ತೆಲುಗು ಸಿನಿಮಾದಲ್ಲಿ ಜ್ವಾಲಾ ನೃತ್ಯ

7
ಬ್ಯಾಡ್ಮಿಂಟನ್ ಅಂಗಳದಿಂದ ಚಿತ್ರರಂಗದತ್ತ...

ತೆಲುಗು ಸಿನಿಮಾದಲ್ಲಿ ಜ್ವಾಲಾ ನೃತ್ಯ

Published:
Updated:
ತೆಲುಗು ಸಿನಿಮಾದಲ್ಲಿ ಜ್ವಾಲಾ ನೃತ್ಯ

ನವದೆಹಲಿ (ಪಿಟಿಐ): ಬ್ಯಾಡ್ಮಿಂಟನ್ ಅಂಗಳದಲ್ಲಿ ಅಮೋಘ ಸಾಧನೆ ಮೂಲಕ ಕ್ರೀಡಾ ಲೋಕದಲ್ಲಿ ಮಿಂಚಿರುವ ಜ್ವಾಲಾ ಗುಟ್ಟಾ ಈಗ ಸಿನಿಮಾ ಪ್ರಪಂಚದತ್ತ ಮುಖ ಮಾಡಿದ್ದಾರೆ. ಹೈದರಾಬಾದ್‌ನ ಆಟಗಾರ್ತಿ ಜ್ವಾಲಾ ತೆಲುಗು ಸಿನಿಮಾವೊಂದರಲ್ಲಿ ನೃತ್ಯ ಮಾಡಲಿದ್ದಾರೆ.ನಟ ಹಾಗೂ ಸ್ನೇಹಿತ ನಿತಿನ್ ಜೊತೆಗೆ ಹಾಡೊಂದಕ್ಕೆ ಅವರು ಹೆಜ್ಜೆ ಹಾಕಲಿದ್ದಾರೆ. ಈಗಾಗಲೇ ಹಾಡಿನ ಚಿತ್ರೀಕರಣ ನಡೆಯುತ್ತಿದೆ. `ನಿತಿನ್ ಹಾಗೂ ನಿರ್ಮಾಪಕರು ನನ್ನ ಸ್ನೇಹಿತರು. ಹಾಡೊಂದಕ್ಕೆ ಹೆಜ್ಜೆ ಹಾಕಲು ನನ್ನ ಬಳಿ ಕೇಳಿದರು. ಮೊದಲು ತಮಾಷೆ ಮಾಡುತ್ತಿದ್ದಾರೆ ಎಂದುಕೊಂಡಿದ್ದೆ. ಆದರೆ ಹಾಡು ಕೇಳಿದ ಮೇಲೆ ನನಗೂ ಆಸಕ್ತಿ ಬಂತು. ಹೊಸ ವಿಷಯಗಳ ಬಗ್ಗೆ ನನಗೂ ಕುತೂಹಲ ಇದೆ' ಎಂದು ಜ್ವಾಲಾ ನುಡಿದಿದ್ದಾರೆ.`ಮೊದಲ ದಿನದ ಚಿತ್ರೀಕರಣದ ವೇಳೆ ನಾನು ಒತ್ತಡಕ್ಕೆ ಒಳಗಾಗಿದ್ದೆ. ಏಕೆಂದರೆ ಸೆಟ್‌ನಲ್ಲಿ ತುಂಬಾ ಜನರಿದ್ದರು. ಅದಕ್ಕಾಗಿ ನಾನು ಒಂದು ವಾರ ಅಭ್ಯಾಸ ನಡೆಸಿದ್ದೆ' ಎಂದು ಹೇಳಿದ್ದಾರೆ.`ನನ್ನ ಮೊದಲ ಆದ್ಯತೆ ಬ್ಯಾಡ್ಮಿಂಟನ್. ಇದು ನನ್ನ ಜೀವಾಳ. ವಿದಾಯ ಹೇಳಿದ ಮೇಲೂ ಬ್ಯಾಡ್ಮಿಂಟನ್‌ಗಾಗಿ ದುಡಿಯುತ್ತೇನೆ. ಈ ನಡುವೆ ಹೊಸ ವಿಷಯಗಳಲ್ಲೂ ನನ್ನನ್ನು ತೊಡಗಿಸಿಕೊಳ್ಳುತ್ತೇನೆ' ಎಂದಿದ್ದಾರೆ.2012ರ ಲಂಡನ್ ಒಲಿಂಪಿಕ್ಸ್ ಬಳಿಕ ಜ್ವಾಲಾ ವಿಶ್ರಾಂತಿಗೆ ಮೊರೆ ಹೋಗಿದ್ದರು. ಯಾವುದೇ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಹಾಗಾಗಿ ಅವರ ಡಬಲ್ಸ್ ಜೊತೆಗಾರ್ತಿ ಅಶ್ವಿನಿ ಪೊನ್ನಪ್ಪ ಈಗ ಬೇರೆಯವರ ಜೊತೆಗೂಡಿ ಆಡುತ್ತಿದ್ದರು.ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿರುವ ಜ್ವಾಲಾ ಮತ್ತೆ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿದ್ದಾರೆ. `ಜನವರಿ 10ರಂದು ನಾನು ಮತ್ತೆ ಅಭ್ಯಾಸ ಆರಂಭಿಸಿದ್ದೇನೆ. ಸದ್ಯ ಫಿಟ್‌ನೆಸ್‌ಗೆ ಮಹತ್ವ ನೀಡುತ್ತಿದ್ದೇನೆ. ಬೆಳಿಗ್ಗೆ ಐದೂವರೆಗೆ ಏಳಲು ಕಷ್ಟವಾಗುತ್ತಿದೆ. ಸ್ವಲ್ಪ ದಿನ ಹೋದರೆ ಎಲ್ಲವೂ ಸರಿ ಹೋಗಲಿದೆ' ಎಂದಿದ್ದಾರೆ.ಫೆಬ್ರುವರಿ 26ರಂದು ಆರಂಭವಾಗಲಿರುವ ಜರ್ಮನಿ ಓಪನ್ ಟೂರ್ನಿಯಲ್ಲಿ ಅವರು ಪಾಲ್ಗೊಳ್ಳುತ್ತಿದ್ದಾರೆ. ಆದರೆ ಅವರು ಪ್ರಜಕ್ತಾ ಸಾವಂತ್ ಜೊತೆಗೂಡಿ ಆಡಲಿದ್ದಾರೆ. ಪ್ರಜಕ್ತಾ ಇತ್ತೀಚೆಗಷ್ಟೇ ರಾಷ್ಟ್ರೀಯ ಕೋಚ್ ಗೋಪಿಚಂದ್ ಅವರ ವಿರುದ್ಧ ಕೋರ್ಟ್ ಮೊರೆ ಹೋಗಿದ್ದರು. ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಆಗ ಸಾವಂತ್‌ಗೆ ಜ್ವಾಲಾ ಬೆಂಬಲ ವ್ಯಕ್ತಪಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry