ತೆಲಂಗಾಣ ವಿವಾದ ಸೃಷ್ಟಿಸಿದ ಕೋಲಾಹಲ

7

ತೆಲಂಗಾಣ ವಿವಾದ ಸೃಷ್ಟಿಸಿದ ಕೋಲಾಹಲ

Published:
Updated:

ಹೈದರಾಬಾದ್ (ಐಎಎನ್‌ಎಸ್/ಪಿಟಿಐ): ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಸಂಬಂಧಿಸಿದಂತೆ ಸಂಸತ್‌ನಲ್ಲಿ ಮಸೂದೆಯನ್ನು ಮಂಡಿಸುವಂತೆ  ಒತ್ತಾಯಿಸುವ ಗೊತ್ತುವಳಿಯನ್ನು ವಿಧಾನ ಸಭೆಯಲ್ಲಿ ಅಂಗೀಕರಿಸಲು ಒತ್ತಾಯಿಸಿ ಅಸಹಕಾರ ಚಳವಳಿ ಆರಂಭಿಸಿರುವ ತೆಲಂಗಾಣ ಪರ ಶಾಸಕರು ಆಂಧ್ರ ಪ್ರದೇಶ ವಿಧಾನ ಸಭೆ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಯುಂಟು ಮಾಡುವ ಮೂಲಕ ಗುರುವಾರ ಕೋಲಾಹಲ ಉಂಟು ಮಾಡಿದರು.ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಇ.ಎಸ್.ಎಲ್ ನರಸಿಂಹನ್ ಅವರು ಸಾಂಪ್ರದಾಯಿಕ ಭಾಷಣ ಆರಂಭಿಸುತ್ತಿದ್ದಂತೆಯೇ ಟಿಆರ್‌ಎಸ್ ಸದಸ್ಯರು ಗದ್ದಲ ಆರಂಭಿಸಿದರು. ‘ಗವರ್ನರ್ ಗೋ ಬ್ಯಾಕ್’ ಘೋಷಣೆಗಳನ್ನು ಕೂಗಿದರು.ರಾಜ್ಯಪಾಲರ ಬಳಿ ಇದ್ದ ಭಾಷಣದ ಪ್ರತಿಗಳನ್ನು ಕಿತ್ತುಕೊಳ್ಳಲು ಯತ್ನಿಸಿದರು. ತಮ್ಮ ಬಳಿ ಇದ್ದ ರಾಜ್ಯಪಾಲರ ಭಾಷಣದ ಪ್ರತಿಗಳನ್ನು ಸಭಾಧ್ಯಕ್ಷರ ಪೀಠದ ಮುಂದೆ ಹರಿದು ಹಾಕಿದರು. ರಾಜ್ಯಪಾಲರು ಭಾಷಣ ಮಾಡಲು ಬಳಸುತ್ತಿದ್ದ ಮೈಕನ್ನು ಕಿತ್ತೆಸೆದರು.ತೆಲಂಗಾಣ ರಾಜ್ಯ ರಚನೆಗೆ ರಾಜ್ಯಪಾಲರು ವಿರುದ್ಧವಾಗಿದ್ದು, ಈ ನೆಲದಲ್ಲಿ ಭಾಷಣ ಮಾಡಲು ಯೋಗ್ಯರಲ್ಲ ಮತ್ತು ತಮ್ಮ ಭಾಷಣದಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿಲ್ಲ ಎನ್ನುವುದು ಶಾಸಕರ ಆರೋಪವಾಗಿತ್ತು.ಟಿಆರ್‌ಎಸ್ ಸದಸ್ಯರ ಜತೆಗೆ ತೆಲುಗು ದೇಶಂ ಪಾರ್ಟಿ (ಟಿಡಿಪಿ), ಬಿಜೆಪಿ ಮತ್ತು ಸಿಪಿಐನ ಸದಸ್ಯರೂ ಸೇರಿಕೊಂಡರು. ತೆಲಂಗಾಣ ಪರ ಇರುವ ಆಡಳಿತಾರೂಢ ಕಾಂಗ್ರೆಸ್ ಸದಸ್ಯರಲ್ಲಿ ಬಹುತೇಕರು ತಮ್ಮ ಪಕ್ಷದ ಮುಖಂಡರ ಮೇಲೆ ಒತ್ತಡ ಹೇರಲು ದೆಹಲಿಗೆ ತೆರಳಿರುವುದರಿಂದ ಅಧಿವೇಶನಕ್ಕೆ ಗೈರು ಹಾಜರಾಗಿದ್ದರು.ಸದಸ್ಯರ ವರ್ತನೆಯಿಂದ ತೀವ್ರ ಅಸಮಾಧಾನಗೊಂಡ ನರಸಿಂಹನ್ 40 ಪುಟಗಳ ತಮ್ಮ ಭಾಷಣವನ್ನು ಕಡಿತಗೊಳಿಸಿ 15 ನಿಮಿಷಗಳಲ್ಲಿ ಮುಕ್ತಾಯಗೊಳಿಸಿ ಅಲ್ಲಿಂದ ತೆರಳಿದರು.

ತೆಲಂಗಾಣ ಪರ ಶಾಸಕರು ರಾಜ್ಯಪಾಲರ ಮೇಲೆ ಮುಗಿಬೀಳಲು ಯತ್ನಿಸಿದ ಸಂದರ್ಭದಲ್ಲಿ ಅಂಗರಕ್ಷಕರು ಮತ್ತು ಮಾರ್ಷಲ್‌ಗಳು ರಾಜ್ಯಪಾಲರ ನೆರವಿಗೆ ನಿಂತರು. ಸಭಾಧ್ಯಕ್ಷರ ಪೀಠದ ಬಳಿಗೆ ನುಗ್ಗಿ ದಾಂದಲೆ ಆರಂಭಿಸಿದ ಟಿಆರ್‌ಎಸ್, ಟಿಡಿಪಿ, ಬಿಜೆಪಿ ಮತ್ತು ಸಿಪಿಐ ಸದಸ್ಯರನ್ನು ಉಪ ಸಭಾಧ್ಯಕ್ಷ ನಾಂದೇಡ್ಲ ಮನೋಹರ್ ಅವರು ಮಾರ್ಷಲ್‌ಗಳ ಸಹಾಯದಿಂದ ಹೊರ ಹಾಕಿಸಿದರು. ಅಂಗರಕ್ಷಕರು ಮತ್ತು ಮಾರ್ಷಲ್‌ಗಳು ಶಾಸಕರನ್ನು ಹೊರ ಹಾಕುವ ಸಂದರ್ಭದಲ್ಲಿ ಅಲ್ಲಿದ್ದ ಸಭಾಧ್ಯಕ್ಷರ ಪೀಠಕ್ಕೂ ಹಾನಿಯಾಯಿತು. ಶಾಸಕರ ಮೇಲೆ ಹಲ್ಲೆ: ಟಿಆರ್‌ಎಸ್ ಶಾಸಕರು ಲೋಕಸತ್ತಾ ಪಕ್ಷದ ಶಾಸಕ ಎನ್.ಜಯಪ್ರಕಾಶ್ ನಾರಾಯಣ್ ಮತ್ತು ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಪಲದುಗು ವೆಂಕಟರಾವ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಸಂಗವೂ ಇದೇ ಸಂದರ್ಭದಲ್ಲಿ ನಡೆಯಿತು.ಹಲ್ಲೆಗೆ ಒಳಗಾದ ಇಬ್ಬರೂ ಶಾಸಕರು ಪ್ರತ್ಯೇಕ ತೆಲಂಗಾಣ ವಿರೋಧಿಗಳು. ಜಯಪ್ರಕಾಶ್ ಸಭಾಂಗಣದ ಹೊರ ಭಾಗದಲ್ಲಿ ಸುದ್ದಿಗಾರರ ಜತೆ ಮಾತನಾಡಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಟಿಆರ್‌ಎಸ್‌ನ ಕೆ.ಟಿ.ರಾಮರಾವ್ (ಕೆ.ಚಂದ್ರಶೇಖರ ರಾವ್ ಪುತ್ರ), ಡಿ.ವಿನಯ್ ಭಾಸ್ಕರ್ ಮತ್ತು ಅರವಿಂದ ರೆಡ್ಡಿ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದರು.

ಮುಂದುವರಿದ ಅವರು, ಪಲದುಗು ವೆಂಕಟರಾವ್ ಮೇಲೂ ಹಲ್ಲೆ ನಡೆಸಿದರು. ಇಬ್ಬರಿಗೂ ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿದರು. ಈ ಬಗ್ಗೆ ಇಬ್ಬರೂ ಪೊಲೀಸರಿಗೆ ದೂರು ನೀಡಿದ್ದಾರೆ.

ರಾಜ್ಯಪಾಲರ ಕ್ಷಮೆ ಕೋರಿದ ಮುಖ್ಯಮಂತ್ರಿ

ಹೈದರಾಬಾದ್ (ಐಎಎನ್‌ಎಸ್):
ಆಂಧ್ರ ಪ್ರದೇಶ ವಿಧಾನ ಸಭೆ ಜಂಟಿ ಅಧಿವೇಶನದ ಸಂದರ್ಭದಲ್ಲಿ ತೆಲಂಗಾಣ ಪರ ಶಾಸಕರ ವರ್ತನೆಯಿಂದ ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್ ಅವರಿಗೆ ಆಗೌರವವಾಗಿದ್ದು, ಇದಕ್ಕಾಗಿ ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ ಅವರು ರಾಜ್ಯಾಪಾಲರ ಕ್ಷಮೆ ಕೋರಿದ್ದಾರೆ.ರಾಜ್ಯದ ವಿಧಾನ ಸಭೆ ಇತಿಹಾಸದಲ್ಲಿ ಇದೊಂದು ಕರಾಳ ದಿನ ಎಂದು ಬಣ್ಣಿಸಿರುವ ರೆಡ್ಡಿ, ಇದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ಶಾಸಕರ ವರ್ತನೆಗೆ ರಾಜ್ಯಪಾಲರ ಕ್ಷಮೆ ಕೋರುವುದಾಗಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry