ಭಾನುವಾರ, ಡಿಸೆಂಬರ್ 8, 2019
21 °C

ತೇಜಸ್ವಿ ಹುಟ್ಟಿಸಿದ ಕ್ಯಾಮೆರಾ ಗೀಳು

Published:
Updated:
ತೇಜಸ್ವಿ ಹುಟ್ಟಿಸಿದ ಕ್ಯಾಮೆರಾ ಗೀಳು

ಚೌಕಟ್ಟಿಗೆ ನಿಲುಕದ ವ್ಯಕ್ತಿತ್ವದ ಪೂರ್ಣಚಂದ್ರ ತೇಜಸ್ವಿ ಕನ್ನಡದ ಯುವ ಮನಸ್ಸುಗಳನ್ನು ಅರಳಿಸಿದ ಪರಿ ಅನನ್ಯ. ಭೌತಿಕವಾಗಿ ನಮ್ಮ ನಡುವಿನಿಂದ ಮರೆಯಾಗಿ ಐದು ವರ್ಷಗಳಾದರೂ ಅವರು ಹೊಸ ಹೊಸ ರೂಪದಲ್ಲಿ ಪ್ರಕಟವಾಗುತ್ತಲೇ ಇರುತ್ತಾರೆ.30, 40 ವರ್ಷಗಳ ಹಿಂದೆ ಅವರು ಬರೆದ ಕಥೆ ಓದಿ ಕರ್ವಾಲೊ ಆಗಲು ಹೊರಟವರು ಈಗಲೂ ಇದ್ದಾರೆ. ಆರಂಕಿ ಸಂಬಳ ಕೊಡುವ ವೈಟ್ ಕಾಲರ್ ನೌಕರಿಗೆ ರಾಜೀನಾಮೆ ಬಿಸಾಕಿ ಕೃಷಿಗೆ ಇಳಿದವರು, ಕಂಪ್ಯೂಟರ್ ಕಲೆಯ ಹುಚ್ಚು ಹತ್ತಿಸಿಕೊಂಡವರು, ಮೀನಿಗೆ ಗಾಳ ಹಾಕಿ ಕುಳಿತವರು, ಬೈನಾಕ್ಯುಲರ್, ಕ್ಯಾಮೆರಾ ಹೆಗಲಿಗೆ ಏರಿಸಿ ಹೊರಟವರು, ತೇಜಸ್ವಿ ಕರ್ಮಭೂಮಿ ನೋಡಿ ಬರಲೆಂದು ಮೂಡಿಗೆರೆಯ ಬಸ್ ಹತ್ತುವವರು ನಮ್ಮ ನಡುವೆಯೇ ಕಾಣುತ್ತಾರೆ.ನಾಲ್ಕು ವರ್ಷಗಳ ಹಿಂದೆ ತೇಜಸ್ವಿ ನೆನಪಿನಲ್ಲಿ ಹಂಪಿ ವಿಶ್ವವಿದ್ಯಾಲಯ ಏರ್ಪಡಿಸಿದ್ದ ಛಾಯಾಗ್ರಹಣ ಶಿಬಿರದಲ್ಲಿ ವನ್ಯಜೀವಿ ಛಾಯಾಗ್ರಹಣದ ಸೂಕ್ಷ್ಮ ಅರಿತ ಗ್ರಾಫಿಕ್ ಕಲಾವಿದರೊಬ್ಬರು, ಅದೇ ಗುಂಗಿನಲ್ಲಿ ಕ್ಯಾಮೆರಾ ಎತ್ತಿಕೊಂಡು ಈಗ ವನ್ಯಜೀವಿ ಛಾಯಾಗ್ರಹಣದಲ್ಲಿ ಭೇಷ್ ಅನಿಸುವಂತಹ ಸಾಧನೆ ಮಾಡಿದ್ದಾರೆ. ಕೇವಲ ನಾಲ್ಕೇ ವರ್ಷಗಳಲ್ಲಿ ಎರಡು ಅಂತರ್‌ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಲಂಡನ್‌ನ ರಾಯಲ್ ಫೋಟೊಗ್ರಾಫಿಕ್ ಸೊಸೈಟಿಯವರೆಗೆ ಈ ಯುವಕನ ಕೀರ್ತಿ ಹಬ್ಬಿದೆ. ಅನಕ್ಷರಸ್ಥ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಈ ಯುವಕನ ಸಾಧನೆ ತೇಜಸ್ವಿ ಕೃತಿಗಳಷ್ಟೇ ಕುತೂಹಲ ಹುಟ್ಟಿಸುತ್ತದೆ.ವನ್ಯಜೀವಿ ಛಾಯಾಗ್ರಹಣದಲ್ಲಿ ಏಕಲವ್ಯನಂತೆ ಸಾಧನೆ ಮಾಡಿದ ಈ ಯುವಕನ ಹೆಸರು ರಾಮು ಎಂ. `ಡೆಕ್ಕನ್ ಹೆರಾಲ್ಡ್~ ಪತ್ರಿಕೆಯಲ್ಲಿ ಗ್ರಾಫಿಕ್ ಕಲಾವಿದರಾಗಿರುವ ರಾಮು ತಮ್ಮ ವಾರದ ರಜೆ, ಹಕ್ಕಿನ ರಜೆಗಳನ್ನು ಕಳೆಯುವುದು ಕಾಡಿನಲ್ಲಿ ಅಥವಾ ಕೆರೆಯ ಅಂಚಿನಲ್ಲಿ.ಪತ್ರಿಕೆಯಲ್ಲಿ ಪುಟ ವಿನ್ಯಾಸ ಮಾಡುತ್ತಲೇ ಛಾಯಾಚಿತ್ರಗಳತ್ತ ಗಮನ ಹರಿಸಿದ್ದ ಈ ಯುವಕ, 2005ರಲ್ಲಿ ಪುಟ್ಟ ಕ್ಯಾಮೆರಾ ಖರೀದಿಸಿದ್ದರು. ತಮಗೆ ಖುಷಿ ಕಂಡ ಚಿತ್ರ ಸೆರೆಹಿಡಿಯುತ್ತಿದ್ದರು. 2008ರಲ್ಲಿ ಕುಪ್ಪಳ್ಳಿಯಲ್ಲಿ ನಡೆದ ಛಾಯಾಗ್ರಹಣ ಶಿಬಿರದಲ್ಲಿ ಪಾಲ್ಗೊಂಡಿದ್ದು ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಕುಪ್ಪಳ್ಳಿಯಿಂದ ಬಂದಿಳಿದವರು ಸೀದಾ ಹೋಗಿ ತೇಜಸ್ವಿ ಪುಸ್ತಕಗಳನ್ನೆಲ್ಲ ಗುಡ್ಡೆ ಹಾಕಿಕೊಂಡು ಕುಳಿತರು. ವನ್ಯಜೀವಿ ಛಾಯಾಗ್ರಹಣ ತಮ್ಮ ದಾರಿಯೆಂದು ಅವರಿಗೆ ಖಾತ್ರಿಯಾಯಿತು.ಹೊಸ ಕ್ಯಾಮೆರಾ ಖರೀದಿಸಿದರು. ಕುಪ್ಪಳ್ಳಿಯ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದ ರಾಜ್ಯದ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಬಿ. ಶ್ರೀನಿವಾಸ್ ರಾಮುಗೆ ಗುರುವಾದರು. ಕಾಂಕ್ರೀಟ್ ಕಾಡು ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿರುವ ರಾಮುಗೆ ಅಲ್ಲಿಂದ ಕಾಡಿನ ಗುಂಗು ಹತ್ತಿತು.ವನ್ಯಜೀವಿ ಛಾಯಾಗ್ರಹಣದಲ್ಲಿ ದಿಗ್ಗಜರು ಮಾಡಿದ ಕೆಲಸ ಅವರಿಗೆ ಸ್ಫೂರ್ತಿಯಾದರೆ, ಪಕ್ಷಿ ಛಾಯಾಗ್ರಹಣದಲ್ಲಿ ಪಕ್ಷಿ ವಿಜ್ಞಾನಿ ಸಲೀಂ ಅಲಿ ಅವರ ಪುಸ್ತಕ ಬೈಬಲ್ ಆಯಿತು.

ವನ್ಯಜೀವಿಗಳು, ಅಪರೂಪದ ಪಕ್ಷಿಗಳನ್ನು ಅರಸಿ ರಾಮು ಈಗ ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಅಲೆದಾಡಿದ್ದಾರೆ. ಅವುಗಳನ್ನು ತಮ್ಮ ಕ್ಯಾಮೆರಾ ಕಣ್ಣಲ್ಲಿ ಬಂಧಿಯಾಗಿಸಿದ್ದಾರೆ.ರಾಮು ತೆಗೆದ 350ಕ್ಕೂ ಹೆಚ್ಚು ಛಾಯಾಚಿತ್ರಗಳು ದೇಶೀಯ, ವಿದೇಶೀಯ ಪ್ರದರ್ಶನದಲ್ಲಿ ಕಾಣಿಸಿಕೊಂಡಿವೆ. ಹವ್ಯಾಸಿ ಛಾಯಾಗ್ರಾಹಕರು ಹಂಬಲಿಸುವಂತಹ ಅಂತರ್‌ರಾಷ್ಟ್ರೀಯ ಪ್ರಶಸ್ತಿಗಳೆಲ್ಲ ಅವರನ್ನು ಹುಡುಕಿಕೊಂಡು ಬಂದಿವೆ.ರಾಮು ಸೆರೆಹಿಡಿದ ಛಾಯಾಚಿತ್ರಗಳ ಪ್ರದರ್ಶನ ಪ್ರಸ್ತುತ ನಗರದಲ್ಲಿ ನಡೆಯುತ್ತಿದೆ.

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ.     ಪ್ರದರ್ಶನ ಜ. 19ರವರೆಗೆ ನಡೆಯಲಿದೆ. ಬೆಳಿಗ್ಗೆ 10ರಿಂದ ಸಂಜೆ 7.

ದೂ: 94804 27376

ಪ್ರತಿಕ್ರಿಯಿಸಿ (+)