ಗುರುವಾರ , ಮೇ 19, 2022
20 °C

ತೆಲಂಗಾಣ ಬಂದ್: ರೂ. 5 ಕೋಟಿ ಆದಾಯ ಖೋತಾ!

ವಿಶೇಷ ವರದಿ/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಗೆ ಆಗ್ರಹಿಸಿ ಆಂಧ್ರಪ್ರದೇಶದ `ತೆಲಂಗಾಣ ಜಂಟಿ ಕ್ರಿಯಾ ಸಮಿತಿ~ ಕರೆ ನೀಡಿದ್ದ ಬಂದ್‌ನಿಂದಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೊಕ್ಕಸಕ್ಕೆ ಭಾರಿ ಹೊಡೆತ ಬಿದ್ದಿದೆ. ನಾಲ್ಕು ವಾರಗಳ ಕಾಲ ಸಂಸ್ಥೆಯ ಬಸ್‌ಗಳು ಹೈದರಾಬಾದಿಗೆ ಸಂಚರಿಸದ ಪರಿಣಾಮ, ಸುಮಾರು 5 ಕೋಟಿ ರೂಪಾಯಿ ಆದಾಯ ಖೋತಾ ಆಗಿದೆ!ಗುಲ್ಬರ್ಗ ಮೂಲಕ ಹೈದರಾಬಾದಿಗೆ ಹೊರಡುತ್ತಿದ್ದ ಬಸ್ ಸಂಚಾರವನ್ನು ಸೆ. 20ರಿಂದ ತೆಲಂಗಾಣ ಚಳವಳಿ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಈಶಾನ್ಯ ಸಾರಿಗೆ ಸಂಸ್ಥೆಯ ವ್ಯಾಪ್ತಿಗೆ ಬರುವ ಎಲ್ಲ ವಿಭಾಗಗಳ ಜತೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೆಲವು ವಿಭಾಗಗಳು ಕೂಡ ಬಸ್ ಸಂಚಾರ ನಿಲ್ಲಿಸಿದ್ದವು.“ನಮ್ಮ ಸಂಸ್ಥೆಯ ವ್ಯಾಪ್ತಿಯಲ್ಲಿ ಅತ್ಯಧಿಕ ಆದಾಯ ಬರುವುದು ಹೈದರಾಬಾದ್ ಮಾರ್ಗದ ಬಸ್‌ಗಳಿಂದಲೇ. ತೆಲಂಗಾಣ ಚಳವಳಿಯಿಂದಾಗಿ ಈ ಮಾರ್ಗದಲ್ಲಿ ಸಂಚಾರ ರದ್ದು ಮಾಡಿದ್ದರಿಂದ ಬಹು ದೊಡ್ಡ ನಷ್ಟ ಉಂಟಾಗಿದೆ. ಅದರಲ್ಲೂ ದಸರಾ ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ಆದಾಯ ನಿರೀಕ್ಷಿಸಿದ್ದ ಸಂಸ್ಥೆಯು, ಸಂಚಾರ ಸ್ಥಗಿತದಿಂದ ಹಾನಿ ಅನುಭವಿಸಬೇಕಾಯಿತು” ಎಂದು ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು

.

ವಾಯವ್ಯ ಸಾರಿಗೆ ಸಂಸ್ಥೆ 25, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 25 ಹಾಗೂ ಈಶಾನ್ಯ ಸಾರಿಗೆ ಸಂಸ್ಥೆ 128 ಶೆಡ್ಯೂಲ್‌ಗಳಲ್ಲಿ ಹೈದರಾಬಾದಿಗೆ ನಿತ್ಯ ಸಂಚಾರ ನಡೆಸುತ್ತಿವೆ. ಕೆಲವು ಬಸ್‌ಗಳು ರಾಯಚೂರು ಹಾಗೂ ಅತ್ಯಧಿಕ ಸಂಖ್ಯೆಯ ಬಸ್‌ಗಳು ಗುಲ್ಬರ್ಗ ಮೂಲಕ ಸಂಚರಿಸುತ್ತವೆ. ಸಾರಿಗೆ ಸಂಸ್ಥೆ ಮೂಲಗಳ ಪ್ರಕಾರ, ಗುಲ್ಬರ್ಗ ನಗರದಿಂದ ಹೊರಡುವ ಬಸ್‌ಗಳು ಸುಮಾರು 60,000 ಪ್ರಯಾಣಿಕರನ್ನು ಹೈದರಾಬಾದಿಗೆ ಕರೆದೊಯ್ಯುತ್ತವೆ.ಪ್ರಯಾಣಿಕರ ದಟ್ಟಣೆ: ಉಳಿದೆಲ್ಲ ಮಾರ್ಗಗಳಿಗಿಂತ ಹೈದರಾಬಾದ್ ಮಾರ್ಗದ ಬಸ್‌ಗಳು ಸಾರಿಗೆ ಸಂಸ್ಥೆಗೆ ಹೆಚ್ಚಿನ ಆದಾಯ ಕೊಡುತ್ತವೆ. ಸಾಮಾನ್ಯ ದಿನಗಳಲ್ಲಿ ದಿನಕ್ಕೆ 12ರಿಂದ 15 ಲಕ್ಷ ರೂಪಾಯಿ ಹಾಗೂ ಹಬ್ಬ- ರಜೆಗಳ ಸಮಯದಲ್ಲಿ 20ರಿಂದ 22 ಲಕ್ಷ ರೂಪಾಯಿ ಆದಾಯ ಖಚಿತ. ಬೆಂಗಳೂರು ಹಾಗೂ ಇತರ ರಾಜ್ಯಗಳ ನಗರಗಳಿಗೆ ಖಾಸಗಿ ಬಸ್ ವ್ಯವಸ್ಥೆ ಇದ್ದರೆ, ಹೈದರಾಬಾದಿಗೆ ಕೇವಲ ಬೆರಳೆಣಿಕೆಯಷ್ಟು ಬಸ್ ಓಡಾಡುತ್ತವೆ. ಹೀಗಾಗಿ ಸಾರಿಗೆ ಸಂಸ್ಥೆಯ ವೊಲ್ವೊ, ರಾಜಹಂಸ ಹಾಗೂ ಎಕ್ಸ್‌ಪ್ರೆಸ್ ಬಸ್‌ಗಳು ಸದಾ ಪ್ರಯಾಣಿಕರಿಂದ ತುಂಬಿರುತ್ತವೆ.ಇಂದು ಮತ್ತೆ ಆರಂಭ: ಕಳೆದ ತಿಂಗಳು ಆರಂಭವಾದ ತೆಲಂಗಾಣ ಚಳವಳಿಯ ಸಂದರ್ಭದಲ್ಲಿ ಹೈದರಾಬಾದಿಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್ ದಾಳಿಗೆ ಈಡಾಯಿತು. ತಕ್ಷಣ ಈ ಭಾಗದಿಂದ ಸಂಚಾರ ಸ್ಥಗಿತಗೊಳಿಸಲಾಯಿತು. ವಾತಾವರಣ ತಿಳಿಯಾಗುವವರೆಗೂ ಸಂಚಾರ ನಡೆಸದಿರಲು ಸಾರಿಗೆ ಸಂಸ್ಥೆ ನಿರ್ಧರಿಸಿತ್ತು. ಆಂಧ್ರಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯು ಬಸ್ ಸಂಚಾರ ಆರಂಭಿಸುವ ಹಿನ್ನೆಲೆಯಲ್ಲಿ, ಮಂಗಳವಾರ ಬೆಳಿಗ್ಗೆಯಿಂದ ಗುಲ್ಬರ್ಗದಿಂದ ಹೈದರಾಬಾದಿಗೆ ಸಂಚಾರ ಪುನರಾರಂಭಗೊಳ್ಳಲಿದೆ.“ನಮ್ಮ ಸಂಸ್ಥೆಗಂತೂ ಆರ್ಥಿಕವಾಗಿ ದೊಡ್ಡ ನಷ್ಟ. ಇದೊಂದು ರೀತಿ ತರಕಾರಿ ವ್ಯಾಪಾರ ಇದ್ದಂತೆ. ಹಾಳಾದ ತರಕಾರಿ ಮತ್ತೆ ಮಾರಾಟವಾಗೋಲ್ಲ ಎನ್ನುವ ಹಾಗೆ, ಈ ಹಾನಿಯನ್ನು ಪರ್ಯಾಯ ಮಾರ್ಗಗಳ ಮೂಲಕ ಪಡೆದುಕೊಳ್ಳುವ ದಾರಿಗಳೇ ಇಲ್ಲ” ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ವ್ಯಾಖ್ಯಾಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.