ಶುಕ್ರವಾರ, ಮೇ 7, 2021
25 °C

ತೊಗರಿ: ಕೀಟ, ರೋಗ ನಿರ್ವಹಣೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ದ್ವಿದಳ ಧಾನ್ಯ ಬೆಳೆ ತೊಗರಿಗೆ ಎರಗುವ ಕಾಯಿ ಕೊರಕ ಪೀಡೆ ಹತೋಟಿ ಕೀಟನಾಶಕ  ಬಳಕೆಯಿಂದ ಮಾತ್ರ ಸಾಧ್ಯವಿಲ್ಲ. ಹೀಗಾಗಿ ಸಮಗ್ರ ನಿರ್ವಹಣಾ ಪದ್ಧತಿಗಳಾದ ಬೇಸಾಯ ಕ್ರಮ, ಜೈವಿಕ ಕ್ರಮ ಅಳವಡಿಸಿಕೊಂಡು ಅವಶ್ಯವಿದ್ದಾಗ ಮಾತ್ರ ಕೀಟನಾಶಕ ಬಳಸಬೇಕು ಎಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.ತೊಗರಿ ಉತ್ಪಾದನೆಯಲ್ಲಿ ಕೀಟ, ರೋಗ ಪ್ರಮುಖ ತೊಡಕು. ಕಾಯಿ ಕೊರೆಯುವ ಹುಳು, ಕಾಯಿ ನೊಣ, ಬಲೆಕಟ್ಟುವ ಹುಳು ಜೊತೆ, ಸೊರಗು ರೋಗ, ಎಲೆ ಚುಕ್ಕೆರೋಗ, ನಂಜು ರೋಗ, ಬೂದಿ ರೋಗ, ಹಾಗೂ ಬಂಜೆ ರೋಗ ಉತ್ಪಾದನೆಗೆ ತೊಂದರೆ ನೀಡುತ್ತವೆ. ಹೀಗಾಗಿ ಬೇಸಾಯ ಶುರು ಮಾಡುವ ಸಂದರ್ಭದಲ್ಲೆ ಎಚ್ಚರಿಕೆ ಅಗತ್ಯ ಎಂದು ಪ್ರಕಟಣೆ ತಿಳಿಸಿದೆ.ಬೆಳೆ ಪರಿವರ್ತನೆ, ಬೆಳೆ ನಿಲುವಿಗಿಂತ ಸ್ವಲ್ಪ ಎತ್ತರ ಕವಲೊಡೆದ ರೆಂಬೆಗಳನ್ನು ಹೊಲದಲ್ಲಿ ನೆಡಬೇಕು. ಅದರಿಂದ ಪಕ್ಷಿಗಳು ಹುಳು ಆರಿಸಿ ತಿನ್ನುವುದಕ್ಕೆ ಅನುವಾಗುತ್ತದೆ. ಕೀಟ ಆಕರ್ಷಿಸಲು ಹೆಕ್ಟೇರ್‌ಗೆ 8-10 ಮೋಹಕ ಬಲೆ ಬಳಸಬೇಕು. 20 ದಿವಸಕ್ಕೊಮ್ಮೆ ಮೋಹಕ ವಸ್ತು ಬದಲಿಸಿದರೆ ಕೀಟಗಳ ಹಾವಳಿ ತಪ್ಪಿಸಬಹುದು ಎಂದು ಸೂಚಿಸಲಾಗಿದೆ.ರೋಗ ನಿರೋಧಕ ತಳಿ ಬಳಸುವ ಜೊತೆ ಜೋಳವನ್ನು ಅಂತರ ಬೆಳೆಯಾಗಿ ಬೆಳೆಯುವುದರಿಂದ ರೋಗದ ತೀವ್ರತೆ ಕಡಿಮೆ ಮಾಡಬಹುದು.ಬಂಜೆ ರೋಗ: ಬಂಜೆ ರೋಗ ನಂಜಾಣು ಪೀಡಿತ ನುಸಿ ಸಹಾಯದಿಂದ ಹರಡುತ್ತದೆ. ರೋಗಕ್ಕೆ ತುತ್ತಾದ ಗಿಡದ ಎಲೆಗಳು ಚಿಕ್ಕದಾಗಿ ಎಲೆಗಳ ಮೇಲೆ ಹಳದಿ ಮಿಶ್ರಿತ ಹಸಿರು ಮಚ್ಚೆ ಕಾಣಬಹುದು.  ಗಿಡಗಳ ಬೆಳವಣಿಗೆ ಕುಂಠಿತಗೊಂಡು ಹೂ ಮತ್ತು ಕಾಯಿ ಬಿಡುವುದಿಲ್ಲ.ಅದರ ಹತೋಟಿಗೆ ಆರಂಭಿಕ ಹಂತದಲ್ಲಿ ರೋಗಕ್ಕೆ ತುತ್ತಾದ ಗಿಡ ನಾಶಪಡಿಸುವ ಜೊತೆ ನುಸಿನಾಶಕಗಳಾದ ಡೈಕೋಫಾಲ್ 20 ಇ.ಸಿ (2.5 ಎಂ.ಎಲ್/ಲೀ) ಅಥವಾ ಪ್ರೊಫಿನೋಫಾಸ್ (0.4 ಎಂ.ಎಲ್/ಲೀ) ಬೆರೆಸಿ ಬಿತ್ತನೆ ಮಾಡಿದ 30 ಮತ್ತು 45 ದಿನಗಳ ಅಂತರದಲ್ಲಿ ಸಿಂಪಡಿಸಬೇಕು.ಎಲೆ ಚುಕ್ಕೆ ರೋಗ: ಈ ರೋಗ ಮೊದಲಿಗೆ ಚಿಕ್ಕ ಚುಕ್ಕೆಗಳಾಗಿ, ನಂತರ ದೊಡ್ಡದಾಗಿ ವೃತ್ತಾಕಾರವಾಗಿ ಕಾಣಿಸುತ್ತವೆ. ಅದರ ಹತೋಟಿಗೆ ಮ್ಯೋಂಕೋಜೆಬ್ (1 ಕೆ.ಜಿ./ಹೆಕ್ಟೇರ್‌ಗೆ) ಸಿಂಪರಣೆ ಮಾಡಬೇಕು.

