ತೆಲಂಗಾಣ ರಚನೆ: ಆಂಧ್ರ ಮುಖ್ಯಮಂತ್ರಿ ಧರಣಿ

ನವದೆಹಲಿ (ಪಿಟಿಐ): ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಅವರು ನವದೆಹಲಿಯ ಜಂತರ್ ಮಂತರ್ ಮುಂದೆ ಬುಧವಾರ ಐದು ತಾಸಿಗೂ ಹೆಚ್ಚು ಕಾಲ ಧರಣಿ ನಡೆಸಿದರು. ಅಲ್ಲದೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಿ, ಆಂಧ್ರಪ್ರದೇಶವನ್ನು ವಿಭಜನೆ ತಡೆಯುವಂತೆ ಮನವಿ ಮಾಡಿಕೊಂಡರು.
ನಂತರ ಮಾತನಾಡಿದ ಅವರು, ‘ರಾಜ್ಯದ ಶೇ 75– 80ರಷ್ಟು ಜನರು ರಾಜ್ಯ ಇಬ್ಭಾಗವಾಗುವುದನ್ನು ವಿರೋಧಿಸಿದ್ದಾರೆ. ಜನರ ಈ ಆಶಯವನ್ನು ಗೌರವಿಸಿರುವ ರಾಜ್ಯ ವಿಧಾನಮಂಡಲವು ಮಸೂದೆ ವಿರೋಧಿಸುವ ನಿರ್ಣಯ ಕೈಗೊಂಡಿದೆ. ಈ ವಿಷಯವನ್ನು ನಾವು ರಾಷ್ಟ್ರಪತಿ ಅವರಿಗೂ ಮನವರಿಕೆ ಮಾಡಿದ್ದು, ತಮ್ಮ ಪರಮಾಧಿಕಾರ ಬಳಸಿ ರಾಜ್ಯ ವಿಭಜನೆಯನ್ನು ತಡೆಯುವಂತೆ ಕೋರಿದ್ದೇವೆ’ ಎಂದರು.
ಧರಣಿ ಆರಂಭಿಸುವುದಕ್ಕೂ ಮೊದಲು ರಾಜ್ಘಾಟ್ಗೆ ತೆರಳಿ ಗಾಂಧಿ ಅವರ ಚಿತಾಭಸ್ಮ ಸ್ಮಾರಕಕ್ಕೆ ಅವರು ನಮಿಸಿದರು. ಧರಣಿಯಲ್ಲಿ ಸೀಮಾಂಧ್ರ ಭಾಗದ ಹಲವು ಶಾಸಕರು ಮತ್ತು ಸಚಿವರು ಭಾಗವಹಿಸಿದ್ದರು. ಈ ಭಾಗದ ಕೇಂದ್ರ ಸಚಿವರಾದ ಎಂ. ಪಲ್ಲಂ ರಾಜು, ಕೆ. ಸಾಂಬಶಿವ ರಾವ್, ಡಿ. ಪುರಂದೇಶ್ವರಿ ಮತ್ತು ಕಿಲ್ಲಿ ಕೃಪಾರಾಣಿ ಅವರು ಕೆಲವು ಕಾಲ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕೆ. ಸಾಂಬಶಿವ ರಾವ್, ‘ಸರ್ಕಾರ ಆಂಧ್ರ ಪುನರ್ರಚನೆ ಮಸೂದೆಯನ್ನು ಮಂಡಿಸಬಾರದು’ ಎಂದರು. ‘ಸರ್ಕಾರ ಮಸೂದೆ ಮಂಡಿಸಿದರೆ ನಿಮ್ಮ ಮುಂದಿನ ನಡೆ ಏನು’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವು ಆ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವೆವು’ ಎಂದರು. ಈ ಮಸೂದೆಯು ಪ್ರಜಾಸತ್ತಾತ್ಮಕ ಆಶಯಕ್ಕೆ ವಿರುದ್ಧವಾದುದು ಎಂದ ಸಚಿವ ಎಂ. ಪಲ್ಲಂ ರಾಜು, ‘ಮಸೂದೆಯ ಈಗಿನ ಸ್ವರೂಪ ನೋಡಿದರೆ ಅದು ಆಂಧ್ರದ ಯಾವುದೇ ಭಾಗಕ್ಕೂ ನ್ಯಾಯ ಒದಗಿಸಿಲ್ಲ.
ಮುಖ್ಯ ಕಳವಳಕಾರಿ ಅಂಶವೆಂದರೆ ನೀರು ಹಂಚಿಕೆ ಮತ್ತು ಹೈದರಾಬಾದ್ ನಿವಾಸಿಗಳ ಭದ್ರತೆ. ಈ ವಿಷಯಗಳ ಬಗ್ಗೆ ಮಸೂದೆಯಲ್ಲಿ ಹೆಚ್ಚಿನ ಗಮನ ನೀಡಿಲ್ಲ’ ಎಂದು ದೂರಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.