ತೆಲಂಗಾಣ ವಿವಾದ: ಒಂದು ತಿಂಗಳಲ್ಲಿ ತೀರ್ಮಾನ- ಶಿಂಧೆ

7
ಇಂದು ಬಂದ್‌ಗೆ ಟಿಆರ್‌ಎಸ್ ಕರೆ

ತೆಲಂಗಾಣ ವಿವಾದ: ಒಂದು ತಿಂಗಳಲ್ಲಿ ತೀರ್ಮಾನ- ಶಿಂಧೆ

Published:
Updated:
ತೆಲಂಗಾಣ ವಿವಾದ: ಒಂದು ತಿಂಗಳಲ್ಲಿ ತೀರ್ಮಾನ- ಶಿಂಧೆ

 ನವದೆಹಲಿ (ಪಿಟಿಐ): ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಬಗ್ಗೆ ಒಂದು ತಿಂಗಳ ಒಳಗಾಗಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಪ್ರಕಟಿಸಿದರು.ಆಂಧ್ರ ಪ್ರದೇಶದ ಎಂಟು ರಾಜಕೀಯ ಪಕ್ಷಗಳ ಮುಖಂಡರ ಅಭಿಪ್ರಾಯಗಳನ್ನು ಆಲಿಸಲಾಗಿದೆ. ಆದಷ್ಟು ಶೀಘ್ರ ನಿರ್ಣಯ ತೆಗೆದುಕೊಳ್ಳುವಂತೆ ಎಲ್ಲ ಪಕ್ಷಗಳು ಮನವಿ ಮಾಡಿಕೊಂಡಿವೆ ಎಂದು ಶುಕ್ರವಾರ ಇಲ್ಲಿ ನಡೆದ ರಾಜ್ಯದ ಸರ್ವಪಕ್ಷಗಳ ಸಭೆಯ ಬಳಿಕ ಸಚಿವರು ತಿಳಿಸಿದರು.ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಆಂಧ್ರದ ಜನರು ಹಲವು ವರ್ಷಗಳಿಂದ ತೀವ್ರ ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಆದ್ದರಿಂದ ರಾಜ್ಯದ ಯುವಕರು ಇನ್ನಷ್ಟು ದಿನ ಶಾಂತಿ ಕಾಪಾಡಿಕೊಂಡು ಹೋಗುವಂತೆ ಮನವಿ ಮಾಡಿದರು.ಸಭೆಯ ವಿವರ ನೀಡಲು ನಿರಾಕರಿಸಿದ ಶಿಂಧೆ, ಎಲ್ಲರ ಅಭಿಪ್ರಾಯಗಳನ್ನು ಆಧರಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದಷ್ಟೇ ಹೇಳಿದರು.ತೆಲಂಗಾಣ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸರ್ವಪಕ್ಷಗಳ ಅಂತಿಮ ಸಭೆಯಲ್ಲಿ ಎಲ್ಲರೂ ತಮ್ಮ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇದೊಂದು ಸೌಹಾರ್ದಯುತ ಸಭೆಯಾಗಿತ್ತು. ಇದರ ಬಗ್ಗೆ ತೃಪ್ತಿ ಇದೆ ಎಂದು ನುಡಿದರು.ಕಾಂಗ್ರೆಸ್, ಬಿಜೆಪಿ, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್),  ತೆಲುಗು ದೇಶಂ ಪಾರ್ಟಿ (ಟಿಡಿಪಿ), ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ ಮತ್ತು ವೈಎಸ್‌ಆರ್ ಕಾಂಗ್ರೆಸ್‌ಗೆ ಸೇರಿದ ತಲಾ ಇಬ್ಬರು ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.ವ್ಯರ್ಥ ಕಸರತ್ತು: ರಾವ್

ಪ್ರತ್ಯೇಕ ತೆಲಂಗಾಣ ರಾಜ್ಯ ಸಂಬಂಧ ನವದೆಹಲಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರಕ್ಕೆ ಬಾರದ ಕೇಂದ್ರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್, ಇದೊಂದು ವ್ಯರ್ಥ ಕಸರತ್ತು ಎಂದು ಜರೆದಿದ್ದಾರೆ.ಕೇಂದ್ರದ ಹಠಮಾರಿತನ ಧೋರಣೆಯನ್ನು ಖಂಡಿಸಿ ಶನಿವಾರ ತೆಲಂಗಾಣ ಭಾಗದಲ್ಲಿ ಬಂದ್ ನಡೆಸಲಾಗುವುದು ಎಂದು ಅವರು ಘೋಷಿಸಿದರು.ಒಂದು ತಿಂಗಳ ಒಳಗಾಗಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ತಿಳಿಸಿರುವುದು ಸಮಾಧಾನ ತಂದಿಲ್ಲ. ಈ ಮಾತನ್ನು ಹಿಂದೆಯೂ ಹಲವು ಸಲ ಹೇಳಿದೆ. ಆದರೆ, ಹೇಳಿದಂತೆ ನಡೆದುಕೊಂಡಿಲ್ಲ. ಹಲವು ವರ್ಷಗಳಿಂದ ತೆಲಂಗಾಣ ಜನರಿಗೆ ಮೋಸ ಮಾಡುತ್ತಲೇ ಬಂದಿದೆ' ಎಂದು ಸರ್ವಪಕ್ಷಗಳ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry