ಸೋಮವಾರ, ಜೂನ್ 21, 2021
21 °C

ತೊಗರಿ ಖರೀದಿ ಬಂದ್‌: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ನಗರದ ಹೈದರಾಬಾದ್‌ ರಸ್ತೆಯಲ್ಲಿನ ತರಕಾರಿ ಮಾರುಕಟ್ಟೆ ಆವರಣದಲ್ಲಿ ಆರಂಭಿಸಿರುವ ಖರೀದಿ ಕೇಂದ್ರ ಶುಕ್ರವಾರ ತೆರೆಯದೇ ಇರುವುದು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ರೈತರು ಖರೀದಿ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.ತಾಲ್ಲೂಕಿನ ಮನ್ನಳ್ಳಿ, ಇಸ್ಲಾಂಪುರ, ಮಾಳೆಗಾಂವ್, ಮರಕುಂದಾ, ಮಮದಾಪುರ, ಕಂಗಟಿ ಹಾಗೂ ಇಮಾಮಬಾದ್‌ ಗ್ರಾಮಗಳ ರೈತರು ವಾಹನದಲ್ಲಿ ತೊಗರಿ ಚೀಲಗಳೊಂದಿಗೆ ಖರೀದಿ ಕೇಂದ್ರಕ್ಕೆ ಬಂದು ಅಧಿಕಾರಿಗಳು ಕೇಂದ್ರ ಬಂದ್‌ ಮಾಡಿರುವುದನ್ನು ಖಂಡಿಸಿ ಅವರ ವಿರುದ್ಧ ಘೋಷಣೆ ಕೂಗಿದರು.ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ  ಖರೀದಿ ಕೇಂದ್ರ ಆರಂಭಿಸಿದೆ. ಆದರೆ ಕೇಂದ್ರದಲ್ಲಿ ಎರಡು, ಮೂರು ದಿನಗಳಿಂದ ತೊಗರಿ ಖರೀದಿ ಮಾಡು­ತ್ತಿಲ್ಲ ಎಂದು ರೈತರು ಆರೋಪಿಸಿದರು.‘ತೊಗರಿ ಬೆಂಬಲ ಬೆಲೆಗೆ ಮಾರಲು ಹೆಸರು ನೋಂದಣಿ ಮಾಡಿಸಿ ಎರಡು ತಿಂಗಳು ಕಳೆದಿವೆ. ಆದರೂ ತೊಗರಿ ಖರೀದಿ ಮಾಡುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಇನ್ನೂ ಸರದಿ ಬಂದಿಲ್ಲ. ಸರದಿ ಬಂದ ನಂತರ ತಿಳಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ತಡವಾಗಿ ಹೆಸರು ನೋಂದಣಿ ಮಾಡಿಸಿದವರ ತೊಗರಿ ಖರೀದಿ ಮಾಡಲಾಗಿದೆ’ ಎಂದು ನಾಗೇಶ್‌ ಇಸ್ಲಾಂಪುರ ದೂರಿದರು.‘ಬೇರೆಡೆ ಪ್ರತಿ ಕ್ವಿಂಟಲ್‌ಗೆ ₨ 3,800 ಬೆಲೆ ಇದೆ. ಖರೀದಿ ಕೇಂದ್ರದಲ್ಲಿ ₨5 ಸಾವಿರ ಬೆಂಬಲ ಬೆಲೆಗೆ ಖರೀದಿ ಮಾಡಲಾಗುತ್ತಿದೆ. ಹೀಗಾಗಿ ಇಲ್ಲಿ ಮಾರಾಟ ಮಾಡಿದರೆ ಲಾಭ ಆಗಬಹುದು ಎಂಬ ಉದ್ದೇಶದಿಂದ ಬಂದರೆ  ಖರೀದಿ ಕೇಂದ್ರವನ್ನು ಯಾವುದೇ ಕಾರಣ ನೀಡದೆ ಬಂದ್‌ ಮಾಡಲಾಗಿದೆ’ ಎಂದು ರೈತರು ಅಳಲು ತೋಡಿಕೊಂಡರು.‘ಖರೀದಿ ಕೇಂದ್ರದಲ್ಲಿ ರಾತ್ರಿ ಸಮಯದಲ್ಲಿ ಮಾತ್ರ ಬೆಂಬಲ ಬೆಲೆಗೆ ತೊಗರಿ ಖರೀದಿ ಮಾಡುತ್ತಿದ್ದಾರೆ’ ಎಂದು ಮನ್ನಳ್ಳಿ ಗ್ರಾಮದ ಶಂಕರ ಆರೋಪಿಸಿದರು.ಅಖಿಲ ಭಾರತ ಕಿಸಾನ್‌ ಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಾಬುರಾವ್‌ ಹೊನ್ನಾ, ಪ್ರಮುಖರಾದ ರಾಜಕುಮಾರ್‌ ಚೊಂಡಿ, ಪ್ರಕಾಶ್‌ ಕಂಗಟಿ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.