ತೇಲುವ ಪಂಜರದಲ್ಲಿ ಮೀನು ಕೃಷಿ: 8 ಜಲಾಶಯ ಆಯ್ಕೆ

ಬೆಂಗಳೂರು: ತೇಲುವ ಪಂಜರಗಳಲ್ಲಿ ಮೀನು ಕೃಷಿ ಮಾಡುತ್ತಿರುವ ಚೀನಾ ಮಾದರಿಯನ್ನು ರಾಜ್ಯದಲ್ಲೂ ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ.
ಮೀನುಗಾರಿಕೆ ಇಲಾಖೆ ರಾಜ್ಯದ 8 ಜಲಾಶಯಗಳನ್ನು ಈ ಉದ್ದೇಶಕ್ಕಾಗಿ ಆಯ್ಕೆ ಮಾಡಿಕೊಂಡಿದೆ.
ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯದಲ್ಲಿ ಮೀನುಗಾರಿಕೆ ಇಲಾಖೆ ಕಳೆದ ವರ್ಷ ಪ್ರಾಯೋಗಿಕವಾಗಿ ತೇಲುವ ಪಂಜರಗಳಲ್ಲಿ ಮೀನು ಸಾಕಾಣಿಕೆ ಮಾಡಿ ಯಶಸ್ವಿಯಾಗಿತ್ತು.
ಈಗ ಯೋಜನೆಯನ್ನು ರಾಜ್ಯದ ಎಂಟು ಜಲಾಶಯಗಳಿಗೆ ವಿಸ್ತರಿಸಲು ಮುಂದಾಗಿದೆ. ಎಂಟು ತಿಂಗಳ ಕಾಲ ನೀರಿನ ಲಭ್ಯತೆ ಯನ್ನು ಆಧರಿಸಿ ಜಲಾಶಯಗಳನ್ನು ಆಯ್ಕೆ ಮಾಡಲಾಗಿದೆ.
ಅಣೆಕಟ್ಟೆ ಜಲ ವಿಸ್ತೀರ್ಣದ ಶೇ 10 ರಷ್ಟು ಜಾಗದಲ್ಲಿ 6 x 4 ಮೀಟರ್ ಅಳತೆಯ ಗರಿಷ್ಠ 25 ತೇಲುವ ಪಂಜರ ಗಳನ್ನು ಇರಿಸಲಾಗುತ್ತದೆ.
ಜಲಾಶಯದ ದಡದಲ್ಲಿಯೇ ಗುಣಮಟ್ಟದ ಬಲೆಗಳನ್ನು ಬಳಸಿ ಪಂಜರವನ್ನು ನಿರ್ಮಿಸಲಾಗುತ್ತದೆ. ನಂತರ ಜಲಾಶಯದ ಮಧ್ಯ ಭಾಗಕ್ಕೆ ತಳ್ಳಲಾಗುತ್ತದೆ. ಪ್ರತಿನಿತ್ಯ ಮೀನುಗಳಿಗೆ ಅಗತ್ಯ ಇರುವ ಆಹಾರವನ್ನು ಒದಗಿಸಲಾಗುತ್ತದೆ.
ಪ್ರತಿ ಪಂಜರದಲ್ಲಿ 4 ರಿಂದ 6 ಸಾವಿರ ಮೀನು ಸಾಕಾಣಿಕೆ ಮಾಡಲು ಸಾಧ್ಯ. 8 ತಿಂಗಳ ಅವಧಿಗೆ ಸರಾಸರಿ 3 ಟನ್ ಮೀನು ಉತ್ಪಾದನೆ ಆಗುತ್ತದೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.
ಪ್ರತಿ ಪಂಜರಕ್ಕೆ ಅಂದಾಜು ₹ 2 ಲಕ್ಷ ವೆಚ್ಚವಾಗಲಿದೆ. ಮೀನುಗಾರಿಕೆಯಲ್ಲಿ ಅನುಭವ ಹೊಂದಿರುವ ಕನಿಷ್ಠ ₹ 50 ಲಕ್ಷ ಬಂಡವಾಳ ಹೂಡಲು ಸಾಮರ್ಥ್ಯ ಇರುವ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ಮಾತ್ರ ಮೀನು ಸಾಕಾಣಿಕೆ ಗುತ್ತಿಗೆ ನೀಡಲಾಗುವುದು. ಈ ಯೋಜನೆ ಅನುಷ್ಠಾನಕ್ಕೆ ಮೀನುಗಾರಿಕೆ ಮೇಲುಸ್ತುವಾರಿ ಸಮಿತಿಯನ್ನೂ ರಚಿಸಲಾಗಿದೆ. ಗುತ್ತಿಗೆ ಪಡೆಯಲು ಅರ್ಜಿ ಆಹ್ವಾನಿಸಿದೆ.
ಪಂಜರಗಳಲ್ಲಿ ಎಲ್ಲಾ ಜಾತಿಯ ಮೀನುಗಳನ್ನು ಸಾಕಾಣಿಕೆ ಮಾಡುವುದು ಕಷ್ಟ. ಕೃತಕ ಆಹಾರದಿಂದ ವೇಗವಾಗಿ ಬೆಳೆಯುವ ಸಾಮರ್ಥ್ಯ ಇರುವ ಟಿಲಿಪಿಯಾ(ಜಿಲೇಬಿ) ಮತ್ತು ಪಂಗೋಷಿಯಸ್ (ಪಂಗಸ್) ಮೀನುಗಳನ್ನು ಮಾತ್ರ ಸಾಕುವುದರಿಂದ ಹೆಚ್ಚು ಲಾಭ ಗಳಿಸಬಹುದು ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತೇಲುವ ಪಂಜರಗಳಲ್ಲಿ ಮೀನು ಸಾಕಾಣಿಕೆ ಮಾಡುವ ಚೀನಾದ ಪದ್ಧತಿಯನ್ನು ಕೆ.ಆರ್. ಸಾಗರ ಜಲಾಶಯದಲ್ಲಿ ಪ್ರಯೋಗ ನಡೆಸಲಾಗಿದೆ.
–ಎಚ್.ಎಸ್. ವೀರಪ್ಪಗೌಡ, ನಿರ್ದೇಶಕರು, ಮೀನುಗಾರಿಕೆ ಇಲಾಖೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.