ಮಂಗಳವಾರ, ಜೂನ್ 22, 2021
23 °C

ತೊಗರಿ ಕಣಜದಲ್ಲಿ ರೈತರಿಗೆ ನಿರಾಶೆ

ವಿಶೇಷ ವರದಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:ತೊಗರಿ ಮಂಡಳಿಯ ಖರೀದಿ ಕೇಂದ್ರಗಳು ಆರಂಭವಾಗಿ ಒಂದು ತಿಂಗಳಾದರೂ ಮಾರುಕಟ್ಟೆಯಲ್ಲಿ ತೊಗರಿ ಬೆಲೆಯಲ್ಲಿ ಏರಿಕೆ ಕಾಣಿಸದೇ ಇರುವುದು ರೈತರಲ್ಲಿ ನಿರಾಶೆ ಮೂಡಿಸಿದೆ.ಬೆಲೆ ಕುಸಿತದ ಹಿನ್ನೆಲೆಯಲ್ಲಿ ಸರ್ಕಾರವೇ ಮಧ್ಯೆ ಪ್ರವೇಶಿಸಿ, ರೈತರಿಂದ ನೇರ ಖರೀದಿ ಮಾಡುವಂತೆ ವಿವಿಧ ಸಂಘಟನೆಗಳು ಆಗ್ರಹಿಸಿದ್ದವು. ಸರ್ಕಾರದ ಮೇಲೆ ಪದೇ ಪದೇ ಒತ್ತಡ, ಪ್ರತಿಭಟನೆಯ ನಂತರ ಹಾಗೂ ಹೀಗೂ ಮಾಡಿ ಫೆಬ್ರುವರಿ 15ರಂದು ಬೀದರ್, ಗುಲ್ಬರ್ಗ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ಆರಂಭಗೊಂಡಿದ್ದವು. ಕಳೆದ ವರ್ಷ ಪರಿಸ್ಥಿತಿ ಹೀಗೇಯೇ ಇದ್ದಾಗ ಖರೀದಿ ಕೇಂದ್ರ ಆರಂಭಿಸುತ್ತಲೇ, ತೊಗರಿ ದರ ಮಾರುಕಟ್ಟೆಯಲ್ಲಿ ದಿಢೀರನೇ ನಾಲ್ಕು ಸಾವಿರಕ್ಕಿಂತಲೂ ಹೆಚ್ಚಿಗೆ ಆಗಿತ್ತು. ಈ ಸಲ ಕೂಡ ಹಾಗೇ ಆಗಲಿದೆ ಎಂದು ನಿರೀಕ್ಷಿಸಿದ್ದ ರೈತರಿಗೆ ಆಗಿದ್ದು- ನಿರಾಶೆ!ತೊಗರಿ ಮಂಡಳಿಯ ಪರವಾಗಿ `ರಾಷ್ಟ್ರೀಯ ಪದಾರ್ಥ ಹಾಗೂ ಉತ್ಪನ್ನ ವಿನಿಮಯ ಸಂಸ್ಥೆ (ಎನ್‌ಸಿಡಿಎಕ್ಸ್) ಸ್ಪಾಟ್ ಎಕ್ಸ್‌ಚೇಂಜ್~ ರೈತರಿಂದ ತೊಗರಿಯನ್ನು ಖರೀದಿಸುತ್ತಿದೆ. ಇಲ್ಲಿ ನಿಗದಿ ಮಾಡಿದ ಬೆಲೆ- ಕ್ವಿಂಟಲ್‌ಗೆ ರೂ. 4,000. ಮಾರುಕಟ್ಟೆಯಲ್ಲಿ ಈವರೆಗೆ ಕ್ವಿಂಟಲ್‌ಗೆ ರೂ. 3,300ರ ಹಿಂದೆ-ಮುಂದೆ ಸುಳಿದಾಡುತ್ತಿದ್ದ ದರ ಹೆಚ್ಚಬಹುದು ಎಂದು ಬೆಳೆಗಾರರು ಕಾಯುತ್ತ ಕುಳಿತರೆ, ಈವರೆಗೂ ಬೆಲೆ ಏರಿಕೆಯಾಗಿಲ್ಲ. ಖರೀದಿ ಕೇಂದ್ರ ಹೊರತುಪಡಿಸಿದರೆ, ಬೇರೆಲ್ಲೂ ದರ 4,000 ರೂಪಾಯಿ ದಾಟಿಲ್ಲ.ಆಮದು:

“ಇದಕ್ಕೆಲ್ಲ ಕಾರಣ, ಕೇಂದ್ರ ಸರ್ಕಾರ ವಿವಿಧ ದೇಶಗಳಿಂದ ಆಮದು ಮಾಡಿಕೊಂಡ ಬೇಳೆ ಕಾಳುಗಳು” ಎಂದು ಆರೋಪಿಸುತ್ತಾರೆ, ಕರ್ನಾಟಕ ಪ್ರದೇಶ ತೊಗರಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಇಂಗಿನ. ಬೇಡಿಕೆ ಇಲ್ಲದೇ ಹೋದರೂ ಲಕ್ಷಾಂತರ ಟನ್ ಬೇಳೆ ಕಾಳು ಆಮದು ಮಾಡಿಕೊಳ್ಳಲಾಗಿದೆ. ಆ ಪೈಕಿ ಮ್ಯಾನ್ಮಾರ್‌ನಿಂದ ಆಮದು ಮಾಡಿದ 77,302 ಟನ್ ತೊಗರಿಯು ದೇಶದ ಮಾರುಕಟ್ಟೆಗೆ ಬಂದಿದೆ. ಇದರ ಜತೆಗೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಪರಸ್ಪರ ಮಾತಾಡಿಕೊಂಡು ದರ ಏರಿಕೆ ಮಾಡುತ್ತಲೇ ಇಲ್ಲ. ಇದೆಲ್ಲದರ ಪರಿಣಾಮ, ಮಾರುಕಟ್ಟೆಯಲ್ಲಿ ದರ ಏರುತ್ತಿಲ್ಲ ಎಂದು ಅವರು ವಿಶ್ಲೇಷಿಸುತ್ತಾರೆ.`ಚೆನ್ನಂಗಿ ಬೇಳೆ~:

