ತೆಲಂಗಾಣ: ಮುಂದುವರಿದ ಮುಷ್ಕರ....

7

ತೆಲಂಗಾಣ: ಮುಂದುವರಿದ ಮುಷ್ಕರ....

Published:
Updated:
ತೆಲಂಗಾಣ: ಮುಂದುವರಿದ ಮುಷ್ಕರ....

ಹೈದರಾಬಾದ್ (ಐಎಎನ್‌ಎಸ್): ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ತೆಲಂಗಾಣ ಪರ ಸಂಘಟನೆಗಳು, ಸರ್ಕಾರಿ ನೌಕರರು ನಡೆಸುತ್ತಿರುವ ಅನಿರ್ದಿಷ್ಟ ಮುಷ್ಕರ ಸೋಮವಾರ 14ನೇ ದಿನಕ್ಕೆ ಕಾಲಿಟ್ಟಿದೆ.ಮಷ್ಕರ ನಿರತರು ಸೋಮವಾರ ಆಂಧ್ರಪ್ರದೇಶ ಸಚಿವಾಲಯ ಹಾಗೂ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದರು.ಸಚಿವಾಲಯದಲ್ಲಿ ಸೇರಿದ್ದ ಮುಷ್ಕರ ನಿರತರು ತೆಲಂಗಾಣ ಪ್ರಾಂತ್ಯದ ಸಾಂಪ್ರದಾಯಿಕ  ಹಾಡುಗಳನ್ನು ಹಾಡಿ, ನೃತ್ಯಗಳನ್ನು ಪ್ರದರ್ಶಿಸುತ್ತಾ ಪ್ರತಿಭಟನೆ  ನಡೆಸಿದರು. ರಾಜ್ಯ ಮೂಲಭೂತ ಸೌಕರ್ಯಗಳ ಸಚಿವ ಕೆ. ವೆಂಕಟ ರೆಡ್ಡಿ, ಕಾಂಗ್ರೆಸ್ ಸಂಸತ್ ಸದಸ್ಯರಾದ ಮಧು ಯಕ್ಷಿ, ಎಸ್.ರಾಜಯ್ಯ ಮತ್ತು ಪೊನ್ನಮ್ ಪ್ರಭಾಕರ್, ತೆಲಂಗಾಣ ರಾಷ್ಟ್ರ ಸಮಿತಿ ಶಾಸಕರಾದ (ಟಿಆರ್‌ಎಸ್) ಕೆ.ತರಕರಾಮ ರಾವ್ ಮತ್ತು ಇ.ರಾಜೇಂದ್ರ ಅವರು ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಮುಷ್ಕರ ನಿರತರಿಗೆ ಬೆಂಬಲ ಸೂಚಿಸಿದರು.ಮುಷ್ಕರ ನಡೆಸುತ್ತಿರುವ ನೌಕರರ ವಿರುದ್ಧ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಅವರು ಆಗ್ರಹಿಸಿದರು. ನೌಕರರ ಮುಷ್ಕರದ ಹಿನ್ನೆಲೆಯಲ್ಲಿ  ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳು ತೆಲಂಗಾಣ ಪ್ರಾಂತ್ಯದಲ್ಲಿ ಸತತ ಎಂಟನೇ ದಿನವೂ ರಸ್ತೆಗೆ ಇಳಿಯಲಿಲ್ಲ.ಸಚಿವಾಲಯದ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಸರ್ಕಾರಿ ಬಸ್‌ಗಳನ್ನು  ತಡೆಯಲು ಪ್ರತಿಭಟನಾಕಾರರು ಯತ್ನಿಸಿದರಾದರೂ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಮಧ್ಯಪ್ರವೇಶಿಸಿದರು. ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚಿನ ಸಿಬ್ಬಂದಿ ಆಂಧ್ರ ಮತ್ತು ರಾಯಲಸೀಮೆ ಪ್ರಾಂತ್ಯದವರಾಗಿರುವುದರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.ಕೆಲವು ಪ್ರತಿಭಟನಾಕಾರರು ಖಾಸಗಿ ಬಸ್‌ಗಳಿಗೆ ಹಾನಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಧ್ಯೆ, ಮುಷ್ಕರ ನಿರತ ನೌಕರರಿಗೆ ಶೋಕಾಸ್ ನೋಟಿಸ್ ನೀಡಿರುವುದಕ್ಕೆ ತೆಲಂಗಾಣ ಪರ ಪ್ರತಿಭಟನಾಕಾರರು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ.ನೋಟಿಸ್ ನೀಡಿರುವುದನ್ನು ಖಂಡಿಸಿ ಸಚಿವರು, ಟಿಆರ್‌ಎಸ್ ಮುಖಂಡರು ಮತ್ತು ಇತರ ತೆಲಂಗಾಣ ಪರ ಹೋರಾಟಗಾರರು ಸಾರಿಗೆ ಆಯುಕ್ತರ ಕಚೇರಿ ಮುಂದೆ ಜಮಾಯಿಸಿದ್ದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.ನೋಟಿಸ್ ಹಿಂಪಡೆಯುವವರೆಗೆ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಅವರು ಪಟ್ಟು ಹಿಡಿದ್ದರು. ಈ ಸಂದರ್ಭದಲ್ಲಿ ಮುಖಂಡರು ಮತ್ತು ಸಹಾಯಕ ಸಾರಿಗೆ ಆಯುಕ್ತರ  ನಡುವೆ ಮಾತಿನ ಚಕಮಕಿ ನಡೆಯಿತು. 

ಇದೇ ವೇಳೆ ಕೆಲವು ಪ್ರತಿಭಟನಾಕಾರರು ಆಯುಕ್ತರ ಅಂಗಿ ಹಿಡಿದು ಎಳೆದಾಡಿದರು ಮಾತ್ರವಲ್ಲದೇ ಶೋಕಾಸ್ ನೋಟಿಸ್ ನೀಡಿರುವ ಆದೇಶವನ್ನು ಹಿಂಪಡೆಯುವ ಪತ್ರಕ್ಕೆ ಅವರಿಂದ ಬಲವಂತವಾಗಿ ಸಹಿಯನ್ನೂ ಹಾಕಿಸಿದರು.ಕಾರ್ಖಾನೆಗಳ ಸ್ಥಗಿತಕ್ಕೆ ಕರೆ
: ಎರಡು ದಿನಗಳ ಕಾಲ ರೈಲು ತಡೆ ನಡೆಸಿದ ಬಳಿಕ, ತೆಲಂಗಾಣ ಜಂಟಿ ಸ್ಥಾಯಿ ಸಮಿತಿಯು (ಜೆಎಸಿ)   ಕೈಗಾರಿಕೆಗಳನ್ನು ಮುಚ್ಚುವಂತೆ ಕರೆ ನೀಡಿದೆ.ಕರೆಯ ಹಿನ್ನೆಲೆಯಲ್ಲಿ ತೆಲಂಗಾಣ ಪ್ರಾಂತ್ಯದ ಸೋಮವಾರ ಮಧ್ಯಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು ಸ್ಥಗಿತಗೊಂಡಿದ್ದವು.ಐಟಿ ವಲಯಕ್ಕೂ ತಟ್ಟಿದ ಬಿಸಿ: ಪ್ರತ್ಯೇಕ ರಾಜ್ಯಕ್ಕಾಗಿ ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಹೋರಾಟದ ಬಿಸಿ  ಮಾಹಿತಿ ತಂತ್ರಜ್ಞಾನ ವಲಯಕ್ಕೂ ತಟ್ಟಲಾರಂಭಿಸಿದೆ.ಹಲವು ಐಟಿ ಕಂಪೆನಿಗಳಿರುವ ಹೈಟೆಕ್ ಸಿಟಿಗೆ ಸಾಫ್ಟ್‌ವೇರ್ ಉದ್ಯೋಗಿಗಳನ್ನು ಕರೆದೊಯ್ಯುವ ಬಸ್‌ಗಳನ್ನು ತಡೆಯಲು ಪ್ರತಿಭಟನಾಕಾರರು ಯತ್ನಿಸಿದ್ದಾರೆ.ತೆಲಂಗಾಣ ಪರ ಭಿತ್ತಿಪತ್ರ ಹಿಡಿದುಕೊಂಡು, ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಲು ಯತ್ನಿಸಿದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.ಕುಕಟ್‌ಪಲ್ಲಿಯಲ್ಲಿ ಪೊಲೀಸರು ಪ್ರತಿಭಟನಾ ನಿರತ 15 ಮಂದಿ ಜೆಎಸಿ ಮುಖಂಡರನ್ನು ಬಂಧಿಸಿದ್ದಾರೆ.

ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಈ ಪ್ರಾಂತ್ಯದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಆಡಳಿತ ನಿರ್ವಹಣೆಯ ಮೇಲೆ ತೀವ್ರ ಪರಿಣಾಮ ಬೀರಿದೆ.  ಶಾಲಾ ಕಾಲೇಜುಗಳು ಎರಡು ವಾರಗಳಿಂದ ಮುಚ್ಚಿವೆ. ಈ ಮಧ್ಯೆ, ಜೆಎಸಿ ಸಂಚಾಲಕ ಎಂ.ಕೋದಂಡರಾಮಮ್ ನೇತೃತ್ವದಲ್ಲಿ ಸಾರಿಗೆ ಸಂಸ್ಥೆ ಪ್ರಧಾನ ಕಚೇರಿ ಬಸ್ ಭವನದಲ್ಲಿ ಸಂಸ್ಥೆಯ ನೌಕರರು ಸೋಮವಾರ ಪ್ರತಿಭಟನೆ ನಡೆಸಿದರು.`ನೌಕರರಿಗೆ ಏನಾದರೂ ತೊಂದರೆ ಯಾದರೆ, ಅದಕ್ಕೆ ಕಾಂಗ್ರೆಸ್ ಶಾಸಕರು ಮತ್ತು ಸಂಸದರೇ ಕಾರಣ~ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry