ಮಂಗಳವಾರ, ಮೇ 11, 2021
27 °C

ತೇವಾಂಶದ ಕೊರತೆ: ಕಮರುತ್ತಿರುವ ಹೆಸರು

ಪ್ರಜಾವಾಣಿ ವಾರ್ತೆ / ಚಂದ್ರಕಾಂತ ಬಾರಕೇರ Updated:

ಅಕ್ಷರ ಗಾತ್ರ : | |

ತೇವಾಂಶದ ಕೊರತೆ: ಕಮರುತ್ತಿರುವ ಹೆಸರು

ಗಜೇಂದ್ರಗಡ: ಬರದ ನಾಡು ಎಂದೇ ಬಿಂಬಿತಗೊಂಡಿರುವ ತಾಲ್ಲೂಕಿನಲ್ಲಿ ಮತ್ತೆ ಬರದ ಛಾಯೆ ಆವರಿಸಿದೆ!ಕೃಷಿ ಪ್ರಧಾನ ತಾಲ್ಲೂಕು ಎಂಬ ಹೆಗ್ಗಳಿಕೆ ಹೊಂದಿರುವ ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ 72 ಹೆಕ್ಟೇರ್ ಹೈಬ್ರಿಡ್ ಜೋಳ, 72 ಹೆಕ್ಟೇರ್ ಹೈಬ್ರಿಡ ಜೋಳ, 660 ಹೆಕ್ಟೇರ್ ಮೆಕ್ಕೆಜೋಳ, 118 ಹೆಕ್ಟೇರ್ ಸಜ್ಜಿ, 15,760 ಹೆಕ್ಟೇರ್ ಹೆಸರು ಒಟ್ಟು 16,760 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ.ತಾಲ್ಲೂಕಿನ 1,20,588 ಹೆಕ್ಟೇರ್ ಸಾಗುವಳಿ ಕ್ಷೇತ್ರದಲ್ಲಿ 86,235 ಹೆಕ್ಟೇರ್ ಪ್ರದೇಶವನ್ನು ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ಮೀಸಲಿರಿಸಲಾಗಿದೆ. ಇದರಲ್ಲಿ 30,200 ಹೆಕ್ಟೇರ್ ಮಸಾರಿ (ಜವಗು ಮಿಶ್ರಿತ ಕೆಂಪು) ಪ್ರದೇಶ. 56,035 ಹೆಕ್ಟೇರ್ ಎರಿ (ಕಪ್ಪು ಮಣ್ಣಿನ) ಪ್ರದೇಶವಿದೆ.ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಆರಂಭದಲ್ಲಿ ವರುಣ ತೋರಿದ ಉತ್ಸಾಹ ನಂತರದ ದಿನಗಳಲ್ಲಿ ಕಣ್ಮರೆಯಾಯಿತು. ಪರಿಣಾಮ ಸಮರ್ಪಕ ಮಳೆ ಸುರಿಯಬಹುದು ಎಂಬ ಅನ್ನದಾತನ ನಿರೀಕ್ಷೆಗಳೆಲ್ಲ ಹುಸಿಗೊಂಡವು. ಆದರೆ, ಬಿತ್ತನೆ ಕಾರ್ಯದ ಆರಂಭದಲ್ಲಿ 152.53 ಮಿ.ಲಿ. ಮೀಟರ್ ಮಳೆ ಪ್ರಮಾಣ ದಿಂದ ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡಲು ಮಾತ್ರ ಸಾಧ್ಯವಾಯಿತು. ಆದರೆ, ಬಿತ್ತನೆ ಮಾಡಿದ ಬೀಜಗಳು ಸಸಿಗಳಾಗಿ ನಿಂತಿವೆ. ಸದ್ಯ ಸಸಿಗಳಿಗೆ ಜೀವಜಲದ ಚಿಂತೆ ಎದುರಾಗಿದೆ.ಕಪ್ಪು ಮೋಡಗಳು ರೈತನ ಭರವಸೆಗಳೊಂದಿಗೆ ಚಲ್ಲಾಟವಾಡುತ್ತಿವೆ. ಹೀಗಿದ್ದರೂ ಮಳೆರಾಯ ಮುನಿಸು ತೊರೆದು ಕರುಣೆ ತೋರುತ್ತಾನೆ ಎಂಬ ವಿಶ್ವಾಸದಲ್ಲಿ ರೈತ ಸಮೂಹ ಆಗಸದತ್ತ ನೋಟ ಬೀರಿದ್ದಾನೆ.ತಾಲ್ಲೂಕಿನ ನರೇಗಲ್, ಹೊಳೆ- ಆಲೂರ ನಗರಗಳಲ್ಲಿ ಪ್ರಮುಖ ಕೇಂದ್ರಗಳಿವೆ. ಗಜೇಂದ್ರಗಡ, ಹಿರೇಹಾಳ, ಬೆಳವಣಿಕೆಗಳಲ್ಲಿ ಉಪಕೇಂದ್ರಗಳನ್ನು ತೆರೆಯಲಾಗಿದೆ. ಸೂಡಿ, ಮುಶಿಗೇರಿ, ಹಾಲಕೇರಿ, ಅಬ್ಬಿಗೇರಿ ಸೇರಿದಂತೆ ಒಟ್ಟು 11 ಭೂಚೇತನ ಕೇಂದ್ರಗಳನ್ನು ತೆರೆಯಲಾಗಿದೆ. ತಾಲ್ಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಬೀಜಗಳನ್ನು ಪೊರೈಸಲಾಗಿದೆ. ಇದರಲ್ಲಿ ಹೆಸರು-600 ಕ್ವಿಂಟಲ್, ತೊಗರಿ-52 ಕ್ವಿಂಟಲ್, ಹೈಬ್ರೀಡ್ ಜೋಳ-35 ಕ್ವಿಂಟಲ್, ಸಜ್ಜಿ-30 ಕ್ವಿಂಟಲ್  ಮೆಕ್ಕೆಜೋಳ-450 ಕ್ವಿಂಟಲ್, ಶೇಂಗಾ-200 ಕ್ವಿಂಟಲ್ ಸಂಗ್ರಹಿಸಿ ಡಲಾಗಿದೆ.ಈಗಾಗಲೇ ಬಿತ್ತನೆ ಮಾಡಿದ ರೈತರು ಮಾತ್ರ ಪೂರ್ಣ ಪ್ರಮಾಣದಲ್ಲಿ ಕೈಸುಟ್ಟಿಕೊಂಡಿದ್ದಾರೆ. ಬಿತ್ತನೆ ಮಾಡಿದ ಖರ್ಚು ಸಹ ಕೈಗೆಟುಕುತ್ತಿಲ್ಲ ಎಂದು ರೈತ ಮುಖಂಡ ಕೂಡ್ಲೆಪ್ಪ ಗುಡಿಮನಿ, ಕಳಕಪ್ಪ ಹೂಗಾರ ಕಳವಳ ವ್ಯಕ್ತಪಡಿಸುತ್ತಾರೆ.ಕೆಲ ದಿನಗಳಿಂದ ಬೀಸುತ್ತಿರುವ ಶೀತಗಾಳಿಗೆ ಕಪ್ಪು ಮೋಡಗಳು ನಿಲ್ಲದೆ ಓಡಾಡುತ್ತಿವೆ. ಹೀಗಾಗಿ ಮಳೆ ಸುರಿಯುವ ಲಕ್ಷಣಗಳು ಕ್ಷೀಣಿಸಿವೆ. ಮಳೆಸುರಿಯಲು ಇನ್ನೂ ಕಾಲ ಮಿತಿ ಇದೆ. ಹೀಗಾಗಿ ರೈತರು ಎದೆಗುಂದುವ   ಅವಶ್ಯಕತೆ ಇಲ್ಲ ಎಂದು ತಾಲ್ಲೂಕು ಕೃಷಿ ನಿರ್ದೇಶಕ ಎಸ್.ಎ.ಸೂಡಿಶೆಟ್ಟರ್ ಪತ್ರಿಕೆಗೆ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.