ವಿದೇಶದಿಂದ ಆಮದು ಮಾಡಿಕೊಂಡ ಬೇಳೆ ಪೈಕಿ `ಚೆನ್ನಂಗಿ ಬೇಳೆ~ (ಯಲ್ಲೋ ಪೀಜ್) ಸಹ ಸೇರಿದೆ. ನೋಡಲು ಇದು ತೊಗರಿ ಬೇಳೆಯಂತೆಯೇ ಇರುತ್ತದೆ. ಆದರೆ ಗುಣಮಟ್ಟ ತೀರಾ ಕಳಪೆ. ಕ್ವಿಂಟಲ್‌ಗೆ ರೂ. 2,400ರ ದರದಲ್ಲಿ ಸಿಗುವ ಈ ಬೇಳೆಯನ್ನು ಬೃಹತ್ ಪ್ರಮಾಣದಲ್ಲಿ- ಅಂದರೆ 14 ಲಕ್ಷ ಟನ್‌ಗಳಷ್ಟು- ತರಿಸಲಾಗಿದೆ. ಸಗಟು ಪ್ರಮಾಣದಲ್ಲಿ ಖರೀದಿಸಿದರೆ ಇದು ಇನ್ನಷ್ಟು ಕಡಿಮೆ ಬೆಲೆಗೆ ಸಿಗುತ್ತದೆ. ತೊಗರಿ ಬೇಳೆ ಜತೆ ಬೆರೆಸಿದರೆ, ಈ ಬೇಳೆಯನ್ನು ಪತ್ತೆ ಹಚ್ಚಲು ಸಹ ಸಾಧ್ಯವಿಲ್ಲ! ತೊಗರಿ ದರ ಏರಿಕೆಯಾಗದಿರಲು ಇದೂ ಒಂದು ಕಾರಣ ಎನ್ನಲಾಗಿದೆ.22,000 ಕ್ವಿಂ. ಖರೀದಿ:

ತೊಗರಿ ಮಂಡಳಿ ಮೂಲಗಳ ಪ್ರಕಾರ, ಈವರೆಗೆ ಸುಮಾರು 22,000 ಕ್ವಿಂಟಲ್‌ನಷ್ಟು ತೊಗರಿ ಖರೀದಿಸಲಾಗಿದೆ. ಮೂರು ಜಿಲ್ಲೆಗಳ 16 ಕೇಂದ್ರಗಳಿಂದ ಖರೀದಿ ಪ್ರಕ್ರಿಯೆ ನಡೆಸಿ, ಈವರೆಗೆ ರೈತರಿಗೆ ಸುಮಾರು 8 ಕೋಟಿ ರೂಪಾಯಿ ಪಾವತಿಸಲಾಗಿದೆ. ಮಂಡಳಿಯು ಕರಾರುವಾಕ್ಕು ನಿಗದಿ ಮಾಡಿದ ಗುಣಮಟ್ಟದ ತೊಗರಿಯನ್ನೇ ಖರೀದಿಸಲಾಗುತ್ತಿದ್ದು, ತುಸು ಕಡಿಮೆ ಗುಣಮಟ್ಟವುಳ್ಳ ಉತ್ಪನ್ನವನ್ನು ನಿರಾಕರಿಸಲಾಗುತ್ತಿದೆ. ಈ ವಿಧಾನ ತಮಗೆ ತೊಂದರೆಯುಂಟು ಮಾಡುತ್ತಿದೆ ಎಂದು ಕೆಲವು ರೈತರು ಆಕ್ಷೇಪಿಸಿದ್ದಾರೆ.ಇದೆಲ್ಲದರ ಮಧ್ಯೆಯೇ ಖರೀದಿ ಕೇಂದ್ರದ ಮುಂದೆ ತೊಗರಿ ಚೀಲ ಹೊತ್ತು ತರುವ ಟ್ರಾಕ್ಟರ್‌ಗಳು ಸಾಲಾಗಿ ನಿಲ್ಲುತ್ತಿವೆ. ಮಾರುಕಟ್ಟೆಯಲ್ಲಿ 3,500ರ ಗಡಿ ದಾಟದ ಬೆಲೆಯು ಖರೀದಿ ಕೇಂದ್ರಗಳಲ್ಲಿ ರೂ. 4,000ಗಳಷ್ಟು ಇದೆ. ಇಲ್ಲಿ ಮಾರಾಟ ಮಾಡಿದರೆ, ಸ್ವಲ್ಪ ಅಧಿಕ ಹಣ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ರೈತರು ಕೇಂದ್ರದ ಮೊರೆ ಹೋಗಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.