ತೇಜಸ್‌, ಧೃತಿಗೆ ಪ್ರಶಸ್ತಿ

7
ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಕಾರ್ತಿಕ್‌ಗೆ ನಿರಾಸೆ

ತೇಜಸ್‌, ಧೃತಿಗೆ ಪ್ರಶಸ್ತಿ

Published:
Updated:

ಶಿವಮೊಗ್ಗ: ಯುವ ಪ್ರತಿಭೆ ಬೆಳಗಾವಿಯ ತೇಜಸ್‌ ಸಂಜಯ್‌ ಮತ್ತು ಧೃತಿ ಯತೀಶ್‌ ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆ ಮತ್ತು ಶಿವಮೊಗ್ಗ ಜಿಲ್ಲಾ ಬ್ಯಾಡ್ಮಿಂಟನ್‌ ಸಂಸ್ಥೆ ಆಶ್ರಯದಲ್ಲಿ ನಡೆದ ಲೀ ನಿಂಗ್‌ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ 13 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆದರು.ಭಾನುವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ತೇಜಸ್‌ 21–12, 16–21, 22–20ರಲ್ಲಿ ಎನ್‌ಜಿವಿ ಕ್ಲಬ್‌ನ  ವಿ. ಕಾರ್ತಿಕ್‌ ಅವರನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿದರು. ಬಾಲಕಿಯರ ವಿಭಾಗದಲ್ಲಿ ಇಸಿಇ ಕ್ಲಬ್‌ನ ಧೃತಿ 21–12, 21–14ರಲ್ಲಿ ರಿಲಯನ್ಸ್‌ನ ರಿಚಾ ಮುಕ್ತಿಭೋಧ ಎದುರು ಗೆಲುವು ಸಾಧಿಸಿದರು.ಬಾಲಕರ ವಿಭಾಗದ ಡಬಲ್ಸ್‌ ಪ್ರಶಸ್ತಿ ಅಜಿಂಕ್ಯ ಜೋಶಿ ಹಾಗೂ ತೇಜಸ್‌ ಸಂಜಯ್‌ ಜೋಡಿ ಗೆದ್ದುಕೊಂಡಿತು. ಫೈನಲ್‌ ಪಂದ್ಯದಲ್ಲಿ ಬೆಳಗಾವಿಯ ಈ ಆಟಗಾರರು 15–21, 21–19, 21–16ರಲ್ಲಿ ಸಿ.ಎಸ್‌. ಸಾಕೇತ್‌– ಕಾರ್ತಿಕ್‌ ಎದುರು ಗೆಲುವು ಪಡೆದರು.ಬಾಲಕರ ವಿಭಾಗದ 15 ವರ್ಷದೊಳಗಿನವರ ಸಿಂಗಲ್ಸ್‌ ಹಣಾಹಣಿಯಲ್ಲಿ ರಾಹುಲ್‌ ಬ್ಯಾನರ್ಜಿ 21–10, 21–12ರಲ್ಲಿ ಎಸ್‌. ಅಕ್ಷಯ್ ಶ್ರೀನಿವಾಸ್‌ ಅವರನ್ನು ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದರು. ಇದೇ ವಯೋಮಾನದ ಬಾಲಕಿಯರ ವಿಭಾಗದ ಸೆಮಿಫೈನಲ್‌ ಪಂದ್ಯಗಳಲ್ಲಿ ಅಪೇಕ್ಷಾ ನಾಯಕ್‌ 21–16, 21–11ರಲ್ಲಿ ರೇಣು ತಿರುಮಲ ಮೇಲೂ, ಕೆ. ಅಶ್ವಿನಿ ಭಟ್‌ 21–9, 21–13ರಲ್ಲಿ ಕೆ. ಸುರುಯು ವಿರುದ್ಧವೂ ಜಯ ಸಾಧಿಸಿ ಫೈನಲ್ ತಲುಪಿದರು.ಬಾಲಕಿಯರ ವಿಭಾಗದ ಡಬಲ್ಸ್‌ನಲ್ಲಿ ಪ್ರಕಾಶ್‌ ಪಡುಕೋಣೆ ಬ್ಯಾಡ್ಮಿಂಟನ್‌ ಅಕಾಡೆಮಿಯ ಅಪೇಕ್ಷಾ ನಾಯಕ್‌– ಧೃತಿ ಯತೀಶ್‌ ಅವರು 21–10, 15–21, 21–12ರಲ್ಲಿ ವಿ. ಸರುಯಿ ಹಾಗೂ ಶೀತಲ್‌ ಸುದರ್ಶನ್‌ ಅವರನ್ನು ಮಣಿಸಿ ಪ್ರಶಸ್ತಿಯ ಒಡೆಯರಾದರು.ಬಾಲಕಿಯರ 17 ವರ್ಷದೊಳಗಿನವರ ವಿಭಾಗದಲ್ಲಿ  ಸಿಂಗಲ್ಸ್‌ನಲ್ಲಿ ಮಹಿಮಾ ಅಗರ್‌ವಾಲ್‌ 26–24,  4–0ರಲ್ಲಿ ಶಿಖಾ  ಗೌತಮ್‌ ( ನಿವೃತ್ತಿ) ಎದುರು ‘ಅದೃಷ್ಟ’ದ ಪ್ರಶಸ್ತಿ ತಮ್ಮದಾಗಿಸಿಕೊಂಡರು.ಇದೇ ವಯೋಮಾನದ ಬಾಲಕರ ಡಬಲ್ಸ್‌ನಲ್ಲಿ ಸಾಹಿ ಸಿಪಾನಿ ಹಾಗೂ  ಬಿ.ಆರ್‌.ಸಂಕೀರ್ತ್‌ ಜೋಡಿ ಪ್ರಶಸ್ತಿ ಘಟ್ಟದ ಹೋರಾಟದಲ್ಲಿ 21–13, 21–19ರಲ್ಲಿ ಅನಿಷಾ ಉಪಾಧ್ಯ–ಯಶ್‌ ಅಮೃತ್‌ ಲಾಡ್‌ ಎದುರು ಜಯ ಪಡೆದು ಪ್ರಶಸ್ತಿ ಮಡಿಗೇರಿಸಿಕೊಂಡರು.ಫೈನಲ್‌ಗೆ ಫರೀದ್‌: ಡೇನಿಯಲ್‌ ಎಸ್‌. ಫರೀದ್‌ ಮತ್ತು ಬಿ.ಆರ್‌. ಸಂಕೀರ್ತ್‌ ಅವರು ಬಾಲಕರ 17 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. ನಾಲ್ಕರ ಘಟ್ಟದ ಹೋರಾಟದಲ್ಲಿ ಡೇನಿಯಲ್‌ 21–11, 21–11ರಲ್ಲಿ ಸಾಹಿಲ್‌ ಸಿಪಾನಿ ಮೇಲೂ, ಸಂಕೀರ್ತ್‌ 21–15, 21–10ರಲ್ಲಿ ಎಂ. ರಘು ವಿರುದ್ಧವೂ ಜಯ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry