ತೈಲ ಬೆಲೆ ಏರಿಕೆಗೆ ಮುಕ್ತ ನೀತಿ ಕಾರಣ

7

ತೈಲ ಬೆಲೆ ಏರಿಕೆಗೆ ಮುಕ್ತ ನೀತಿ ಕಾರಣ

Published:
Updated:

ಕಳೆದ ವಾರ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆಯನ್ನು ರೂ.2.54ರಷ್ಟು ಏರಿಸಿದ್ದು ಆರು ತಿಂಗಳಲ್ಲಿ ಹೆಚ್ಚಿಸಿದ ಆರನೇ ಬೆಲೆ ಏರಿಕೆ! ಕಳೆದ ಒಂದು ವರ್ಷದಲ್ಲಿ ಒಟ್ಟಾರೆ ಪೆಟ್ರೋಲ್ ಬೆಲೆ ಏರಿಕೆ 9.58ರೂಪಾಯಿನಷ್ಟು ಆಗಿದೆ. ಇದಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾಗುತ್ತಿರುವುದೇ ಕಾರಣವೆಂದು ಸರ್ಕಾರ ಸಬೂಬು ನೀಡುತ್ತಿದೆ.ಕಳೆದ ವರ್ಷ ಅಂತರರಾಷ್ಟ್ರೀಯ ತೈಲ ಬೆಲೆ ಒಂದು ಬ್ಯಾರೆಲ್‌ಗೆ 91.5 ಡಾಲರ್ ಇದ್ದದ್ದು ಈಗ 92 ಡಾಲರ್ ಆಗಿದೆ. ಆದರೆ ಪೆಟ್ರೋಲ್ ಬೆಲೆ ಲೀಟರ್‌ಗೆ ಕಳೆದ ಒಂದು ವರ್ಷದಲ್ಲಿ 10ರೂ. ಏರಿಬಿಟ್ಟಿದೆ!  2008ರಲ್ಲಿ ತೈಲ ಬೆಲೆ ಬ್ಯಾರೆಲ್‌ಗೆ 130 ಡಾಲರ್‌ನಷ್ಟು ಏರಿತ್ತು. ಆಗ ಭಾರತದಲ್ಲಿ ಏಕಾಏಕಿ ಪೆಟ್ರೋಲ್ ಬೆಲೆ 38 ರೂನಿಂದ 45 ರೂ ಗೆ ಏರಿತು. ನಂತರ ಕಚ್ಚಾತೈಲದ ಬೆಲೆ 70 ಡಾಲರ್‌ಗೆ ಕುಸಿದರೂ ಭಾರತದ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಇಳಿಯಲೇ ಇಲ್ಲ. ಹೀಗಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಳಕ್ಕೂ ಭಾರತದ ಪೆಟ್ರೋಲ್ ಉತ್ಪನ್ನಗಳ ಬೆಲೆ ಏರಿಕೆಗೂ ಯಾವುದೇ ಸಂಬಂಧವಿಲ್ಲ.ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಲು ಪ್ರಧಾನ ಕಾರಣ ಕಿರೀತ್ ಪಾರಿಖ್ ವರದಿಯನುಸಾರ ಸರ್ಕಾರವು ತೈಲ ಬೆಲೆ ನಿಯಂತ್ರಣವನ್ನು ಕೈಬಿಟ್ಟಿರುವುದು ಮತ್ತು ತೈಲ ವಿತರಣೆಯಲ್ಲಿ ಖಾಸಗಿ ಕಂಪೆನಿಗಳಿಗೆ ಅವಕಾಶ ಮಾಡಿಕೊಟ್ಟಿರುವುದು.ಸರ್ಕಾರಿ ತೈಲ ಕಂಪೆನಿಗಳ ಬೆಲೆಗೂ ಖಾಸಗಿ ತೈಲ ಕಂಪೆನಿಗಳ ಬೆಲೆಗೂ ವ್ಯತ್ಯಾಸವಿರುವುದರಿಂದ ಖಾಸಗಿ ಕಂಪೆನಿಗಳ ಲಾಭದ ಮೇಲೆ ಪೆಟ್ಟು ಬೀಳುತ್ತದೆಂಬ ಏಕೈಕ ಕಾರಣದಿಂದ ಆರು ತಿಂಗಳ ಕೆಳಗೆ ಸರ್ಕಾರಿ ತೈಲೋತ್ಪನ್ನಗಳ ಬೆಲೆಯನ್ನೂ ಏರಿಸಲಾಯಿತು.ಇದಲ್ಲದೆ, ಪೆಟ್ರೋಲಿಯಂ ಉತ್ಪನ್ನಗಳ ಮಾರುಕಟ್ಟೆಗೆ ಸರ್ಕಾರ ಇನ್ನೂ 53,000 ಕೋಟಿ ರೂಪಾಯಿ ಸಬ್ಸಿಡಿ ಕೊಡುತ್ತಿದ್ದು ಅದನ್ನು ನಿಲ್ಲಿಸಬೇಕೆಂದು ತೈಲೋತ್ಪನ್ನದ ಮಾರುಕಟ್ಟೆ ವಹಿವಾಟಿನಲ್ಲಿರುವ ರಿಲಯನ್ಸ್, ಎಸ್ಸಾರ್, ಶೆಲ್ ಹಾಗೂ ಇನ್ನಿತರ ಖಾಸಗಿ ಕಂಪೆನಿಗಳು ಕಡ್ಡಾಯ ಮಾಡಿವೆ. ವಿತ್ತೀಯ ಕೊರತೆಯನ್ನು ಕಡಿಮೆ ಮಾಡಬೇಕೆಂಬ ಹೆಸರಿನಲ್ಲಿ ವಿಶ್ವಬ್ಯಾಂಕ್ ಸಹ ಷರತ್ತು ವಿಧಿಸಿದೆ.ಹೀಗಾಗಿ ಈಗ ಕೊಡುತ್ತಿರುವ ಸಬ್ಸಿಡಿಯನ್ನೂ ಹಿಂತೆಗೆದುಕೊಂಡಲ್ಲಿ ಬರಲಿರುವ ದಿನಗಳಲ್ಲಿ ಅಡುಗೆ ಅನಿಲ ಮತ್ತು ಸೀಮೆ ಎಣ್ಣೆ ಬೆಲೆಯೂ ಹೆಚ್ಚಾಗಲಿದೆ.ಈ  ಮಧ್ಯೆ ಕರ್ನಾಟಕ ಸರ್ಕಾರ ಇತರ ಯಾವುದೇ ರಾಜ್ಯಗಳಿಗಿಂತಲೂ ತೈಲದ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸುತ್ತಿದೆ. ರಾಜ್ಯ ಸರ್ಕಾರ ತನ್ನ ತೆರಿಗೆಯನ್ನಾದರೂ ಕಡಿಮೆ ಮಾಡದಿದ್ದರೆ ಜನರ ಸಂಕಷ್ಟವಂತು ಕಡಿಮೆ ಆಗಲಾರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry