ಬುಧವಾರ, ಏಪ್ರಿಲ್ 14, 2021
24 °C

ತೆಲಂಗಾಣ: ಮಹಾತ್ಮರ ಪುತ್ಥಳಿ ಪುನಃಸ್ಥಾಪನೆಗೆ ಒಪ್ಪಿದ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ): ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಆಗ್ರಹಿಸಿ ಇತ್ತೀಚೆಗೆ ನಡೆದ ಪ್ರತಿಭಟನೆ ಸಂದರ್ಭದಲ್ಲಿ ನಗರದ ವಿವಿಧೆಡೆ ಇದ್ದ ಆಂಧ್ರಪ್ರದೇಶದ ಮಹಾನ್ ವ್ಯಕ್ತಿಗಳ ಪುತ್ಥಳಿಗಳು ಹಾನಿಗೀಡಾಗಿದ್ದು, ಇದೀಗ ಇದಕ್ಕೆ ಎಲ್ಲೆಡೆಯಿಂದ ಭಾರಿ ಪ್ರತಿಭಟನೆ ವ್ಯಕ್ತವಾಗುತ್ತಿದೆ.ತೆಲಂಗಾಣ ಪರ ಹೋರಾಟಗಾರರು ಮಾರ್ಚ್ 10ರಂದು ‘ಹೈದರಾಬಾದ್ ಚಲೊ’ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ 16ಕ್ಕೂ ಅಧಿಕ ಪ್ರತಿಮೆಗಳನ್ನು ಹಾಳುಗೆಡವಲಾಗಿತ್ತು. ಕೆಲವನ್ನು ಕಿತ್ತು ಎಸೆಯಲಾಗಿತ್ತು. ಕೆಲವನ್ನು ಹುಸೇನ್ ಸಾಗರ ಸರೋವರಕ್ಕೆ ಎಸೆಯಲಾಗಿತ್ತು.ಪ್ರಾಚೀನರಾದ ಶ್ರೀಕೃಷ್ಣದೇವರಾಯ, ತೆಲುಗು ಮಹಾಭಾರತ ವಿರಚಿಸಿದ ಕವಿ ಯೆರ್ರಪ್ರಗಾದ, ಭಕ್ತಿ ಕವಿ ಅಣ್ಣಮಯ್ಯ, ಸಮಾಜ ಸುಧಾರಕ ಕಂದುಕುರಿ ವೀರೇಶಲಿಂಗಂ... ಅಂತಹ ಅನೇಕ ಮಹಾತ್ಮರ ಪ್ರತಿಮೆಗಳು ಭಗ್ನವಾಗಿದ್ದವು.ರಾಜ್ಯ ವಿಧಾನಸಭೆ ಹಾಗೂ ಪರಿಷತ್ ಸದಸ್ಯರು  ಪುತ್ಥಳಿ ಹಾಳುಗೆಡವಿದ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ವಿವಿಧ ರಂಗದ ಗಣ್ಯರು ಕೂಡ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷ ನಾಯಕ ಟಿಡಿಪಿಯ ದಾಡಿ ವೀರಭದ್ರ ರಾವ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ವಿಧಾನಸಭೆಯಲ್ಲಿ ಪುತ್ಥಳಿ ಪುನಃ ಸ್ಥಾಪಿಸಬೇಕೆಂದು ಸರ್ಕಾರವನ್ನು ವಿನಂತಿಸಿ ಠರಾವು ಅಂಗೀಕರಿಸಲಾಗಿದೆ. ಮುಖ್ಯಮಂತ್ರಿ ಕಿರಣ್‌ಕುಮಾರ್ ರೆಡ್ಡಿ ಅವರು ಠರಾವಿಗೆ ಸ್ಪಂದಿಸಿ, ಮರು ಸ್ಥಾಪಿಸುವ ಭರವಸೆ ನೀಡಿದ್ದಾರೆ.‘ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಗಾಗಿ ಹೋರಾಟ ನಡೆಸಲಿ ನಮ್ಮ ಆಕ್ಷೇಪ ಏನಿಲ್ಲ. ಆದರೆ ಮಹಾನ್ ವ್ಯಕ್ತಿಗಳ ಪುತ್ಥಳಿಗಳನ್ನು ಹಾಳುಗೆಡವಿದ ಕ್ರಮ ಸರಿಯಲ್ಲ’ ಎಂದು ತೆಲುಗಿನ ಹೆಸರಾಂತ ಕವಿ, ವಿದ್ವಾಂಸ ಗರಿಕಾಪತಿ ನರಸಿಂಹ ರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕವಿಗಳ ಆಕ್ರೋಶ: ಜ್ಞಾನಪೀಠ ಪುರಸ್ಕೃತ ತೆಲುಗು ಕವಿ ಸಿ.ನಾರಾಯಣ ರೆಡ್ಡಿ ಪ್ರತಿಮೆ ಪುನಃಸ್ಥಾಪನೆ ಸಮಿತಿಯಲ್ಲಿ ಸಕ್ರಿಯರಾಗಿದ್ದರೆ, ಸಿನಿಕವಿ ಜೊನ್ನವಿತುಲ ರಾಮಲಿಂಗೇಶ್ವರ ರಾವ್ ‘ಹತ್ತು ಲಕ್ಷ ಹೋರಿಗಳು ಟ್ಯಾಂಕ್ ಬಂಡ್ ರಸ್ತೆಯಲ್ಲಿ ಜಾಥಾ ನಡೆಸಿದರೂ ಪ್ರತಿಮೆಗಳಿಗೆ ಚ್ಯುತಿ ಉಂಟಾಗಿರಲಿಲ್ಲ....’ ಎಂದು ಮಾರ್ಮಿಕವಾಗಿ ಟೀಕಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.