ಶುಕ್ರವಾರ, ಮೇ 20, 2022
21 °C

ತೆಲಂಗಾಣ ರಾಜ್ಯ ರಚನೆ ಸಿಡಬ್ಲ್ಯುಸಿ ತೀರ್ಮಾನಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: `ಪ್ರತ್ಯೇಕ ತೆಲಂಗಾಣ' ರಾಜ್ಯ ಬೇಡಿಕೆ ಕುರಿತು ಚರ್ಚಿಸಲು ಶುಕ್ರವಾರ ಸೇರಿದ್ದ `ಕಾಂಗ್ರೆಸ್ ಪ್ರಮುಖರ ಸಮಿತಿ' (ಕೋರ್ ಕಮಿಟಿ) ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾದ ವಿಷಯ ಕುರಿತು ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು `ಕಾಂಗ್ರೆಸ್ ಕಾರ್ಯಕಾರಿಣಿ'ಗೆ ನೀಡಿತು.ಪ್ರಧಾನಿ ಮನಮೋಹನ್‌ಸಿಂಗ್, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದ ಸಭೆ, ತೆಲಂಗಾಣ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಕಾರ್ಯಕಾರಿಣಿಗೆ ಬಿಟ್ಟುಕೊಟ್ಟಿತು. ಈ ಕುರಿತು `ಸಿಡಬ್ಲ್ಯುಸಿ' ಅಂತಿಮ ತೀರ್ಮಾನ ಮಾಡಲಿದೆ  ಎಂದು ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್ ಪತ್ರಕರ್ತರಿಗೆ ತಿಳಿಸಿದರು.ಕಾಂಗ್ರೆಸ್ ಪ್ರಮುಖರ ಸಮಿತಿ `ಪ್ರತ್ಯೇಕ ತೆಲಂಗಾಣ ಬೇಡಿಕೆ' ಕುರಿತು ಸುದೀರ್ಘವಾಗಿ ಸಮಾಲೋಚನೆ ನಡೆಸಿತು. ಆಂಧ್ರದ ಮುಖ್ಯಮಂತ್ರಿ ಕಿರಣ್‌ಕುಮಾರ್ ರೆಡ್ಡಿ ಮತ್ತು ಉಪ ಮುಖ್ಯಮಂತ್ರಿ ಡಿ.ಆರ್.ನರಸಿಂಹ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಿ. ಸತ್ಯನಾರಾಯಣ ಅವರ ಅಭಿಪ್ರಾಯಗಳನ್ನು ಕೇಳಿತು ಎಂದು ದಿಗ್ವಿಜಯ್‌ಸಿಂಗ್ ಸ್ಪಷ್ಟಪಡಿಸಿದರು.ತೆಲಂಗಾಣ ಅತ್ಯಂತ ಸೂಕ್ಷ್ಮ ವಿಷಯ. ಇನ್ನು ಒಂದೆರಡು ಸಭೆಗಳನ್ನು ನಡೆಸಿ. ಎಲ್ಲ ಮಗ್ಗಲುಗಳಿಂದ ಬೇಡಿಕೆ ಪರಿಶೀಲಿಸಿದ ಬಳಿಕ ಅಂತಿಮ ನಿರ್ಧಾರ ಸಾಧ್ಯ ಆಗಬಹುದೆಂದು ಉನ್ನತ ಮೂಲಗಳು ತಿಳಿಸಿವೆ. ಸಭೆಗೆ ಮುನ್ನ ಮುಖ್ಯಮಂತ್ರಿ, ಸೋನಿಯಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದರು.ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡುತ್ತಿರುವ ಪಕ್ಷಗಳು, ತೆಲಂಗಾಣ ಕಾಂಗ್ರೆಸ್ ನಾಯಕರು ಪ್ರತ್ಯೇಕ ರಾಜ್ಯ ಹೊರತುಪಡಿಸಿ ಬೇರೆ ಪರಿಹಾರ ಒಪ್ಪುವುದಿಲ್ಲ ಎಂದಿದ್ದಾರೆ. ಹಣಕಾಸು ಮತ್ತಿತರ ಪ್ಯಾಕೇಜ್‌ಗಳಿಂದ ಪ್ರಯೋಜನವಿಲ್ಲ ಎಂದೂ ಖಚಿತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.