ತೈಲ ಅಭಾವ: ಎಂಆರ್‌ಪಿಎಲ್ ಕಾರಣ

7

ತೈಲ ಅಭಾವ: ಎಂಆರ್‌ಪಿಎಲ್ ಕಾರಣ

Published:
Updated:

ಮಂಗಳೂರು: `ಮಳೆ ಬಂದು ನೇತ್ರಾವತಿ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಿದ್ದರಿಂದ ಎಂಆರ್‌ಪಿಎಲ್ ಘಟಕಕ್ಕೆ ಏಪ್ರಿಲ್ 25ರ ಸುಮಾರಿಗೆ ಮತ್ತೆ ನೀರು ಪೂರೈಕೆ ಆರಂಭವಾಗಿದೆ. ಏ 28ರಿಂದ ಮತ್ತೆ ತೈಲ ಶುದ್ಧೀಕರಣ ಕಾರ್ಯ ಆರಂಭವಾಗಿದೆ.ನೇತ್ರಾವತಿ ನದಿಯಲ್ಲಿ ನೀರಿನ ಕೊರತೆ ಉಂಟಾಗಿ ಮಂಗಳೂರು ತೈಲ ಶುದ್ಧೀಕರಣ ಘಟಕಕ್ಕೆ (ಎಂಆರ್‌ಪಿಎಲ್) ಏಪ್ರಿಲ್ 12ರಿಂದ  15 ದಿನಗಳ ಕಾಲ ನೀರು ಪೂರೈಕೆ ಸ್ಥಗಿತವಾಗಿದ್ದರಿಂದ ರಾಜ್ಯದ ಹಲವೆಡೆ ಈಗ ಡೀಸೆಲ್, ಪೆಟ್ರೋಲ್, ಎಲ್‌ಪಿಜಿ ಅಭಾವ ಕಾಣಿಸಿಕೊಂಡಿದೆ.ಪೂರೈಕೆ ಪರಿಸ್ಥಿತಿ ಸಹಜ ಸ್ಥಿತಿಗೆ ಬರಲು ಇನ್ನೂ ಒಂದು ವಾರ ಹಿಡಿಯುವ ನಿರೀಕ್ಷೆ ಇದೆ.ಒಂದು ಬಾರಿ ಸ್ಥಗಿತಗೊಂಡ ಯಂತ್ರಗಳು ಮತ್ತೆ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ನಡೆಸಬೇಕಾದರೆ ಒಂದು ವಾರ ಬೇಕಾಗುತ್ತದೆ. ಇದರಿಂದಾಗಿಯೇ ತೈಲ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿದೆ~ ಎಂದು `ಎಂಆರ್‌ಪಿಎಲ್~ನ ಹಿರಿಯ ಅಧಿಕಾರಿ  ಬಿ.ಕೆ.ವಾಸು ಶುಕ್ರವಾರ `ಪ್ರಜಾವಾಣಿ~ಗೆ ತಿಳಿಸಿದರು.`ಎಂಆರ್‌ಪಿಎಲ್~ಗೆ ತೈಲ ಉತ್ಪಾದನೆಯ ಹೊಣೆಗಾರಿಕೆ ಮಾತ್ರ ಇದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳಾದ ಐಒಸಿ, ಎಚ್‌ಪಿ ಮತ್ತು ಬಿಪಿಸಿ ಕಂಪೆನಿಗಳು ಮಾರಾಟ ಹೊಣೆ ಹೊತ್ತುಕೊಂಡಿವೆ.`ಎಂಆರ್‌ಪಿಎಲ್~ನಲ್ಲಿ ಉತ್ಪಾದನೆ ಸ್ಥಗಿತಗೊಂಡರೂ ತೈಲ ಪೂರೈಕೆಗೆ ಬದಲಿ ವ್ಯವಸ್ಥೆ ಮಾಡಲಾಗುವುದು ಎಂದು ಈ ಕಂಪೆನಿಗಳು ಈ ಮೊದಲು ಹೇಳಿದ್ದವು. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಅವುಗಳು ವಿಫಲವಾಗಿರುವುದು ಸದ್ಯದ ಪರಿಸ್ಥಿತಿಯಿಂದ ಸ್ಪಷ್ಟವಾಗಿದೆ.ನೀರಿನ ಕೊರತೆಯಿಂದಾಗಿ ಏಪ್ರಿಲ್ 13ರಂದು `ಎಂಆರ್‌ಪಿಎಲ್~ನ 2ನೇ ಮತ್ತು 3ನೇ ಘಟಕಗಳಲ್ಲಿನ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. ವರ್ಷಕ್ಕೆ ಸುಮರು 3.8 ದಶಲಕ್ಷ ಟನ್ ತೈಲ ಸಂಸ್ಕರಿಸುವ 2ನೇ ಘಟಕವನ್ನು ವಾರ್ಷಿಕ ನಿರ್ವಹಣೆಗಾಗಿ ಏ 17ರಂದು ಸ್ಥಗಿತಗೊಳಿಸುವ ಯೋಜನೆ ಇತ್ತು.ನೀರಿನ ಕೊರತೆಯಿಂದಾಗಿ 4 ದಿನ ಮೊದಲೇ ಅದನ್ನು ಸ್ಥಗಿತಗೊಳಿಸಲಾಗಿತ್ತು. ಸುಮಾರು 3 ದಶಲಕ್ಷ ಟನ್ ಉತ್ಪಾದನಾ ಸಾಮರ್ಥ್ಯದ 3ನೇ ಸ್ಥಾವರದಲ್ಲಿ ಉತ್ಪಾದನಾ ಕಾರ್ಯ ಇತ್ತೀಚೆಗಷ್ಟೇ ಆರಂಭವಾಗಿತ್ತು. ಹೀಗಾಗಿ ಈ ಎರಡೂ ಘಟಕಗಳು ಸ್ಥಗಿತಗೊಂಡಿದ್ದರಿಂದ ಅಂತಹ ಪರಿಣಾಮ ಉಂಟಾಗಿರಲಿಲ್ಲ.ಆದರೆ, ನೀರಿನ ಕೊರತೆಯಿಂದಾಗಿ ಏ. 18ರಿಂದ ವರ್ಷಕ್ಕೆ 4.68 ದಶಲಕ್ಷ ಟನ್ ಉತ್ಪಾದಿಸುವ 1ನೇ ಘಟಕದಲ್ಲಿ ಉತ್ಪಾದನಾ ಕಾರ್ಯ ಸಂಪೂರ್ಣವಾಗಿ ಸ್ಥಗಿತವಾಗಿದ್ದೇ ಸದ್ಯದ ಬಿಕ್ಕಟ್ಟಿಗೆ ಕಾರಣವಾಗಿದೆ.

ಈ 15 ದಿನಗಳ ಅವಧಿಯಲ್ಲಿ 190 ಸಾವಿರ ಟನ್‌ನಷ್ಟು ಡೀಸೆಲ್, 40 ಸಾವಿರ ಟನ್‌ನಷ್ಟು ಪೆಟ್ರೋಲ್ ಮತ್ತು 10 ಸಾವಿರ ಟನ್‌ನಷ್ಟು ಎಲ್‌ಪಿಜಿ ಉತ್ಪಾದನೆ ಸ್ಥಗಿತಗೊಂಡಿತ್ತು.ಇಷ್ಟು ಪ್ರಮಾಣದಲ್ಲಿ ಇತರ ತೈಲ ಶುದ್ಧೀಕರಣ ಘಟಕಗಳಿಂದ ತರಿಸಿಕೊಂಡು ಪೂರೈಸುವುದು ತೈಲ ಕಂಪೆನಿಗಳಿಗೆ ಸಾಧ್ಯವಾಗದೆ ತೈಲ ಪೂರೈಕೆ ಬಿಕ್ಕಟ್ಟು ಎದುರಾಗಿದೆ.  ಕೊಳವೆ ಮಾರ್ಗದಲ್ಲಿ ತೈಲ ಸಾಗಾಟ ಒಮ್ಮೆ ಸ್ಥಗಿತಗೊಂಡು ಪುನರಾರಂಭವಾಗಲು ಸುಮಾರು 15 ದಿನ ಬೇಕಾಗುತ್ತದೆ.ನೀರೇ ಆಧಾರ: ಮಂಗಳೂರು ಜನತೆಯ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಎಂಬ ಸರ್ಕಾರದ ಧೋರಣೆಯನ್ನು ಹೈಕೋರ್ಟ್ ಸಹ ಎತ್ತಿ ಹಿಡಿದಿತ್ತು.ನಗರಕ್ಕೆ ಕುಡಿಯುವ ನೀರಿಗೇ ಬರ ಬಂದಾಗ `ಎಂಆರ್‌ಪಿಎಲ್~ ನಂತಹ ಕಂಪೆನಿಗಳಿಗೆ ನೀರು ಪೂರೈಸುವುದರ ಬದಲಿಗೆ ಕುಡಿಯುವ ನೀರು ಪೂರೈಸುವುದಕ್ಕೆ ಆದ್ಯತೆ ನೀಡಿದ್ದು ಸರಿ ಎಂದು ಹೈಕೋರ್ಟ್ ಹೇಳಿತ್ತು.ಆದರೆ ಮಳೆ ಬಂದ ತಕ್ಷಣ , ಕಂಪೆನಿಗೆ ನೀರು ಒದಗಿಸಿ ತೈಲ ಉತ್ಪಾದನೆಗೆ ಅವಕಾಶ ಮಾಡಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಮಾರ್ಪಾಡು ಮಾಡಿ ಹೇಳಿತ್ತು.ಮಂಗಳೂರಿನ ಕುಡಿಯುವ ನೀರಿನ ಮೂಲವಾಗಿರುವ ತುಂಬೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆ ಇದ್ದು, ಹೊಸದಾಗಿ ಅಣೆಕಟ್ಟು ನಿರ್ಮಿಸುವ ಯೋಜನೆ ಆರಂಭವಾಗಿದ್ದರೂ, ಕಳೆದ ಮೂರು ವರ್ಷಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ.ಇದೆಲ್ಲದರ ಪರಿಣಾಮ ಈ ಬಾರಿ `ಎಂಆರ್‌ಪಿಎಲ್~ ಸ್ಥಾವರವೇ ಸುಮಾರು 15 ದಿನ ಸ್ಥಗಿತಗೊಳ್ಳುವಂತಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry