ತೈಲ ಬೆಲೆ ಏರಿಕೆ : ಹಣದುಬ್ಬರ ಭೀತಿ
ನವದೆಹಲಿ (ಪಿಟಿಐ): ತೈಲ ಬೆಲೆ ಹೆಚ್ಚಳದಿಂದ ಒಟ್ಟಾರೆ ಹಣದುಬ್ಬರ ದರ ಏರುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ಗೆ ಹಣಕಾಸು ಸಚಿವಾಲಯ ಕೋರಿದೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮುಂದುವರೆದಿರುವ ರಾಜಕೀಯ ಬಿಕ್ಕಟ್ಟಿನಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ತೀವ್ರವಾಗಿ ಏರುತ್ತಿದ್ದು, ಇದು ದೇಶೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
‘ಆರ್ಬಿಐ’ ಮಾರ್ಚ್ 17 ರಂದು ತನ್ನ ಮಧ್ಯಂತರ ತ್ರೈಮಾಸಿಕ ವಿತ್ತೀಯ ಪರಾಮರ್ಶೆ ಪ್ರಕಟಿಸುವ ಸಾಧ್ಯತೆ ಇದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಸೂಚನೆ ರವಾನಿಸಿದ್ದಾರೆ.
ಹಣದುಬ್ಬರ ಏರಿಕೆ ನಿಯಂತ್ರಿಸಲು ಮಾರ್ಚ್ 2010ರ ನಂತರ ‘ಆರ್ಬಿಐ’ ಏಳು ಬಾರಿ ಅಲ್ಪಾವಧಿ ಬಡ್ಡಿ ದರಗಳಾದ ರೆಪೊ ಮತ್ತು ರಿಸರ್ವ್ ರೆಪೊ ದರಗಳನ್ನು ಹೆಚ್ಚಿಸಿದೆ. ಜಾಗತಿಕ ಆರ್ಥಿಕ ಮುಗ್ಗಟ್ಟಿನ ನಂತರ ಎಲ್ಲ ದೇಶಗಳೂ ಚೇತರಿಕೆಯ ಹಾದಿಯಲ್ಲಿದ್ದವು. ಈಗ ಮತ್ತೆ ಕಚ್ಚಾ ತೈಲ ಬೆಲೆಯ ಅಸ್ಥಿರತೆ ಸೃಷ್ಟಿಯಾಗಿರುವುದು ದೇಶಗಳ ಆರ್ಥಿಕ ವೃದ್ಧಿ ದರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಪ್ರಣವ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.