ಶುಕ್ರವಾರ, ಜೂನ್ 18, 2021
28 °C

ತೊಗರಿ ಖರೀದಿಗೆ 50ಕೋಟಿ ಬಿಡುಗಡೆ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ತೊಗರಿ ಖರೀದಿಗಾಗಿ ಆವರ್ತ ನಿಧಿಯಿಂದ ಕೂಡಲೇ ರೂ.40 ರಿಂದ 50 ಕೋಟಿ ಬಿಡುಗಡೆ ಮಾಡಬೇಕು ಎಂದು ಹೈದರಾಬಾದ್ ಕರ್ನಾಟಕ ವಿಮೋಚನಾ ಮತ್ತು ಅಭಿವೃದ್ಧಿ ಸಮಿತಿ ಒತ್ತಾಯಿಸಿದೆ.

ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಕೃಷಿ ಸಚಿವರಿಗೆ ಮನವಿ ಸಲ್ಲಿಸಿದ ಸಮಿತಿ ಪದಾಧಿಕಾರಿಗಳು, ತೊಗರಿ ಬೆಳೆದ ರೈತರು, ಬೆಲೆ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ.

 

ತೊಗರಿ ಖರೀದಿ ಕೇಂದ್ರಗಳು ಆರ್ಥಿಕ ಮುಗ್ಗಟ್ಟಿನಿಂದ ಬಾಗಿಲು ಮುಚ್ಚಿವೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಆತ್ಮಹತ್ಯೆಗೆ ಮುಂದಾಗುವ ಭೀತಿ ಎದುರಾಗಿದೆ ಎಂದು ಎಚ್ಚರಿಸಿದರು.ರೈತರು ಸಂಕಷ್ಟದಲ್ಲಿದ್ದಾಗ ಅವರಿಗೆ ಸೂಕ್ತ ಬೆಲೆ ನೀಡಿ, ಸಹಾಯಕ್ಕೆ ಬರುವ ದೃಷ್ಟಿಯಿಂದ ರಾಜ್ಯ ಸರ್ಕಾರ ಆವರ್ತ ನಿಧಿ ಸ್ಥಾಪಿಸಿದೆ. 2001 ರಿಂದ ಇದು ಆರಂಭವಾಗಿದ್ದು, ರೈತರು ಬೆಳೆದ ಬೆಳೆಗೆ ರೂ.100 ಕ್ಕೆ 50 ಪೈಸೆಯಂತೆ ಆವರ್ತ ನಿಧಿಗೆ ಹಣವನ್ನು ಜಮೆ ಮಾಡಿಕೊಳ್ಳಲಾಗುತ್ತಿದೆ.ಇಲ್ಲಿಯವರೆಗೆ ರೈತರಿಂದ ಸಾವಿರಾರು ಕೋಟಿ ಮೊತ್ತವು ಆವರ್ತ ನಿಧಿಗೆ ಜಮಾ ಆಗಿದೆ. ಈ ಹಣದಲ್ಲಿ ಈ ಭಾಗದ ತೊಗರಿ ಬೆಳೆ ಸೇರಿದಂತೆ ವಿವಿಧ ಬೆಳೆಗಳಿಂದ ಸಂಗ್ರಹವಾದ ಆವರ್ತ ನಿಧಿ ಸುಮಾರು ರೂ.700 ರಿಂದ 800 ಕೋಟಿಯಷ್ಟಿದೆ ಎಂದು ತಿಳಿಸಿದರು.ಆದರೆ ರೈತರು ನೀಡಿದ ಹಣವನ್ನು ಅವರ ಕಷ್ಟಕ್ಕೆ ಬಳಸದೇ ಇದ್ದರೆ ಹೇಗೆ? ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಕುಸಿದ ಸಂದರ್ಭದಲ್ಲಿ ಆವರ್ತ ನಿಧಿಯಿಂದ ರೂ.7.50 ಕೋಟಿ ಹಣ ನೀಡಲಾಗಿದ್ದು, ಅದರಿಂದ ರೂ. 4 ಸಾವಿರ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಮಾಡಲಾಗುತ್ತಿತ್ತು.ಆದರೆ ಸರ್ಕಾರ ಈ ಹಣವನ್ನು ಸಾಲ ರೂಪದಲ್ಲಿ ನೀಡುತ್ತಿದ್ದು, ತೊಗರಿ ಅಭಿವೃದ್ಧಿ ಮಂಡಳಿಯು ಹಣವಿಲ್ಲದೇ ತತ್ತರಿಸುವಂತಾಗಿದೆ ಎಂದು ಹೇಳಿದರು.ದಕ್ಷಿಣ ಕರ್ನಾಟಕದ ಉಳ್ಳಾಗಡ್ಡಿ, ಟೊಮ್ಯಾಟೋ, ಅರಿಷಿಣದಂತಹ ಬೆಳೆಗಳ ಬೆಲೆ ಕುಸಿದಾಗ, ಆವರ್ತ ನಿಧಿಯಿಂದ ಹೆಚ್ಚಿನ ಹಣದ ಸಹಾಯ ಒದಗಿಸಲಾಗುತ್ತದೆ. ಆವರ್ತ ನಿಧಿಗೆ ಉತ್ತರ ಕರ್ನಾಟಕದ ಕಾಣಿಕೆಯೇ ದೊಡ್ಡದಾಗಿದ್ದರೂ, ಈ ಭಾಗಕ್ಕೆ ಮಾತ್ರ ಅನ್ಯಾಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.2001 ರಿಂದ ಇಲ್ಲಿಯವರೆಗೆ ಉತ್ತರ ಕರ್ನಾಟಕ ಭಾಗಕ್ಕೆ ಆವರ್ತ ನಿಧಿಯಿಂದ ಕೇವಲ ರೂ.25-30 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ. ರೈತರ ಹಣವನ್ನು ರೈತರಿಗೆ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು, ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.

 

ರೈತರ ಸಹನೆಯನ್ನು ಪರೀಕ್ಷಿಸಿದೇ ಆವರ್ತ ನಿಧಿಯಿಂದ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಉತ್ತರ ಕರ್ನಾಟಕದ ಗುಲ್ಬರ್ಗ, ರಾಯಚೂರು, ಯಾದಗಿರಿ ಹಾಗೂ ವಿಜಾಪುರ ಜಿಲ್ಲೆಗಳಿಂದ ಸುಮಾರು 50 ರಿಂದ 60 ಲಕ್ಷ ಕ್ವಿಂಟಲ್ ತೊಗರಿಯನ್ನು ಪ್ರತಿವರ್ಷ ಬೆಳೆಯಲಾಗುತ್ತಿದೆ.

 

ಉಳಿದ ಜಿಲ್ಲೆಗಳಲ್ಲಿ 25 ರಿಂದ 30 ಲಕ್ಷ ಕ್ವಿಂಟಲ್ ಬೆಳೆಯಲಾಗುತ್ತಿದೆ. 45 ದಿನಗಳಲ್ಲಿ ಬರುವ ಹೆಸರಿಗೆ ಕೇಂದ್ರ ಸರ್ಕಾರ ರೂ. 3,600 ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ ಹೆಚ್ಚು ಖರ್ಚು ತಗಲುವ ತೊಗರಿಗೆ ಕೇವಲ ರೂ.3,200 ಬೆಂಬಲ ಬೆಲೆ ನೀಡಿದೆ.ಇದು ಅವೈಜ್ಞಾನಿಕವಾಗಿದ್ದು, ಕನಿಷ್ಠ ರೂ. 5-6 ಸಾವಿರ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.  ಈ ಭಾಗದ ಜನಪ್ರತಿನಿಧಿಗಳು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ ರೈತರ ಆವರ್ತ ನಿಧಿಯಿಂದ ಹೆಚ್ಚಿನ ಹಣ ಬಿಡುಗಡೆ ಮಾಡಲು ಅಧಿಕಾರಿಗಳು ಹಾಗೂ ಸರ್ಕಾರವನ್ನು ಒತ್ತಾಯಿಸಬೇಕು.

 

ತೊಗರಿ ಖರೀದಿ ಮತ್ತೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.  ಸಮಿತಿ ಅಧ್ಯಕ್ಷ ಸಿದ್ದಾರೆಡ್ಡಿ ಬಲಕಲ್, ನಾಗರಾಜ, ಚೆನ್ನಾರೆಡ್ಡಿ ಮದರಕಲ್, ಬಸವರಾಜ ಚಂಡ್ರಕಿ, ಲಗಮಣ್ಣ ಮುಂಡರಗಿ ಮುಂತಾದವರು ಮನವಿ ಸಲ್ಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.