ತೈಲ ಲೂಟಿಗೆ ರಂಗ ಸಜ್ಜು

7

ತೈಲ ಲೂಟಿಗೆ ರಂಗ ಸಜ್ಜು

Published:
Updated:

ಮುಅಮ್ಮರ್ ಗಡಾಫಿ  ಹತ್ಯೆಯೊಂದಿಗೆ ಲಿಬಿಯಾ ಇತಿಹಾಸದ ಕ್ರೂರ ಅಧ್ಯಾಯ ಅಂತ್ಯವಾಗಿ ರಕ್ತದ ಮಡುವಿನಲ್ಲಿ ಹೊಸ ಲಿಬಿಯಾ ಉದಯವಾಗಿದೆ.ಕ್ರೌರ್ಯ ಮತ್ತು ಸಾವಿನ ಭೀತಿ ಹುಟ್ಟಿಸುವಂಥ ವ್ಯವಸ್ಥೆಯನ್ನು ಕಟ್ಟಿ ಅದರ ಮೂಲಕ 42 ವರ್ಷಗಳ ಕಾಲ ಅಧಿಕಾರ ನಡೆಸಿದ ಗಡಾಫಿಯ ಹತ್ಯೆ, ಮಾನವ ಹಕ್ಕು ಮತ್ತು ನ್ಯಾಯದ ಆಧಾರದ ಮೇಲೆ ಹೊಸ ದೇಶ ಕಟ್ಟುವುದಾಗಿ ಘೋಷಿಸಿದ್ದ ಬಂಡಾಯಗಾರರಿಂದಲೇ ಆದದ್ದು ಒಂದು ವಿಪರ್ಯಾಸ.

 

ಗಡಾಫಿಯನ್ನು ಸೆರೆ ಹಿಡಿದು ಅಂತರರಾಷ್ಟ್ರೀಯ ನ್ಯಾಯಾಲಯದ ಮುಂದೆ ವಿಚಾರಣೆಗೆ ನಿಲ್ಲಿಸಿದ್ದರೆ, ತೈಲ ಒಪ್ಪಂದಗಳಿಗೆ ಸಂಬಂಧಿಸಿದಂತೆ ಪಾಶ್ಚಿಮಾತ್ಯ ದೇಶಗಳ ನಾಯಕರಿಗೆ ಮುಜುಗರ ಉಂಟುಮಾಡಬಹುದಾದಂಥ ರಹಸ್ಯಗಳನ್ನು ಅವರು ಬಯಲು ಮಾಡುವ ಸಾಧ್ಯತೆ ಇತ್ತು. ಹೀಗಾಗಿ ಆ ದೇಶಗಳ ನಾಯಕರು ಗಡಾಫಿ ಹತ್ಯೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಲಿಬಿಯಾದ ಸಂಧಿಕಾಲದ ಆಡಳಿತ ಮಂಡಲಿಗೂ ಮುಂದೆ ಕಾಡಬಹುದಾಗಿದ್ದ ದೊಡ್ಡ ಸಮಸ್ಯೆಯೊಂದು ಸುಲಭವಾಗಿ ಬಗೆಹರಿದಂತಾಗಿದೆ.  ಲಿಬಿಯಾ ತೈಲ ಸಂಪನ್ಮೂಲ ಶ್ರೀಮಂತ ದೇಶ. ಗಡಾಫಿ  ಕಾಲದಲ್ಲಿ ಭಾರಿ ಕಷ್ಟಕ್ಕೆ ಸಿಲುಕಿದ್ದ ವಿವಿಧ ದೇಶಗಳ ತೈಲ ಕಂಪೆನಿಗಳು ತೈಲ ಲೂಟಿಗೆ ಇದೀಗ ಮುನ್ನುಗ್ಗಲಿವೆ.ಅದಕ್ಕೆ ಬೇಕಾದ ಭೂಮಿಕೆಯನ್ನು ಸಿದ್ಧಮಾಡುವ ಪ್ರಯತ್ನಗಳನ್ನು ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತಿತರ ರಾಷ್ಟ್ರಗಳು ಈಗಾಗಲೇ ಆರಂಭಿಸಿವೆ. ಆದರೆ ಲಿಬಿಯಾದಲ್ಲಿ ಕಾನೂನು ಸುವ್ಯವಸ್ಥೆ ಸ್ಥಾಪಿಸುವುದು ಅಷ್ಟು ಸುಲಭದ ಕೆಲಸವಲ್ಲ.ಈಗ ಅಸ್ತಿತ್ವದಲ್ಲಿರುವ ಸಂಧಿಕಾಲದ ಆಡಳಿತ ಮಂಡಲಿಗೆ ದೇಶದ ಎಲ್ಲ ಜನರ ಬೆಂಬಲ ಇಲ್ಲ. ಅಧಿಕಾರ ಕಬಳಿಸಲು ವಿವಿಧ ಗುಂಪುಗಳು ಪೈಪೋಟಿಗೆ ಇಳಿಯುವ ಸಾಧ್ಯತೆ ಇದೆ.ಈಗ ಬಂದೂಕು ಇಲ್ಲದವರೇ ಆ ದೇಶದಲ್ಲಿ ಇಲ್ಲ. ಎಲ್ಲರೂ ತಮ್ಮಲ್ಲಿರುವ ಬಂದೂಕುಗಳನ್ನು ಸರ್ಕಾರಕ್ಕೆ ಒಪ್ಪಿಸಿದರೆ ಮಾತ್ರ ಅಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪಿತವಾಗಲು ಸಾಧ್ಯ. ದೇಶ ಕಟ್ಟುವ ದಿಸೆಯಲ್ಲಿ ಅಂಥ ಬದಲಾವಣೆ ತರಬಲ್ಲಂಥ ನಾಯಕತ್ವ ದೇಶಕ್ಕೆ ಅಗತ್ಯವಿದೆ. ಅಂಥ ನಾಯಕತ್ವ ಸಿಗದೆ ಹೋದರೆ ಅಥವಾ ಜನರು ದೇಶ ಕಟ್ಟುವ ಕಾರ್ಯದಲ್ಲಿ ತೊಡಗದೆ ಹೋದರೆ ಅದು ಮತ್ತೊಂದು ಇರಾಕ್ ಆಗುವ ಸಂಭವವಿದೆ.ಪ್ರಜಾತಂತ್ರ ಮತ್ತು ಮಾನವ ಹಕ್ಕುಗಳ ರಕ್ಷಣೆ ಹೆಸರಿನಲ್ಲಿ ಅಮೆರಿಕ ನೇತೃತ್ವದಲ್ಲಿನ ಕೆಲವು ದೇಶಗಳು ಗಡಾಫಿ ವಿರುದ್ಧದ ಬಂಡಾಯಗಾರರಿಗೆ ಮಿಲಿಟರಿ ನೆರವು ನೀಡಿದ್ದಕ್ಕೆ ಮತ್ತು `ನ್ಯಾಟೊ~ ಯುದ್ಧ ವಿಮಾನಗಳು ದಾಳಿ ನಡೆಸಿದ್ದಕ್ಕೆ ತೈಲ ಹಿತಾಸಕ್ತಿಯೇ ಕಾರಣ.

 

ಇರಾಕ್ ನಂತರ ಇದೀಗ ಲಿಬಿಯಾ, ಮುಂದೆ ಯಾವ ದೇಶ ಎಂದು ಕೇಳುವಂತಾಗಿದೆ. ಅಮೆರಿಕಕ್ಕೆ ಸಿರಿಯಾ, ಯೆಮನ್‌ನಲ್ಲಿ ನಡೆಯುತ್ತಿರುವ ದೌರ್ಜನ್ಯ ಮುಖ್ಯವಲ್ಲ. ಏಕೆಂದರೆ ಆ ದೇಶಗಳಲ್ಲಿ ತೈಲ ಇಲ್ಲ!ತಾನು ಹೇಳಿದಂತೆ ಕೇಳದವರನ್ನು ಮುಗಿಸುವ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಈ ದುಂಡಾವರ್ತಿಗೆ ಕಡಿವಾಣ ಹಾಕದಿದ್ದರೆ ಸ್ವತಂತ್ರ ನೀತಿಗಳನ್ನು ಹೊಂದಿರುವ ದೇಶಗಳಿಗೆ ಅಪಾಯ ಕಟ್ಟಿಟ್ಟದ್ದು. ಈ ದಿಕ್ಕಿನಲ್ಲಿ ಭಾರತ, ಚೀನಾ, ಬ್ರೆಜಿಲ್ ಮುಂತಾದ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಯೋಚಿಸಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry