದೇಶಿತ ರಾಜ್ಯ) ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ (ಎನ್‌ಇಕೆಆರ್‌ಟಿಸಿ)ಯು ಅಲ್ಲಿಗೆ ತೆರಳುವ ಬಸ್ ಸಂಚಾರ ಸ್ಥಗಿತಗೊಳಿಸಿದೆ. ಆದರೆ ಸಂಭ್ರಮಾಚರಣೆಯಲ್ಲಿರುವ ತೆಲಂಗಾಣ ಪ್ರದೇಶಕ್ಕೆ ಎಂದಿನಂತೆ ಬಸ್‌ಗಳು ಓಡಾಟ ನಡೆಸುತ್ತಿವೆ.ಈ ಕುರಿತು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್.ಶಿವಮೂರ್ತಿ, `ಪ್ರಸ್ತಾವಿತ ತೆಲಂಗಾಣ ರಾಜ್ಯದ ಜಹೀರಾಬಾದ್, ಹೈದರಾಬಾದ್, ಮಹಿಬೂಬ ನಗರಕ್ಕೆ ರಾಜ್ಯದ ಬೀದರ್, ಗುಲ್ಬರ್ಗ, ರಾಯಚೂರಿನಿಂದ ಹೋಗುವ ಬಸ್‌ಗಳು ಎಂದಿನಂತೆ ಸಂಚರಿಸುತ್ತಿವೆ. ಆದರೆ ಪ್ರಮುಖ ದೇವಸ್ಥಾನಗಳಾದ ಮಂತ್ರಾಲಯ, ತಿರುಪತಿ ಸೇರಿದಂತೆ ಕರ್ನೂಲ್, ವಿಜಯವಾಡ, ಅನಂತಪುರ, ಚಿತ್ತೂರು, ವಿಶಾಖಪಟ್ಟಣಂ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ' ಎಂದರು.`ಸಿಮಾಂಧ್ರದಲ್ಲಿ ಹಿಂಸಾಚಾರ ಭುಗಿಲೆದ್ದ ವರದಿಗಳಿವೆ. ಆದರೆ ಈ ತನಕ ನಮ್ಮ ಸಂಸ್ಥೆಯ ಯಾವುದೇ ಬಸ್‌ಗಳಿಗೆ ಹಾನಿಯಾಗಿಲ್ಲ. ಮುನ್ನೆಚ್ಚರಿಕೆಯಾಗಿ ಆಂಧ್ರಪ್ರದೇಶದಲ್ಲಿ ಸಂಚರಿಸುತ್ತಿರುವ ಪ್ರತಿ ಬಸ್‌ಗಳ ಮೇಲೆ ನಿಗಾ ವಹಿಸಿದ್ದೇವೆ. ಅಹಿತಕರ ಘಟನೆ ನಡೆದರೆ, ಪ್ರಯಾಣಿಕರಿಗೆ ತೊಂದರೆಯಾಗದಂತೆ ತಕ್ಷಣವೇ ಪರ್ಯಾಯ ವವಸ್ಥೆ ಕೈಗೊಳ್ಳಲು ಸಿದ್ಧರಾಗಿದ್ದೇವೆ' ಎಂದು ಅವರು ಹೇಳಿದರು.  ಈ ಹಿಂದೆ ಪ್ರತ್ಯೇಕ ರಾಜ್ಯ ರಚನೆ ಹೋರಾಟ ಆರಂಭಗೊಂಡ ಸಂದರ್ಭದಲ್ಲಿ ತೆಲಂಗಾಣ ಪ್ರಾಂತ್ಯಕ್ಕೆ ಸಂಚರಿಸುವ ಬಸ್‌ಗಳನ್ನು ಸ್ಥಗಿತಗೊಳಿಸಲಾಗುತ್ತಿತ್ತು.

Post Comments (+)