ತೊಗರಿ ಬೆಳೆಯುವ ರೈತರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಸಂಪರ್ಕಿಸಬೇಕು ಎಂದು ಪ್ರಕಟಣೆ ಕೋರಿದೆ.ಸೆ 25, 29ಕ್ಕೆ ಸಂತೆ, ಜಾತ್ರೆ ನಿಷೇಧ


ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯರ ಚುನಾವಣೆ ಪ್ರಕ್ರಿಯೆ ಈಗಾಗಲೆ ಆರಂಭವಾಗಿದೆ.ತೆರವಾದ ಸ್ಥಾನಗಳಿಗೆ ಸೆ.25ರಂದು ಚುನಾವಣೆ ನಡೆಯಲಿದೆ. 29ರಂದು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.ಆದ್ದರಿಂದ ಈ ಎರಡು ದಿನ ಆಯಾ ಚುನಾವಣಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯಲಿರುವ ಸಂತೆ ಹಾಗೂ ಜಾತ್ರೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಆದೇಶ ಹೊರಡಿಸಿದ್ದಾರೆ.ಕಾಲೇಜು ಅಭಿವೃದ್ಧಿ ಸಮಿತಿಗೆ ಆಯ್ಕೆ

ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರನ್ನಾಗಿ ನಡುಪಳ್ಳಿ ಎನ್.ಕೃಷ್ಣಮೂರ್ತಿ ಅವರನ್ನು ನೇಮಕ ಮಾಡಲಾಗಿದೆ.ನೂತನ ಸದಸ್ಯರಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಸದಸ್ಯ ಜಿ.ಎಸ್.ಅಮರ್‌ನಾಥ್, ನಗರಸಭಾ ಸದಸ್ಯ ಸೋಮಶೇಖರ್, ಎಂ.ಲಕ್ಷ್ಮಿ, ಜಿ.ಗಂಗಾಧರ್, ಕೆ.ಎನ್.ಪ್ರಕಾಶ್, ಲಿಂಗಪ್ಪ, ಅಲ್ಲಾಬಕಾಷ್, ಶ್ಯಾಮಸುಂದರ್, ನಾಗೇಶ್‌ಗೌಡ, ನಾರಾಯಣಸ್ವಾಮಿ, ಹೂಹಳ್ಳಿ ಚಂದ್ರಶೇಖರ್, ಶಿಕ್ಷಣ ತಜ್ಞರಾಗಿ ಎಂ.ವಿ.ಸುಬ್ರಮಣ್ಯಂ, ವೆಂಕಟರೆಡ್ಡಿ, ಎಸ್.ಮುನಿರೆಡ್ಡಿ, ವಿದ್ಯಾರ್ಥಿ ಪ್ರತಿನಿಧಿಯಾಗಿ ಬಿ.ಎನ್.ಕಾಂಚನ, ಸದಸ್ಯ ಕಾರ್ಯದರ್ಶಿಯಾಗಿ ಪ್ರಾಂಶುಪಾಲ ಎನ್.ರಾಮೇಗೌಡ, ಖಜಾಂಚಿಯಾಗಿ ಬಿ.ಆರ್.ಲಕ್ಷ್ಮೀನಾರಾಯಣ ಶೆಟ್ಟಿಯವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.