ತೈಲ ಬೆಲೆ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

7

ತೈಲ ಬೆಲೆ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

Published:
Updated:

ಬಳ್ಳಾರಿ: ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆ ಮಾಡಿರುವ ಕೇಂದ್ರದ ಯುಪಿಎ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ,  ಬಿಜೆಪಿ ಜಿಲ್ಲಾ ಘಟಕದ ಸದಸ್ಯರ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ಯುಪಿಎ ಸರ್ಕಾರದ ಅಸಮರ್ಪಕ ಆರ್ಥಿಕ ನೀತಿಗಳಿಂದಾಗಿ ಡಾಲರ್ ಎದುರು ರೂಪಾಯಿ ಅಪಮೌಲ್ಯವಾಗುತ್ತಿದ್ದು, ಇದರಿಂದಾಗಿಯೇ ತೈಲ ಬೆಲೆ ಏರಿಕೆಯಾಗಿದೆ ಎಂಬ ಹೇಳಿಕೆ ನೀಡಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ. ಅಲ್ಲದೆ, ಪ್ರಧಾನಿ  ಮನಮೋಹನ್ ಸಿಂಗ್ ಹಾಗೂ ಹಣಕಾಸು ಸಚಿವ ಪಿ.ಚಿದಂಬರಂ ಅವರು ರೂಪಾಯಿ ಮೌಲ್ಯ ಕುಸಿತದ ತಡೆಗೆ ಅಗತ್ಯ ಸುಧಾರಣಾ ಕ್ರಮ ಕೈಗೊಳ್ಳುವಲ್ಲಿ ಹಾಗೂ ದೇಶದ ಆರ್ಥಿಕ ವ್ಯವಸ್ಥೆ ನಿರ್ವಹಣೆಯಲ್ಲಿ  ಸಂಪೂರ್ಣ ವಿಫಲವಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಕಳೆದ ಎರಡು ತಿಂಗಳಲ್ಲಿ ಪೆಟ್ರೋಲ್ ಬೆಲೆಯನ್ನು 6 ಬಾರಿ ಏರಿಕೆ ಮಾಡಲಾಗಿದ್ದು, 8 ತಿಂಗಳಿನಲ್ಲಿ 8ಬಾರಿ ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ರೂ 100 ಕ್ಕೆ ಏರಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನಿತ್ಯವೂ ಅಗತ್ಯ ವಸ್ತುಗಳ ಬೆಲೆ ಗಣನೀಯ ಏರಿಕೆಯಿಂದಾಗಿ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ದೂರಲಾಯಿತು.ತೈಲ ಬೆಲೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಲ್ಲದೆ, ಪ್ರಯಾಣ ದರವೂ ಏರಿಕೆ ಕಂಡಿದ್ದು, ಇದರಿಂದಾಗಿ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಜನತೆ ನಿತ್ಯವೂ ತೊಂದರೆ ಅನುಭವಿಸುವಂತಾಗಿದ್ದು, ಕೂಡಲೇ ತೈಲ ಬೆಲೆ ಹಾಗೂ ಅಡುಗೆ ಅನಿಲ ಬೆಲೆ ಹಿಂಪಡೆಯುವ ಮೂಲಕ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಯಿತು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋನಾಳ್ ಮುರಾರಿಗೌಡ, ಉಪಾಧ್ಯಕ್ಷ ಎಚ್.ಹನುಮಂತಪ್ಪ, ನಗರ ಘಟಕದ ಅಧ್ಯಕ್ಷ ವೇಮಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಸುಮಾರೆಡ್ಡಿ, ಮುಖಂಡರಾದ ಜಗದೀಶ, ಕುಂದಾಪುರ ನಾಗರಾಜ, ಪಿ.ಹುಚ್ಚೀರಪ್ಪ, ಯಾಳ್ಪಿ ತಿಮ್ಮಪ್ಪ, ಜಿ.ವಿ.ಶೇಖರ್, ಜಿ.ಎಸ್.ಶಿವಾರೆಡ್ಡಿ,ರಾಮಚಂದ್ರಪ್ಪ, ಶಾಂತಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.    ಮೂಲ ಸೌಲಭ್ಯ ಕಲ್ಪಿಸಲು ಆಗ್ರಹ

ಬಳ್ಳಾರಿ:
ತಾಲ್ಲೂಕಿನ ಬಿ.ಬೆಳಗಲ್ಲು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಿವಿಧ ಕಾರ್ಖಾನೆಗಳಿಂದ ಹೊರಸೂಸುವ ದೂಳಿನಿಂದಾಗಿ ಸುತ್ತಲಿನ ಜನತೆಗೆ ಉಂಟಾಗುವ ತೊಂದರೆಯನ್ನು ತಪ್ಪಿಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಘಟಕದ ಸದಸ್ಯರು ತಾಲ್ಲೂಕಿನ ಜಾನೆಕುಂಟೆ ಗ್ರಾಮದಿಂದ ನಗರದ ಜಿಲ್ಲಾಧಿಕಾರಿ ಕಚೇರಿವರೆಗೂ ಸೋಮವಾರ ಪಾದಯಾತ್ರೆ  ನಡೆಸಿದರು.ತಾಲ್ಲೂಕಿನ ಬಿ. ಬೆಳಗಲ್ಲು, ಬೆಳಗಲ್ಲು ತಾಂಡ, ಜಾನೆಕುಂಟೆ, ಜಾನೆಕುಂಟೆ ತಾಂಡ ಮತ್ತು ಹರಗಿನಡೋಣಿ ಗ್ರಾಮಗಳ ಸುತ್ತಲೂ ಇರುವ ಕಾರ್ಖಾನೆಗಳಿಂದ ನಿತ್ಯವೂ ಹೊರಹಾಕುವ ದೂಳು ಹಾಗೂ ತ್ಯಾಜ್ಯ ವಸ್ತುಗಳಿಂದ ಗ್ರಾಮಗಳ ಸುತ್ತಲಿನ ಗದ್ದೆಗಳಲ್ಲಿ ಬೆಳೆಹಾನಿಯಾಗುತ್ತಿದ್ದು, ಜನತೆ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಎಂ.ಬಸವರಾಜಸ್ವಾಮಿ ದೂರಿದರು.ಈ ಗ್ರಾಮಗಳ ಪ್ರದೆಶದಲ್ಲಿ ಹಲವು ಕಲ್ಲಿನ ಕ್ರಷರ್‌ಗಳು ಹಾಗೂ ಕಾರ್ಖಾನೆಗಳನ್ನು ಅನಧೀಕೃತವಾಗಿ ನಡೆಸುತ್ತಿದ್ದು, ಕೂಡಲೇ ಅಂತಹ ಕಾರ್ಖಾನೆಗಳನ್ನು ಸ್ಥಗಿತಗೊಳಿಸುವ ಮೂಲಕ ಗ್ರಾಮದ ಜನತೆಗೆ ಅನುಕೂಲ ಮಾಡಿಕೊಡಬೇಕು, ಕಾರ್ಖಾನೆಗಳ ದೂಳಿನಿಂದಾಗಿ ನಷ್ಟಕ್ಕೊಳಗಾದ ರೈತರಿಕೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು, ಬೆಳಗಲ್, ಹರಗಿನಡೋಣಿ, ಜಾನೆಕುಂಟೆ ಸೇರಿದಂತೆ  ಸುತ್ತಲಿನ ಗ್ರಾಮಗಳಲ್ಲಿ  ಶುದ್ಧ ಕುಡಿಯುವ ನೀರು, ಸಾರಿಗೆ ಸೌಲಭ್ಯ, ಶೌಚಾಲಯ  ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು.

ಜಾನೆಕುಂಟೆ ಗ್ರಾಮದ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಬೇಕು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮೂಲ ಸೌಲಭ್ಯ ಒದಗಿಸಬೇಕು, ಗ್ರಾಮದಲ್ಲಿ ವಿದ್ಯಾರ್ಥಿ ವಸತಿ ನಿಲಯ ನಿರ್ಮಿಸಲು ಜಿಲ್ಲಾಧಿಕಾರಿಯವರು ಆದೇಶ ನೀಡಿದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿಯವರು ವಿಳಂಬ ಮಾಡುತ್ತಿದ್ದು, ಕೂಡಲೇ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕು ಗ್ರಾಮಗಳಲ್ಲಿ ರಸ್ತೆಗಳು ಹಾಳಾಗಿದ್ದು, ದುರಸ್ತಿಗೊಳಿಸಬೇಕು ಎಂಬ ಮತ್ತಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.    ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಆತ್ಮಾನಂದರೆಡ್ಡಿ, ಶಿವಕುಮಾರ್, ಸದಸ್ಯರಾದ ಸಿದ್ದು, ಜಗನ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry