ತೆಲಂಗಾಣ: ತಿರುಗಿಬಿದ್ದ ಕೇಂದ್ರ ಸಚಿವರು

7

ತೆಲಂಗಾಣ: ತಿರುಗಿಬಿದ್ದ ಕೇಂದ್ರ ಸಚಿವರು

Published:
Updated:

ಹೈದರಾಬಾದ್‌(ಪಿಟಿಐ): ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯನ್ನು ಒಪ್ಪಲಾ­ಗದು ಎಂದಿ­ರುವ ಆಂಧ್ರಪ್ರದೇಶದ ಸೀಮಾಂಧ್ರ ಮತ್ತು ರಾಯಲ­ಸೀಮೆಯನ್ನು ಪ್ರತಿನಿಧಿ­ಸುವ ಕೇಂದ್ರ ಸಚಿವರು ಮತ್ತು ಸಂಸ­ದರು, ‘ಪಕ್ಷಕ್ಕಿಂತ ಜನರು, ಜನರ ಭಾವನೆ ಮುಖ್ಯ’ ಎಂದು ಕಾಂಗ್ರೆಸ್‌ ಹೈಕ­ಮಾಂ­ಡ್‌ಗೆ ಎಚ್ಚರಿಕೆ ನೀಡಿದ್ದಾರೆ. ಈ ಸಚಿವರು ಮತ್ತು ಸಂಸದರು ಶನಿ­ವಾರ ಇಲ್ಲಿ ಎರಡೂವರೆ ತಾಸುಗಳ ಕಾಲ ಸಭೆ ನಡೆಸಿ, ಆಂಧ್ರ ವಿಭಜನೆ ತೀರ್ಮಾನವನ್ನು ಕೈಬಿಡುವಂತೆ ಒತ್ತಾ­ಯಿಸಲು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಶೀಘ್ರದಲ್ಲಿ ಭೇಟಿ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.ಜೊತೆಗೆ, ಆಂಧ್ರದಲ್ಲಿ ಭುಗಿಲೆದಿರುವ ವಿರೋಧವನ್ನು ಶಮನ ಮಾಡಲು ಕಾಂಗ್ರೆಸ್‌ ಹೈಕಮಾಂಡ್‌ ರಚಿಸಿರುವ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರ ನೇತೃತ್ವದ ನಾಲ್ವರು ಸದಸ್ಯರ ಸಮಿತಿ­ಯನ್ನು ಸೀಮಾಂಧ್ರ ಮತ್ತು ರಾಯಲ­ಸೀಮೆಯ ಭಾಗಗಳಿಗೆ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿಯನ್ನು ಸ್ವಯಂ ಅವಲೋ­ಕಿ­ಸುವಂತೆ ಮನವಿ ಮಾಡಿಕೊಳ್ಳಲೂ ತೀರ್ಮಾನಿಸಿದೆ.ಸಭೆ ನಂತರ ಸುದ್ದಿಗಾರರೊಂದಿಗೆ ಮಾತ­ನಾಡಿದ ಜವಳಿ ಸಚಿವ ಕೆ. ಸಾಂಬ­ಶಿವ ರಾವ್‌, ‘ಪ್ರತ್ಯೇಕ ರಾಜ್ಯ ರಚನೆ ಕುರಿ­ತಂತೆ ಸರ್ಕಾರ ಏನಾದರೂ ಮುಂದಿನ ಹೆಜ್ಜೆ ಇರಿಸಿದರೆ ತಾವು ಯಾವುದೇ ತ್ಯಾಗಕ್ಕೂ ಸಿದ್ಧ’ ಎಂದು ಹೇಳಿದರು. ‘ನಾವು ಪಕ್ಷದ ಶಿಸ್ತಿನ ಸಿಪಾಯಿಗಳು ಎಂದು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡುವೆವು. ಆದರೆ, ರಾಜ್ಯದ ಜನರ ಭವಿಷ್ಯವನ್ನು ಹಾಳುಮಾಡು­ವಂ­ತಹ ನಿರ್ಧಾರಕ್ಕೆ ಅವರು ಅಂಟಿಕೊಂಡರೆ ನಾವು ಜನರ ಪರವಾಗಿ ನಿಲ್ಲಲು ಹಿಂಜ­ರಿಯುವುದಿಲ್ಲ. ಈ ವಿಷಯದಲ್ಲಿ ನಮಗೆ ಪಕ್ಷಕ್ಕಿಂತ ಜನರೇ ಮುಖ್ಯ’ ಎಂದರು.ಸಭೆಯಲ್ಲಿ ಸಚಿವರಾದ ಎಂ.ಎಂ. ಪಲ್ಲಂ ರಾಜು, ಡಿ. ಪುರಂದರೇಶ್ವರಿ, ಕೆ. ಚಿರಂಜೀವಿ, ಜೆ.ಡಿ. ಶೀಲಂ ಮತ್ತು ಕೆ. ಸೂರ್ಯಪ್ರಕಾಶ್‌ ರೆಡ್ಡಿ ಮತ್ತು ಸೀಮಾಂಧ್ರ ಹಾಗೂ ರಾಯಲಸೀಮೆ­ಯನ್ನು ಪ್ರತಿನಿಧಿಸುವ ಸಂಸದರು ಭಾಗವಹಿಸಿದ್ದರು. ಈ ಮಧ್ಯೆ, ವಿಶಾಲ ಆಂಧ್ರ ಮಹಾ­ಸಭಾ, ಸಮೈಕಾಂಧ್ರ ಸಂಘಟನೆಗಳು ಪ್ರತಿಭಟನೆಯನ್ನು ತೀವ್ರಗೊಳಿಸಿವೆ. ಈ ಸಂಘಟನೆಯ ಕೆಲವು ತಂಡಗಳು ಕೇಂದ್ರದ ಕೆಲವು ಸಚಿವರ ರಾಜೀ­ನಾಮೆಗೆ ಒತ್ತಾಯಿಸಿ ಅವರ ಮನೆಗಳ ಮುಂದೆ ಧರಣಿ ನಡೆಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry