ಗುರುವಾರ , ಮೇ 6, 2021
23 °C

ತೆಳ್ಳಗೆ ಬಳಕುವ ಅಲ್ಟ್ರಾಬುಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನಮೋಹಕ, ಫಳಫಳ ಹೊಳೆಯುವ ಲ್ಯಾಪ್‌ಟಾಪ್‌ನ ಸುಧಾರಿತ ರೂಪದಂತಿರುವುದೇ ಅಲ್ಟ್ರಾಬುಕ್. ತೀರಾ ಹಗುರ, ತೆಳ್ಳಗೆ, ಉತ್ತಮ ಗುಣಮಟ್ಟದ ಸ್ಕ್ರೀನ್. ಆದರೆ ಡಿವಿಡಿ ಇರುವುದಿಲ್ಲ. ಬ್ಯಾಟರಿಯು ಒಳಗೇ ಸೀಲ್ ಆಗಿರುತ್ತದೆ; ಅಂದರೆ, ತೆಗೆಯಲು ಆಗದು. ಕೀ ಬೋರ್ಡ್ ಅಂತೂ ಬಲು ನಾಜೂಕು.ಸಾಮಾನ್ಯವಾಗಿ ಲ್ಯಾಪ್‌ಟಾಪ್ ಅಥವಾ ನೋಟ್‌ಬುಕ್‌ಗಳಲ್ಲಿ ಇರುವಂತೆ ಹಾರ್ಡ್‌ಡ್ರೈವ್ ಇದರಲ್ಲಿ ಇಲ್ಲ; ಬದಲಾಗಿ ಅಳವಡಿಸಲಾದ ಬೃಹತ್ ಸಂಗ್ರಹ ಸಾಮರ್ಥ್ಯದ ಮೆಮರಿಕಾರ್ಡ್‌ನಂತಿರುವ ಸಾಲಿಡ್ ಸ್ಟೇಟ್ ಡ್ರೈವ್ (ಎಸ್‌ಎಸ್‌ಡಿ), ಹಲವು ಕಾರ್ಯಗಳನ್ನು ನಿರ್ವಹಿಸುತ್ತದೆ.ಎಸ್‌ಎಸ್‌ಡಿ ದುಬಾರಿಯಿದ್ದಷ್ಟೂ ಅಲ್ಟ್ರಾಬುಕ್ ದರ ಏರುತ್ತ ಹೋಗುತ್ತದೆ. ಹಾಗೆಂದು ಸಂಗ್ರಹ ಸಾಮರ್ಥ್ಯ(ಮೆಮೊರಿ ಕೆಪ್ಯಾಸಿಟಿ) ಹೆಚ್ಚುವುದಿಲ್ಲ. ಅಲ್ಟ್ರಾಬುಕ್‌ನ ಸಂಗ್ರಹ ಸಾಮರ್ಥ್ಯ 128 ಜಿಬಿ ಮಾತ್ರ.ಈಗೀಗ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿರುವ ನೋಟ್‌ಬುಕ್‌ಗಳು ಈ ಸಾಮರ್ಥ್ಯಕ್ಕಿಂತ ಎಂಟು- ಹತ್ತು ಪಟ್ಟು ಹೆಚ್ಚು ಸಂಗ್ರಹ ಸಾಮರ್ಥ್ಯ ಹೊಂದಿರುವಾಗ, ಅಲ್ಟ್ರಾಬುಕ್‌ನ ವೈಶಿಷ್ಟ್ಯವಾದರೂ ಏನು. ಕಡಿಮೆ ಸಂಗ್ರಹ ಸಾಮರ್ಥ್ಯವುಳ್ಳ ಅಲ್ಟ್ರಾಬುಕ್, ಸಾಮಾನ್ಯ ಕಂಪ್ಯೂಟರ್‌ನಂತಲ್ಲ.

 

ಅತ್ಯಧಿಕ ಸಂಖ್ಯೆಯ ಫೋಟೋ, ಹಾಡುಗಳು, ವಿಡಿಯೊ ಸಂಗ್ರಹಿಸಿಟ್ಟುಕೊಳ್ಳಲು ಅಸಾಧ್ಯ. ಇನ್ನು ಹೆಚ್ಚು ಸ್ಥಳಾವಕಾಶ ಬಯಸುವ ಗೇಮ್‌ಗಳನ್ನಂತೂ ಇದರಲ್ಲಿ ಅಳವಡಿಸಲು ಸಾಧ್ಯವೇ ಇಲ್ಲ. ಬೇರೆ ಯಾವುದಾದರೂ ಸಾಫ್ಟ್‌ವೇರ್ ಅನುಸ್ಥಾಪನೆ (ಇನ್‌ಸ್ಟಾಲ್) ಮಾಡಬೇಕೆಂದರೆ, ಪ್ರತ್ಯೇಕ ಡಿವಿಡಿ ಡ್ರೈವ್ ಇರಲೇಬೇಕು ಅಥವಾ ಇಂಟರ್‌ನೆಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳುವ ಸಾಫ್ಟ್‌ವೇರ್ ಬೇಕೇ ಬೇಕು.ಆದರೆ ಹಾಗೆಂದು ಇದನ್ನು ಅತ್ತ ತಳ್ಳಿ ಹಾಕವಂತೆಯೂ ಇಲ್ಲ. ನಿಮ್ಮ ಜೇಬಿನಲ್ಲಿ ಹಣ ಇದ್ದರೆ, ಅಲ್ಟ್ರಾಬುಕ್‌ನಿಂದ ಸಿಗುವ ಗಮ್ಮತ್ತೇ ಬೇರೆ! ಅದಕ್ಕಾಗಿಯೇ ಪ್ರಮುಖ ಕಂಪ್ಯೂಟರ್ ತಯಾರಕಾ ಕಂಪೆನಿಗಳು ಬಗೆಬಗೆಯ ಅಲ್ಟ್ರಾಬುಕ್ ವಿನ್ಯಾಸ ಮಾಡಿ, ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಇ-ಮೇಲ್, ಇಂಟರ್‌ನೆಟ್ ಜಾಲಾಡುವುದು, ಆನ್‌ಲೈನ್‌ನಲ್ಲಿ ಸಂಗೀತ- ಹಾಡು ಆಲಿಸುವುದು, ಸಿನಿಮಾ ನೋಡುವುದು... ಇಂಥವುಕ್ಕೆಲ್ಲ ಅಲ್ಟ್ರಾಬುಕ್ ಹೇಳಿ ಮಾಡಿಸಿದಂತಿದೆ.ಸ್ಪಷ್ಟ ಚಿತ್ರ, ಹಗುರ ತೂಕ ಹಾಗೂ ಅತ್ಯಾಕರ್ಷಕ     ವಿನ್ಯಾಸ- ಇವು ಅಲ್ಟ್ರಾಬುಕ್‌ನ ವಿಶೇಷತೆಗಳು. ಕೆಲವು ಅಲ್ಟ್ರಾಬುಕ್‌ಗಳು ತೀರಾ ದೊಡ್ಡ ಅಳತೆಯನ್ನೂ ಹೊಂದಿವೆ. ಉದಹರಣೆಗೆ, ಎಚ್‌ಪಿ ಕಂಪೆನಿ ಅಲ್ಟ್ರಾಬುಕ್‌ನ ಸ್ಕ್ರೀನ್ 14 ಇಂಚು ಅಳತೆಯಿದ್ದರೆ, ಸ್ಯಾಮ್‌ಸಂಗ್‌ನ ಸ್ಕ್ರೀನ್ 15 ಇಂಚು.ಅಲ್ಟ್ರಾಬುಕ್ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ `ಮ್ಯಾಕ್‌ಬುಕ್ ಏರ್~ ಇತರ ಕಂಪೆನಿಗಳ ಅಲ್ಟ್ರಾಬುಕ್‌ಗಿಂತ ತುಸು ಹೆಚ್ಚಿಗೆ ದರ ( ರೂ66,000) ನಿಗದಿಪಡಿಸಿದೆ. ಉಳಿದ ಕಂಪೆನಿಗಳಾದ ಏಸರ್, ಡೆಲ್, ಎಚ್‌ಪಿ, ಲೆನೊವೊ, ಸ್ಯಾಮ್‌ಸಂಗ್ ಹಾಗೂ ತೋಷಿಬಾ ಕಂಪೆನಿಗಳ ಅಲ್ಟ್ರಾಬುಕ್ ಬಹುತೇಕ ಒಂದೇ ಗುಣಮಟ್ಟದವು.ಅಂದರೆ- 4 ಜಿಬಿ ಮೆಮರಿ, 128 ಜಿಬಿ ಎಸ್‌ಎಸ್‌ಡಿ, 13 ಇಂಚು ಪರದೆ, ಕ್ಯಾಮೆರಾ ಕಾರ್ಡ್ ಹಾಕಲೊಂದು ಸ್ಲಾಟ್, ಎರಡರಿಂದ ಮೂರು ಯುಎಸ್‌ಬಿ ಪೋರ್ಟ್, ಟಿವಿಗೆ ಜೋಡಿಸಲೊಂಡು ಸ್ಲಾಟ್, ವೆಬ್ ಕ್ಯಾಮೆರಾ, ಮೈಕ್-ಹೆಡ್ ಫೋನ್ ಜಾಕ್ ಹಾಗೂ ಬೆಳಕು ಸೂಸುವ ಕೀಬೋರ್ಡ್. ಬಹುತೇಕ ಎಲ್ಲ ಅಲ್ಟ್ರಾಬುಕ್‌ಗಳೂ ಸುಮಾರು ಮೂರು ಪೌಂಡ್ ತೂಕವನ್ನೇ ಹೊಂದಿವೆ. ಒಮ್ಮೆ ರಿಚಾರ್ಜ್ ಮಾಡಿದರೆ ಸುಮಾರು 6 ಗಂಟೆ ಕಾಲ ಕಾರ್ಯನಿರ್ವಹಿಸುತ್ತವೆ.ಕಡಿಮೆ ವೆಚ್ಚದ ಅಲ್ಟ್ರಾಬುಕ್ ಪೈಕಿ ಈಗ ಮಾರುಕಟ್ಟೆಯಲ್ಲಿ ಇರುವುದು `ಏಸರ್ ಆಸ್ಪೈರ್ ಎಸ್3~. ಇದರ    ಬೆಲೆ-  ರೂ40,600. ಇಷ್ಟು ಕಡಿಮೆ ದರ ಹೇಗೆ?! ಇದರ ಎಸ್‌ಎಸ್‌ಡಿ 20 ಜಿಬಿ ಮಾತ್ರ. ಹೆಚ್ಚ ಸಂಗ್ರಹ ಸಾಮರ್ಥ್ಯ ಬೇಕೆಂದರೆ, ಪ್ರತ್ಯೇಕ ಹಾರ್ಡ್‌ಡ್ರೈವ್ ಬೇಕೇ ಬೇಕು! ಅಸಸ್ ಝೆನ್‌ಬುಕ್ ಯುಎಕ್ಸ್31ಇ- ಕಂದುಬಣ್ಣದ ಅಲ್ಟ್ರಾಬುಕ್‌ನ ಬೆಲೆ ರೂ. 45,700. ನೋಡಲು ಸುಂದರ; ಆದರೆ ಕೀಬೋರ್ಡ್ ಪ್ರಖರ ಬೆಳಕು ಬೀರುವುದಿಲ್ಲ.51,000 ರೂಪಾಯಿ ಬೆಲೆಯ `ಡೆಲ್ ಎಕ್ಸ್‌ಪಿಎಸ್ 13~ ಅಲ್ಟ್ರಾಬುಕ್, ಗ್ರಾಹಕರನ್ನು ಥಟ್ಟನೇ ಸೆಳೆಯುವಂಥದು. ಮೇಲ್ಭಾಗ ಅಲ್ಯೂಮಿನಿಯಂ ಹಾಗೂ ಕೆಳಭಾಗ ಕಾರ್ಬನ್ ಫೈಬರ್‌ನಿಂದ ತಯಾರಾಗಿದೆ. ಕೀಬೋರ್ಡ್ ತುಂಬ ನಾಜೂಕು. ಆದರೆ ಉಳಿದ ಅಲ್ಟ್ರಾಬುಕ್‌ಗಳಿಗಿಂತ ಸ್ವಲ್ಪ ಹೆಚ್ಚು ದಪ್ಪ ಇದೆ. ಮೆಮೊರಿ ಕಾರ್ಡ್ ತೂರಿಸಲು        ಅವಕಾಶವಿಲ್ಲ.ಲೆನೊವೊ `ಐಡಿಯಾಪ್ಯಾಡ್ ಯು300~ ಅಲ್ಟ್ರಾಬುಕ್ ಬೆಲೆ 53,000 ರೂಪಾಯಿ. ತೆಳು, ಕಪ್ಪುಬಣ್ಣದಲ್ಲಿ ಮಿರಿಮಿರಿ ಮಿಂಚುವ ಇದು ನೋಡಲು ಪುಸ್ತಕದಂತೆಯೇ ಭಾಸವಾಗುತ್ತದೆ!`ಸ್ಯಾಮ್‌ಸಂಗ್ ನೋಟ್‌ಬುಕ್ ಸಿರೀಸ್-9~ನ ಅಲ್ಟ್ರಾಬುಕ್ ಬೆಲೆ ಇವೆಲ್ಲಕ್ಕಿಂತ ಸ್ವಲ್ಪ ಅಧಿಕ. ಅಲ್ಯೂಮಿನಿಯಂ ಲೋಹದ ಕಪ್ಪುವರ್ಣದಿಂದ ಕೂಡಿದ ಈ ಅಲ್ಟ್ರಾಬುಕ್ ಸ್ಪರ್ಶಿಸುವುದೇ ಅಪ್ಯಾಯಮಾನ ಅನುಭವ. ಪರದೆಯಂತೂ ಉತ್ಕೃಷ್ಟ ನೋಟ ನೀಡುತ್ತದೆ. ಎರಡೂವರೆ ಪೌಂಡ್ ತೂಕದ ಈ ಸಾಧನ ಬಳಸುವವರಿಗೆ ಅಚ್ಚುಮೆಚ್ಚು ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ಒಂದೇ ಒಂದು ಬೆಚ್ಚಿ ಬೀಳಿಸುವ ಅಂಶವೆಂದರೆ ಇದರ ಬೆಲೆ- ರೂ 71,000 ರೂಪಾಯಿ!`ತೋಷಿಬಾ ಪೋರ್ಟ್ ಇಜಿಎ 830~ನ ವಿಶೇಷತೆ ಹಲವು. ಜಗತ್ತಿನ ಅತ್ಯಂತ ಹಗುರ ಅಲ್ಟ್ರಾಬುಕ್ ಎಂಬ ಹೆಗ್ಗಳಿಕೆ ಇದರದು. ಎರಡೂವರೆ ಪೌಂಡ್‌ಗಿಂತಲೂ ಕಡಿಮೆ ತೂಕದ ಈ ಅಲ್ಟ್ರಾಬುಕ್‌ನ ಪರದೆಯು ನೋಡಲು ಪುಸ್ತಕದ ಕವರ್‌ನಂತೆ ಭಾಸವಾಗುತ್ತದೆ. ಟಿವಿ, ಪ್ರೊಜೆಕ್ಟರ್‌ಗೆ ಸೇರಿದಂತೆ ಎಲ್ಲ ಬಗೆಯ ಕೆಲಸಕ್ಕೂ ಪ್ರತ್ಯೇಕ ಸಾಕೆಟ್‌ಗಳು ಇದರಲ್ಲಿದ್ದು, 6 ಜಿಬಿ ಮೆಮರಿ ಸಾಮರ್ಥ್ಯ ಹೊಂದಿದೆ. ಇಷ್ಟೆಲ್ಲ ಉಪಯುಕ್ತತೆ ಹೊಂದಿದ ಈ ಅಲ್ಟ್ರಾಬುಕ್ ಬೆಲೆ 58,000 ರೂಪಾಯಿ.ರೂ71,000  ಬೆಲೆಯ ಎಚ್‌ಪಿ ಕಂಪೆನಿಯ `ಎನ್‌ವಿ 14 ಸ್ಪೆಕ್ಟ್ರ್~ ಅಲ್ಟ್ರಾಬುಕ್, ಸಂಪೂರ್ಣ ಗಾಜಿನಿಂದ ತಯಾರಾಗಿದೆ. ಅಲ್ಟ್ರಾಬುಕ್‌ನ ಎರಡೂ ಭಾಗ, ಸ್ಕ್ರೀನ್, ಕೀಬೋರ್ಡ್ ಎಲ್ಲ ತಯಾರಾಗಿರುವುದೂ ಸೂಪರ್‌ಟಫ್ ಗುಣಮಟ್ಟದ ಗಾಜಿನಿಂದಲೇ.

ಕಂಪ್ಯೂಟರ್, ಲ್ಯಾಪ್‌ಟಾಪ್, ನೋಟ್‌ಬುಕ್‌ನ ಜಗತ್ತಿಗಿಂತ ಬೇರೆಯಾದ ಅಲ್ಟ್ರಾಬುಕ್ ಪರಿಕಲ್ಪನೆ ನಿಮಗಿಷ್ಟವಾದರೆ, ಲೆನೊವೊ ಹಾಗೂ ಡೆಲ್ ಕಂಪೆನಿಯ ಅಲ್ಟ್ರಾಬುಕ್ ಹೊರನೋಟಕ್ಕೆ ಇಷ್ಟವಾಗಬಹುದು.ಉತ್ತಮ ಗುಣಮಟ್ಟದ ಸ್ಕ್ರೀನ್‌ಗೆ ಸ್ಯಾಮ್‌ಸಂಗ್ ಹೇಳಿ ಮಾಡಿಸಿದಂಥದು. ಹಗುರ ಅಲ್ಟ್ರಾಬುಕ್‌ಗೆ ತೋಷಿಬಾ ಆಯ್ಕೆ ಮಾಡಿಕೊಂಡರೆ ಚೆನ್ನ. ಯಾವುದಕ್ಕೂ ನಿಮ್ಮ ಕಾರ್ಯಶೈಲಿ, ಕೆಲಸದ ವಿಧಾನಗಳನ್ನು ಆಧರಿಸಿಯೇ ಅಲ್ಟ್ರಾಬುಕ್ ಖರೀದಿ ಮಾಡಬೇಕಾದ್ದು ಮುಖ್ಯ ಎಂಬುದನ್ನು ಮರೆಯಬಾರದು.

  (ಆಧಾರ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.