ತೈಲ ಸಂಗ್ರಹಾಗಾರ ಕಾಮಗಾರಿ ವಿಳಂಬ

7

ತೈಲ ಸಂಗ್ರಹಾಗಾರ ಕಾಮಗಾರಿ ವಿಳಂಬ

Published:
Updated:

ನವದೆಹಲಿ (ಪಿಟಿಐ): ಕಾಮಗಾರಿ ವಿಳಂಬದಿಂದ ಮಂಗಳೂರು, ಪಾದೂರು ಮತ್ತು ವಿಶಾಖಪಟ್ಟಣಂನಲ್ಲಿ ನಿರ್ಮಾಣವಾಗುತ್ತಿರುವ ನೆಲದಡಿಯ ಬೃಹತ್ ತೈಲ ಸಂಗ್ರಹಾಗಾರ ಯೋಜನೆಗಳು ಒಂದು ವರ್ಷಗಳಷ್ಟು ತಡವಾಗುವ ಸಾಧ್ಯತೆ ಇದೆ ಎಂದು ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ( ಐಎಸ್‌ಪಿಆರ್‌ಎಲ್) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜನ್ ಕೆ.ಪಿಳ್ಳೆ ಅಭಿಪ್ರಾಯಪಟ್ಟಿದ್ದಾರೆ.ಇಲ್ಲಿ ನಡೆಯುತ್ತಿರುವ `ಪೆಟ್ರೋಟೆಕ್ -2012~ ಸಮ್ಮೇಳನದಲ್ಲಿ ಮಾತನಾಡಿದ ಅವರು, ನೆಲದಡಿಯಲ್ಲಿ ತೈಲ ಸಂಗ್ರಹಾಗಾರ ನಿರ್ಮಿಸಲು ಭೂಮಿ ಕೊರೆಯುವಾಗ ಎದುರಾಗುತ್ತಿರುವ ಅಡೆತಡೆಗಳಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ. ಆದರೂ, 53.30 ಲಕ್ಷ ಟನ್ ತೈಲ ಸಂಗ್ರಹ ಸಾಮರ್ಥ್ಯದ ಈ ಮೂರು ಯೋಜನೆಗಳು 2013ರ ವೇಳೆಗೆ ಅಂತ್ಯಗೊಳ್ಳುವ ನಿರೀಕ್ಷೆ ಇದೆ ಎಂದರು.ವಿಶಾಖಪಟ್ಟಣಂನಲ್ಲಿ ಭೂಮಿ ಕೊರೆಯುವಾಗ ಸ್ವಲ್ಪ ಸಮಸ್ಯೆ ಉಂಟಾಗಿದೆ. ಆದರೂ, ನಿಗದಿತ ಸಮಯ ಮಿತಿಗೆ ತಕ್ಕಂತೆ ಕಾಮಗಾರಿ ನಡೆಯುತ್ತಿದೆ.  13.30 ಲಕ್ಷ ಟನ್ ತೈಲ ಸಂಗ್ರಹಿಸಿಡಬಹುದಾದ ಈ ಯೋಜನೆಗೆ  ರೂ.1,038 ಕೋಟಿ ವೆಚ್ಚ ಅಂದಾಜು ಮಾಡಲಾಗಿದೆ ಎಂದರು.ಮಂಗಳೂರು-ಉಡುಪಿ: ಮಂಗಳೂರಿನಲ್ಲಿನ ನೆಲದಡಿ ಸಂಗ್ರಹಾಗಾರದಲ್ಲಿ 15 ಲಕ್ಷ ಟನ್ ತೈಲ ಸಂಗ್ರಹಿಸಿಡಬಹುದಾಗಿದೆ. ಈ ಯೋಜನೆಯ ಕಾಮಗಾರಿ ಭರದಿಂದ ಸಾಗಿದ್ದು, 2013ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. ಈ ಯೋಜನೆಗೆ ರೂ.732 ಕೋಟಿ ವೆಚ್ಚದ್ದಾಗಿದೆ ಎಂದರು.ಮೂರನೇ ಬೃಹತ್ ಯೋಜನೆ ರೂ.993 ಕೋಟಿ ವೆಚ್ಚದಲ್ಲಿ ಉಡುಪಿಯ ಪಾದೂರಿನಲ್ಲಿ ಅಸ್ತಿತ್ವಕ್ಕೆ ಬರಲಿದ್ದು,  ಕಾಮಗಾರಿ 2014ರ ಏಪ್ರಿಲ್‌ನಲ್ಲಿ ಅಂತ್ಯಗೊಳ್ಳಲಿದೆ. ಇಲ್ಲಿ 25 ಲಕ್ಷ ಟನ್‌ತೈಲ ಸಂಗ್ರಹಿಸಿ ಇಡಬಹುದು ಎಂದರು.ಈ ಮೂರು ಯೋಜನೆಗಳ ಜತೆಗೆ ಮುಂದಿನ 3-4 ವರ್ಷಗಳಲ್ಲಿ ಇನ್ನೂ ಹೆಚ್ಚುವರಿಯಾಗಿ 125 ಲಕ್ಷ ಟನ್ ತೈಲ ಸಂಗ್ರಹಿಸಿಡಲು ಸಂಗ್ರಹಾಗಾರ ನಿರ್ಮಿಸಲು ಸಂಶೋಧನೆ ನಡೆದಿವೆ ಎಂದು ಪಿಳ್ಳೆ ಹೇಳಿದರು. ಪಾದೂರಿನಲ್ಲಿ ಹೆಚ್ಚುವರಿಯಾಗಿ 50 ಲಕ್ಷ ಟನ್ ತೈಲ ಸಂಗ್ರಹಿಸಿಡುವ ಇನ್ನೊಂದು ಯೋಜನೆಯೂ ಇದೆ. ಓಡಿಶಾದ ಚಂಡಿಕೋಲ್, ಗುಜರಾತ್‌ನ ರಾಜ್‌ಕೋಟ್, ರಾಜಸ್ತಾನದ ಬಿಕಾನೇರ್‌ನಲ್ಲಿ ತಲಾ 25 ಲಕ್ಷ ಟನ್ ಹೆಚ್ಚುವರಿ ತೈಲ ಸಂಗ್ರಹಿಸಿಡುವ ಯೋಜನೆ ನಿಟ್ಟಿನಲ್ಲಿ ಸಂಶೋಧನೆಗಳು ನಡೆದಿವೆ ಎಂದರು.ತುರ್ತು ತೈಲ ಸಂಗ್ರಹ

ಕಚ್ಚಾತೈಲ ಆಮದು ಮತ್ತು ಪೂರೈಕೆಯಲ್ಲಿ ವ್ಯತ್ಯಯವಾದಾಗ, ಅಥವಾ ಬೆಲೆಯಲ್ಲಿ ಅನಿರೀಕ್ಷಿತ ಏರಿಕೆ ಆದಾಗ ತುರ್ತು ಅಗತ್ಯಕ್ಕೆ ಬಳಸಲು ನೆಲದಡಿ ಸಂಗ್ರಹಿಸಿಟ್ಟ ತೈಲವನ್ನು ಬಳಸಿಕೊಳ್ಳಲಾಗುವುದು. ಭಾರತೀಯ ತೈಲ ಅಭಿವೃದ್ಧಿ ಮಂಡಳಿಯ (ಒಐಡಿಬಿ) ಅಂಗಸಂಸ್ಥೆ `ಐಎಸ್‌ಪಿಆರ್‌ಎಲ್~ ಇಂತಹ ನೆಲದಡಿಯ ತೈಲ ಸಂಗ್ರಹಗಾರ   ನಿರ್ಮಿಸುತ್ತದೆ. ತೈಲ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿನ ಆಂತರಿಕ ಸಚಿವರ ಸಮಿತಿ ತುರ್ತು ತೈಲ ಸಂಗ್ರಹದ ಪ್ರಮಾಣ ನಿರ್ಧರಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry