ತೆಲಂಗಾಣ : ಮೂವರು ಶಾಸಕರ ರಾಜೀನಾಮೆ

7

ತೆಲಂಗಾಣ : ಮೂವರು ಶಾಸಕರ ರಾಜೀನಾಮೆ

Published:
Updated:

ಹೈದರಾಬಾದ್: ಪ್ರತ್ಯೇಕ ತೆಲಂಗಾಣ ಬೇಡಿಕೆ ಈಡೇರಿಕೆ ವಿಳಂಬವಾಗುತ್ತಿರುವುದನ್ನು ಪ್ರತಿಭಟಿಸಿ ತೆಲಂಗಾಣ ಪ್ರಾಂತ್ಯದ ಮೂವರು ಕಾಂಗ್ರೆಸ್ ಶಾಸಕರು ಭಾನುವಾರ ರಾಜೀನಾಮೆ ನೀಡಿದ್ದು, ಇದರಿಂದ ಆಡಳಿತಾರೂಢ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದೆ.ವಾರಂಗಲ್ ಜಿಲ್ಲೆ ಘಾನ್‌ಪುರದ ಟಿ.ರಾಜಯ್ಯ, ಮೆಹಬೂಬ್ ನಗರ ಜಿಲ್ಲೆ ಕೊಲ್ಲಾಪುರದ ಜೆ.ಕೃಷ್ಣ ರಾವ್ ಹಾಗೂ ಕರೀಂ ನಗರ ಜಿಲ್ಲೆ ರಾಮಗುಂಡಂನ ಸೋಮರಪು ಸತ್ಯನಾರಾಯಣ ಅವರು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬೋತ್ಸ ಸತ್ಯನಾರಾಯಣ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಈ ಮೂವರೂ ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಸೇರಲಿದ್ದಾರೆ.`ಈ ಶಾಸಕರಿಗೆ ಕಾಯುವ ವ್ಯವಧಾನ ಇಲ್ಲ. ಇದು ದುಡುಕಿನ ನಿರ್ಧಾರ~ ಎಂದು ಸತ್ಯನಾರಾಯಣ ಪ್ರತಿಕ್ರಿಯಿಸಿದ್ದಾರೆ.`ಬೇಡಿಕೆ ಈಡೇರಿಸುವಂತೆ ಕಾಂಗ್ರೆಸ್ ಹೈಕಮಾಂಡ್, ತೆಲಂಗಾಣ ಪ್ರಾಂತ್ಯದ ಸಚಿವರು ಮತ್ತು ಶಾಸಕರ ಮೇಲೆ ಒತ್ತಡ ಹೇರುವ ತಂತ್ರವಾಗಿ ರಾಜೀನಾಮೆ ನೀಡುತ್ತಿದ್ದೇವೆ~ ಎಂದು ಕೃಷ್ಣ ರಾವ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ತೆಲಂಗಾಣ ಬೆಂಬಲಿಗರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ, ಪ್ರತ್ಯೇಕ ತೆಲಂಗಾಣ ರಚನೆ ಬೇಡಿಕೆಯನ್ನು ದಮನ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಈಗ ಬುದ್ಧಿ ಬಂದಿದೆ....

`ಕಾಂಗ್ರೆಸ್ ಕಾರ್ಯಕರ್ತರಿಗೆ ಈಗ ಬುದ್ಧಿ ಬಂದಿದೆ. ತೆಲಂಗಾಣ ವಿಷಯದಲ್ಲಿ ಹೈಕಮಾಂಡ್ ಕಣ್ಣೊರೆಸುವ ತಂತ್ರ ಮಾಡುತ್ತಿರುವುದು ಅರಿವಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಟಿಆರ್‌ಎಸ್ ಸೇರಲಿದ್ದಾರೆ ಎಂದು ದೆಹಲಿಯಲ್ಲಿರುವ ನಾಯಕರಿಗೆ ಎಚ್ಚರಿಕೆ ನೀಡುತ್ತಿದ್ದೇನೆ~ ಎಂದು ಕೆ.ಚಂದ್ರಶೇಖರ ರಾವ್ ಹೇಳಿದ್ದಾರೆ.ಇನ್ನಷ್ಟು ತೊಂದರೆಯಲ್ಲಿ...

ತೆಲಂಗಾಣ ವಿಷಯದಲ್ಲಿ ಕಾಂಗ್ರೆಸ್ ಇನ್ನಷ್ಟು ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಈಗಾಗಲೇ ಈ ವಿಷಯದಲ್ಲಿ ರಾಜೀನಾಮೆ ನೀಡಿರುವ ಶಾಸಕ ಕೊಮಟಿರೆಡ್ಡಿ ವೆಂಕಟರೆಡ್ಡಿ, ಪಕ್ಷ ತ್ಯಜಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ. ತಮ್ಮ ಹುಟ್ಟೂರಾದ ನಲಗೊಂಡದಲ್ಲಿ ನವೆಂಬರ್ 1ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಲು ಅವರು ಈಗಾಗಲೇ ಸಜ್ಜಾಗಿದ್ದಾರೆ.  ವೈಆರ್‌ಎಸ್ ಕಾಂಗ್ರೆಸ್ ಪಕ್ಷದ ಮುಖಂಡ ವೈ.ಎಸ್.ಜಗನ್ಮೋಹನ ರೆಡ್ಡಿ ಅವರಿಗೆ ನಿಷ್ಠರಾಗಿರುವ 26 ಶಾಸಕರು ಆಗಸ್ಟ್‌ನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸ್ದ್ದಿದಾರೆ. ಆದರೆ ವಿಧಾನಸಭಾಧ್ಯಕ್ಷರು ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.294 ಸದಸ್ಯ ಬದಲ ಆಂಧ್ರ ವಿಧಾನಸಭೆಯಲ್ಲಿ 155 ಕಾಂಗ್ರೆಸ್ ಸದಸ್ಯರು ಇದ್ದಾರೆ. ಸರಳ ಬಹುಮತಕ್ಕೆ 147 ಸದಸ್ಯರ ಬೆಂಬಲ ಬೇಕಾಗುತ್ತದೆ. ಒಂದು ವೇಳೆ ಈ ಎಲ್ಲ 29 ಶಾಸಕರ ರಾಜೀನಾಮೆಯೂ ಅಂಗೀಕಾರವಾದರೆ ಪಕ್ಷದ ಬಲಾಬಲ 126ಕ್ಕೆ ಇಳಿಯುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry