ತೊಂಡೆ ಬೆಳೆದು ತುಂಬಿಸಿ ಜೇಬು!

7

ತೊಂಡೆ ಬೆಳೆದು ತುಂಬಿಸಿ ಜೇಬು!

Published:
Updated:

ಒಂದೆರಡು ಎಕರೆ ಜಮೀನಿನಲ್ಲಿಯೂ ತರಕಾರಿ ಬೆಳೆದು ಉತ್ತಮ  ಲಾಭ ಗಳಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ನೇರಳಕಟ್ಟೆ ಪಿ. ಎ. ಸುಬ್ರಹ್ಮಣ್ಯ ಭಟ್.ತಮ್ಮ ಎರಡು ಎಕರೆ ಪ್ರದೇಶದಲ್ಲಿ 152 ತೊಂಡೆ ಗಿಡ ನೆಟ್ಟು ಈಗ ವರ್ಷಕ್ಕೆ ಒಂದೂವರೆ ಲಕ್ಷ ರೂಪಾಯಿಗಳಷ್ಟು ಆದಾಯ ಪಡೆಯುತ್ತಿದ್ದಾರೆ ಭಟ್ಟರು. ಕೃಷಿ  ಮಾಡಿ ಅದನ್ನು ಮಾರುಕಟ್ಟೆಗೆ ತಲುಪಿಸುವ ಹಂತದವರೆಗೆ ಕೆ.ಜಿ.ಯೊಂದಕ್ಕೆ ಬೀಳುವ ಖರ್ಚು ಸುಮಾರು 6ರಿಂದ 8ರೂಗಳು ಮಾತ್ರ. ಈ ಬೆಳೆಯತ್ತ ಗಮನ ಹರಿಸಿದರೆ ವರ್ಷಕ್ಕೆ ಸುಮಾರು ಒಂದೂವರೆ ಲಕ್ಷ ರೂಪಾಯಿಗಳಷ್ಟು ಲಾಭ ಗಳಿಸಬಹುದು ಎನ್ನುವುದು ಅವರ ಅನುಭವದ ಮಾತು.ಆರು ವರ್ಷಗಳ ಹಿಂದೆ ತೊಂಡೆ ಕೃಷಿಗೆಂದು ಸ್ವಲ್ಪ ಇಳಿಜಾರು/ಸಣ್ಣಗುಡ್ಡ ಪ್ರದೇಶವನ್ನು ಆಯ್ದು ಸುಮಾರು 7ರಿಂದ 8 ಅಡಿಗಳ ಮೆಟ್ಟಿಲಿನ ರೂಪದ ತಟ್ಟನ್ನು ನಿರ್ಮಿಸಿದರು. ಅದರಲ್ಲಿ ಮೂರೂವರೆ ಅಡಿ ಉದ್ದ ಹಾಗೂ ಎರಡೂವರೆ ಅಡಿ ಅಗಲದ ಹೊಂಡವನ್ನು ತೆಗೆದು ಮಧ್ಯದಲ್ಲಿ ಎಂಟು ಇಂಚಿನಷ್ಟು ದಪ್ಪ ಮಣ್ಣಿನ ಪದರದಂತೆ ಏರಿಸಿದರು. ಸುಮಾರು ಮೂರು ಗಂಟುಗಳಿರುವ ಒಂದು ಇಂಚು ತೋರದ 4-5 ತೊಂಡೆಬಳ್ಳಿಗಳನ್ನು ಆಯ್ದು ಎರಡು ಗಂಟಿನಷ್ಟು ಮಣ್ಣಿನೊಳಗೆ ಮುಚ್ಚಿ ಒಂದು ಗಂಟು ಮೇಲ್ಭಾಗದಲ್ಲಿ ಉಳಿಯುವಂತೆ ಪೂರ್ವಕ್ಕೆ ಸುಮಾರು 60ಡಿಗ್ರಿ ಬಾಗಿರುವಂತೆ ಪ್ರತಿಯೊಂದು ಗುಂಡಿಯಲ್ಲೂ ನೆಡತೊಡಗಿದರು.ಸುಬ್ರಹ್ಮಣ್ಯ ಭಟ್ಟರ ಅನುಭವದ ಪ್ರಕಾರ ಸುಮಾರು 20-25 ದಿನಗಳಲ್ಲಿ ಈ ಬಳ್ಳಿಗಳು 1ಮೀಟರ್ ಎತ್ತರ ಬರುತ್ತದೆ. ಸುಮಾರು ಇಪ್ಪತ್ತೈದು ದಿನಗಳ ನಂತರ 5-6ಅಡಿ ಎತ್ತರದ ಕೋಲನ್ನು ಬಳ್ಳಿಗೆ ಆಧಾರವಾಗಿ ನೆಡಬೇಕು. ಬಳ್ಳಿಗಳು ಸ್ವಲ್ಪ ಉದ್ದ ಬೆಳೆದರೆ ಅದನ್ನು ಸುಮಾರು 40ದಿನಗಳಲ್ಲಿ ಚಪ್ಪರ ಕಟ್ಟಿ ಅದಕ್ಕೆ ಹರಡುವ ಕೆಲಸ ಮಾಡಬೇಕಾಗುತ್ತದೆ.ಹೀಗೆ ಬೆಳೆಯಿರಿ

`ಏಳು ಅಡಿ ಎತ್ತರದ ಕಂಬಗಳನ್ನು ನೇರವಾಗಿ ಕಾಣುವಂತೆ 30 ಅಡಿಗಳಿಗೆ ಒಂದರಂತೆ ನೆಟ್ಟು ಅದಕ್ಕೆ ಕಬ್ಬಿಣದ ದಪ್ಪಸರಿಗೆಯನ್ನು ಎಳೆಯಬೇಕು. ಇದರ ನಂತರ 5ಅಡಿಗೆ ಒಂದರಂತೆ ನೇರವಾಗಿ ಸಪುರ ಸರಿಗೆಯನ್ನು ಕಟ್ಟಿ ಅದರ ಮೇಲೆ ಉಪಯೋಗಿಸಿದ ಮೀನಿನ ಬಲೆಯನ್ನು ಹೊದಿಸಿ ಅಲ್ಲ್ಲ್ಲಲಿ ಸರಿಗೆಗೆ ಕಟ್ಟಿರುವುದನ್ನು ನಾವು ಇಲ್ಲಿ ಕಾಣಬಹುದು.ಈ ರೀತಿ ಒಮ್ಮೆ ಮಾಡಲಾದ ಚಪ್ಪರವು 2ವರ್ಷಗಳ ಬಾಳಿಕೆಯನ್ನು ಹೊಂದಿರುತ್ತದೆ. ಇಷ್ಟೊಂದು ದೊಡ್ಡಮಟ್ಟಿನಲ್ಲಿ ನಡೆಸಿದ  ಕೃಷಿಗೆ ಈ ಹಂತದವರೆಗೆ ಅರವತ್ತು ಸಾವಿರ ರೂಪಾಯಿ ಅಂದಾಜು ಖರ್ಚಾಗುತ್ತದೆ, ಅಂತೆಯೇ ಲಾಭದ ಅಂಶವೂ ಈ  ಕೃಷಿ ಯಲ್ಲಿ ಉತ್ತಮವಾಗಿ ಕಾಣಬಹುದಾಗಿದೆ.ಬಳ್ಳಿಗಳನ್ನು ನೆಟ್ಟು 30ರಿಂದ 40ದಿನಗಳ ಅಂದಾಜಿನಲ್ಲಿ ತೊಂಡೆಕಾಯಿ ಬಿಡಲು ಆರಂಭವಾಗುತ್ತದೆ. ಸರಿಯಾಗಿ ಬಳ್ಳಿಗಳು ಬೆಳೆಯಲು ಎರಡರಿಂದ ಮೂರು ತಿಂಗಳುಗಳು ಬೇಕಾಗುತ್ತದೆ. ವಾರಕ್ಕೆ ಒಂದುಬಾರಿ  ಕೃತಕ ಗೊಬ್ಬರ ಮತ್ತು ವಾರಕ್ಕೆ ಎರಡು ಬಾರಿ ಗುಂಡಿಯ ತುಂಬಾ ನೀರು ಬಿಡಬೇಕಾದುದು ಮುಖ್ಯ.ಬೇರುಹುಳದ ಸಮಸ್ಯೆ ಇರುವ ಪ್ರದೇಶದಲ್ಲಿ ತೊಂಡೆ  ಕೃಷಿಯನ್ನು ನಡೆಸುವುದಾದರೆ ಆ ಒಂದು ಹೊಂಡಕ್ಕೆ ಸುಮಾರು ಅರ್ಧ ಕೆ.ಜಿ.ಯಷ್ಟು ಸುಣ್ಣದ ಹುಡಿಯನ್ನು ಹಾಕಬೇಕು. ಇದರಿಂದ ಬೇರುಹುಳದ ಭಾದೆ ಇರುವುದಿಲ್ಲ. ಅಂತೆಯೇ ಎಲೆಗಳಿಗೆ ಹುಳುಗಳ ಸಮಸ್ಯೆ ಇದ್ದರೆ ಬಳ್ಳಿಯ ಬುಡಕ್ಕೆ ಒಂದು ಅಂಶ ಗೋಮೂತ್ರ ಅಥವ ಕಹಿಬೇವಿನ ಕಷಾಯಕ್ಕೆ ಮೂರು ಅಂಶದಷ್ಟು ನೀರು ಸೇರಿಸಿ ಎಲೆಗಳಿಗೆ ಸಿಂಪಡಿಸಬೇಕು' ಎನ್ನುತ್ತಾರೆ ಭಟ್ಟರು.ಪ್ರಾರಂಭ ಹಂತದಲ್ಲಿ ವಾರಕ್ಕೆ ಸುಮಾರು 200-250 ಕೆ.ಜಿ. ಹಾಗೂ ಮಧ್ಯಮ ಹಂತದಲ್ಲಿ 1,250-1,300 ಕೆ.ಜಿ.ಯಷ್ಟು ತೊಂಡೆ ಕೊಯ್ಯಲು ಸಿಗುತ್ತದೆ. ಖರ್ಚು ಮಾಡಿದ ಪ್ರಮಾಣಕ್ಕೆ ತಕ್ಕ ಲಾಭವನ್ನೂ ಇದರಲ್ಲಿ ಕಾಣಬಹುದು ಎಂಬುದು ಅವರ ಸಂತಸದ ನುಡಿ.ಮಾಹಿತಿಗೆ- 94481 77434

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry