ಸೋಮವಾರ, ಜನವರಿ 20, 2020
27 °C

ತೊಗರಿ ಬೆಳೆ ಕ್ಷೇತ್ರೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೊಗರಿ ಬೆಳೆ ಕ್ಷೇತ್ರೋತ್ಸವ

ಕಮಲಾಪುರ: ಗುಲ್ಬರ್ಗದಲ್ಲಿ ಅತಿ ಹೆಚ್ಚು  ಪ್ರದೇಶದಲ್ಲಿ ತೊಗರಿ ಬೆಳೆಯು­ತ್ತಾರೆ. ಇದು ತೊಗರಿಯ ಕಣಜ. ಈಚೆಗೆ ಬಂದಿದ್ದ ವಿದೇಶಿಯರೊಬ್ಬರು  ಕಣ್ಣು ಕಾಣುವಷ್ಟು ದೂರ ವಿಶಾಲ­ವಾಗಿ ಹರಡಿದ್ದ ತೊಗರಿ ಹೊಲಗಳನ್ನು ಕಂಡು ಇದು ತೊಗರಿ ಸಮುದ್ರ ಎಂದು ಉದ್ಗರಿಸಿದ್ದರು ಎಂದು ತೊಗರಿ ಪ್ರಧಾನ ವಿಜ್ಞಾನಿ ಡಾ. ಧರ್ಮರಾಜ ಹೇಳಿದರು.ಓಸಿಸಿ, ಐಎಸ್‌ಎಸಿ, ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಸಂಶೋಧನಾ ಕೇಂದ್ರ­ಗಳ ಆಶ್ರಯದಲ್ಲಿ ಗುಲ್ಬರ್ಗ ತಾಲ್ಲೂಕಿನ ಅವರಾದ (ಬಿ) ಗ್ರಾಮದ ಗುರುಶಾಂತಪ್ಪ ಹೊಡಲ ಅವರ ಹೊಲ­ದಲ್ಲಿ ಶುಕ್ರವಾರ  ನಡೆದ ತೊಗರಿ  ಬೆಳೆಯ ಕ್ಷೇತ್ರೋತ್ಸವದಲ್ಲಿ ಅವರು  ಮಾತನಾಡಿದರು.‘ಟಿಎಸ್‌ಆರ್ 3 ತಳಿಯ ತೊಗರಿ ಬೀಜ­ಗಳನ್ನು ನಮ್ಮ ಸಂಶೋಧನಾ ಕೇಂದ್ರ ಮೂರು ವರ್ಷಗಳಿಂದ ಅಭಿವೃ­ದ್ಧಿ­ಪಡಿಸಿದೆ. ಈಗ ರೈತರಿಗೆ ಅವನ್ನು ಬಿಡುಗಡೆ ಮಾಡಿದ್ದು, ಈ ಬೀಜಗಳಿಂದ ರೈತರು ಹೆಚ್ಚಿನ ಇಳುವರಿ ಪಡೆಯು­ತ್ತಿದ್ದಾರೆ’ ಎಂದು  ತಿಳಿಸಿದರು.‘ಬೇರೆ ತೊಗರಿ ಬೀಜಗಳೊಂದಿಗೆ ಹೋಲಿಸಿದರೆ, ಈ ಬೀಜಗಳಿಂದ ಶೇ 70 ಹೆಚ್ಚು ಇಳುವರಿ  ಬಂದಿದೆ. ನೆಟೆ ಮತ್ತು ಗೊಡ್ಡುರೋಗದ ಹಾವಳಿ ಅಷ್ಟಿಲ್ಲ. ಅದನ್ನು ಈ ಹೊಲದಲ್ಲಿ ಕಾಣುತ್ತಿದ್ದೇವೆ.  ಬೇರೆ ತೊಗರಿ ಬೆಳೆ ಪ್ರತಿ ಎಕರೆಗೆ ಮೂರು ಕ್ವೀಟಲ್‌  ಇಳುವರಿ ಬಂದರೆ, ಟಿಎಸ್‌ಆರ್‌ 3 ನಂಬರ್ ತೊಗರಿ ಎಕರೆಗೆ ಸರಾಸರಿ 7ರಿಂದ 8 ಕ್ವೀಟಲ್‌ ಇಳುವರಿ ಬರು­ತ್ತದೆ. ಇದನ್ನು ಈಗ ಸುತ್ತಲಿನ ಹಳ್ಳಿಗಳ ರೈತರೂ ಗಮನಿಸಿದ್ದಾರೆ’ ಎಂದು ಅವರು ವಿವರಿಸಿದರು.‘ಹೈದರಾಬಾದ ಕರ್ನಾಟಕದ ಬೀದರ್‌, ರಾಯಚೂರ, ಗುಲ್ಬರ್ಗ ಜಿಲ್ಲೆಗಳ ಹಲವಾರು ತಾಲ್ಲೂಕುಗಳಲ್ಲಿ ಈ ತಳಿಯ ತೊಗರಿ ಬೆಳೆಯಲಾಗಿದ್ದು, ಕ್ಷೇತ್ರೋತ್ಸವ ನಡೆಸಿ ಇತರ ರೈತರಿಗೂ ತಿಳವಳಿಕೆ ಮೂಡಿಸಲಾಗುತ್ತಿದೆ’ ಎಂದೂ ಅವರು ವಿವರಿಸಿದರು.ಕೃಷಿ ಸ್ಥಾಯಿ ಸಮೀತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮಾಲಿಪಾಟೀಲ, ಸಸ್ಯರೋಗಗಳ ತಜ್ಞ ಜಹೀರ ಅಹಮ್ಮದ, ಐಎಸ್‌ಎಸಿ ಸಂಸ್ಥೆಯ ಪ್ರೇಮಸಿಂಗ್ ಮತ್ತು ಇತರರು ರೈತರನ್ನು ಉದ್ದೇಶಿಸಿ ಮಾತನಾಡಿ­ದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ ಬಿರಾದಾರ ಉಪಸ್ಥಿತರಿದ್ದರು. ವಿವಿಧ ಜಿಲ್ಲೆಗಳಿಂದ ಬಂದಿದ್ದ ಕೃಷಿ ಅಧಿಕಾರಿಗಳು ಹಾಗೂ ಸುತ್ತಲಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)