ತೊಗರಿ: ರೈತನ ತ್ರಿಶಂಕು ಸ್ಥಿತಿ

7

ತೊಗರಿ: ರೈತನ ತ್ರಿಶಂಕು ಸ್ಥಿತಿ

Published:
Updated:

ಗುಲ್ಬರ್ಗ: ಮಳೆ ಅಭಾವದಲ್ಲೂ ಬೆಳೆದಿರುವ ಅಲ್ಪಸ್ವಲ್ಪ ತೊಗರಿ ಮಾರಾಟಕ್ಕೆ ಮುಂದಾದ ಗುಲ್ಬರ್ಗ ಜ್ಲ್ಲಿಲೆಯ ರೈತರು, ರಾಜ್ಯ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ಅನುಷ್ಠಾನದ ನಿರೀಕ್ಷೆಯಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ.   ಎಪಿಎಂಸಿ ಪ್ರಾಂಗಣವು ತೊಗರಿ ಚೀಲಗಳ ಆವಕದಿಂದ ತುಂಬಿ ತುಳುಕುತ್ತಿದ್ದು, ಸದ್ಯದ ಕಡಿಮೆ ಬೆಲೆಗೆ ಮಾರಾಟ ಮಾಡಬೇಕೋ ಅಥವಾ ಸರ್ಕಾರದ ಬೆಂಬಲ ಬೆಲೆ ಸಿಗುವವರೆಗೂ ಕಾಯಬೇಕೋ ಎನ್ನುವ ಚಂಚಲತೆಯಿಂದ ರೈತರು ದಿನವಿಡೀ ತಲೆಮೇಲೆ ಕೈಹೊತ್ತು ಜರ್ಜರಿತರಾಗುತ್ತಿದ್ದಾರೆ.ಪ್ರತಿ ಕ್ವಿಂಟಲ್ ತೊಗರಿಗೆ ಕೂಡಲೇ ರೂ 4 ಸಾವಿರ ಬೆಂಬಲ ನೀಡಿ ಖರೀದಿ ಆರಂಭಿಸುವುದಾಗಿ ರಾಜ್ಯ ಕೃಷಿ ಸಚಿವ ಉಮೇಶ ಕತ್ತಿ ಅವರು ಜ. 21ರಂದು ಘೋಷಿಸಿದ್ದರು. ಐದು ದಿನಗಳಾದರೂ ಸಚಿವರ ಹೇಳಿಕೆ ಅನುಷ್ಠಾನಕ್ಕೆ ಬರಲಿಲ್ಲ. ಗಣರಾಜ್ಯೋತ್ಸವ ದಿನ ಧ್ವಜಾರೋಹಣ ಭಾಷಣದಲ್ಲಿ ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು `ನಾಳೆಯಿಂದಲೇ ತೊಗರಿ ಖರೀದಿ ಆರಂಭಿಸಲಾಗುವುದು~ ಎಂದು ಪ್ರಕಟಿಸಿದರು.

 

ಸಚಿವರ ಭರವಸೆ ನಂಬಿದ ರೈತರು ಎಪಿಎಂಸಿ ಪ್ರಾಂಗಣಕ್ಕೆ ತೊಗರಿ ಚೀಲಗಳನ್ನು ತಂದು ಹಾಕಿದ್ದಾರೆ.

ದಿನಗಳು ಉರುಳುತ್ತಿದ್ದರೂ ಮಧ್ಯವರ್ತಿಗಳೂ ರೂ 4 ಸಾವಿರ ದರ ಕೊಡುತ್ತಿಲ್ಲ; ಸರ್ಕಾರವೂ ಕೊಟ್ಟ ಮಾತು ಉಳಿಸಿಕೊಳ್ಳುತ್ತಿಲ್ಲ. ಸಾಲದ ಉರುಳಿನಲ್ಲಿ ಕೃಷಿಕಾರ್ಯ ಕೈಗೊಳ್ಳುವ ಬಹುತೇಕ ರೈತರು ಕಣ್ಣೀರಿನಲ್ಲಿ ಕೈತೊಳೆಯುವ ಪ್ರಸಂಗ ಎದುರಾಗಿದ್ದು, ರೊಚ್ಚಿಗೆದ್ದ ಕೆಲವು ರೈತರು ಸೋಮವಾರ `ಕರ್ನಾಟಕ ರಾಜ್ಯ ತೊಗರಿ ಮಂಡಳಿ~ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.ಮಾರುಕಟ್ಟೆ ಪ್ರಾಂಗಣದ ಹಾದಿಬೀದಿಗಳಲ್ಲಿ ಚೀಲಗಳ ಆವಕ ಹಾಕಿರುವುದರಿಂದ ಜನರಿಗೆ ಸಂಚರಿಸಲು ಕಷ್ಟವಾಗುತ್ತಿದೆ. ತೊಗರಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲು ಸ್ಥಾಪಿಸಿರುವ ತೊಗರಿ ಮಂಡಳಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರು ರೈತರ ಪ್ರಶ್ನೆಗೆ ಉತ್ತರಿಸಲಾಗದೆ ಜಾಗ ಖಾಲಿ ಮಾಡಿದ್ದಾರೆ.ವ್ಯಾಪಾರಿಗಳ ತೊಳಲಾಟ: ಸರ್ಕಾರ ಬೆಂಬಲ ಬೆಲೆ ಘೋಷಿಸಿದ ಕೂಡಲೇ ನಿರೀಕ್ಷೆಯಂತೆ ಮಧ್ಯವರ್ತಿಗಳು ಬೆಂಬಲ ಬೆಲೆಗಿಂತಲೂ ಹೆಚ್ಚಿನ ದರದಲ್ಲಿ ತೊಗರಿ ಖರೀದಿ ಮಾಡಬೇಕಿತ್ತು. ಆದರೆ, ವಾಸ್ತವದಲ್ಲಿ ವ್ಯಾಪಾರಿಗಳೂ ತೊಗರಿ ಖರೀದಿಸಿದರೆ ನಷ್ಟಕ್ಕೆ ಸಿಲುಕುವ ಆತಂಕದಲ್ಲಿದ್ದಾರೆ.`ಅತ್ತ ಕೇಂದ್ರ ಸರ್ಕಾರ ಬರ್ಮಾದಿಂದ ತೊಗರಿ ಆಮದು ಮಾಡಿಕೊಳ್ಳುತ್ತಿರುವ ಸುದ್ದಿಗಳು ಬರುತ್ತಿವೆ. ಹೀಗಾಗಿ ಮುಂಬೈ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಿಂದ ಬೇಡಿಕೆ ಬರದಿರುವುದರಿಂದ ದಾಲ್‌ಮಿಲ್ ಇರುವವರು ಬೆಳೆ ಖರೀದಿಸುತ್ತಿಲ್ಲ. ಸರ್ಕಾರದ ಘೋಷಣೆಗಳು ಬರೀ ಪತ್ರಿಕೆಯಲ್ಲಿವೆ. ಗುಣಮಟ್ಟದಲ್ಲಿ ಗುಲ್ಬರ್ಗ ತೊಗರಿ ಹೆಸರುವಾಸಿಯಾದರೂ ಸರ್ಕಾರಗಳು ರೈತರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿಲ್ಲ. ಸರ್ಕಾರವೆ ಸೂಕ್ತ ನಿರ್ಧಾರ ಕೈಗೊಂಡು ತೊಗರಿ ಖರೀದಿಸಲು ಮುಂದಾಗಬೇಕು~ ಎನ್ನುತ್ತಾರೆ ಬೇಳೆಕಾಳು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಸ್.ಎಸ್. ಪಟ್ಟಣಕರ್.`2008ರಲ್ಲಿ ಕ್ವಿಂಟಲ್ ತೊಗರಿ ರೂ 7 ಸಾವಿರಕ್ಕೆ ಮಾರಾಟವಾಗಿತ್ತು. ಗ್ರಾಹಕರು ರೊಚ್ಚಿಗೆದ್ದ ಪರಿಣಾಮ ತೊಗರಿ ಗೋದಾಮುಗಳಿಗೆ ಅಧಿಕಾರಿಗಳು ನುಗ್ಗಿ ದರ ಇಳಿಸಿದರು. ಈಗ ತೊಗರಿ ದರ ನೆಲಕ್ಕೆ ಕುಸಿಯುತ್ತಿದ್ದರೂ ಸರ್ಕಾರ ರೈತರನ್ನು ಉಳಿಸುವ ಕೆಲಸ ಮಾಡುತ್ತಿಲ್ಲ. ಪ್ರತಿ ಕ್ವಿಂಟಲ್ ತೊಗರಿಗೆ ರೂ 3,500ರಿಂದ ರೂ 3,700 ದರ ಈಗ ಇದೆ. ಈ ಬೆಲೆಗೆ ಮಾರಿದರೆ, ಹೊಲದಿಂದ ಮಾರುಕಟ್ಟೆಗೆ ತಂದಿರುವ ಸಾಗಾಟದ ದರವೂ ಬರುವುದಿಲ್ಲ~ ಎಂದು ಅಫಜಲಪುರದ ರೈತ ಹನುಮಂತ ಅಳಲು ತೋಡಿಕೊಳ್ಳುತ್ತಾರೆ.ಇನ್ನೊಂದು ಅಚ್ಚರಿಯ ಸಂಗತಿ, ಮೂರು ತಿಂಗಳಲ್ಲೆ ಬೆಳೆಯುವ ಹೆಸರು, ಉದ್ದು, ಕಡಲೆ ಕಾಳುಗಳ ದರ ಏರುಗತಿಯಲ್ಲಿರುವುದು. ಆರು ತಿಂಗಳಿಗೆ ಫಸಲು ಕೊಡುವ ನಿತ್ಯವೂ ಅಡುಗೆಗೆ ಬೇಕಾಗುವ ತೊಗರಿ ದರ ಮಾತ್ರ ಪಾತಾಳದತ್ತ ಮುಖ ಮಾಡಿದೆ.ಶಾಲಾ ಮಕ್ಕಳಿಗೆ ಬಿಸಿಯೂಟದಲ್ಲಿ ಸಾಂಬಾರ್ ತಯಾರಿಸಲು ಪ್ರತಿ ವರ್ಷ ಸರ್ಕಾರವು ದುಬಾರಿ ದರಕ್ಕೆ ಮಧ್ಯವರ್ತಿಗಳಿಂದ ತೊಗರಿ ಬೇಳೆ ಖರೀದಿಸುತ್ತದೆ. ದರ ಇಳಿಕೆಯಿಂದ ತೊಂದರೆಗೆ ಸಿಲುಕಿರುವ ರೈತರಿಂದಲೆ ತೊಗರಿ ಖರೀದಿಸಿ ಬೇಳೆ ಮಾಡಿಕೊಂಡು ಬಿಸಿಯೂಟ ಯೋಜನೆಗೆ ಪೂರೈಸಿದರೆ, ಲಕ್ಷಾಂತರ ರೂಪಾಯಿ ಉಳಿಸಬಹುದು ಎನ್ನುವುದು ರೈತಪರ ಚಿಂತಕರ ಅಭಿಪ್ರಾಯ.ರಾಜ್ಯ ಸರ್ಕಾರದ ಇಬ್ಬಗೆ ನೀತಿಯನ್ನು ವಿರೋಧಿಸಿ ಈ ಭಾಗದ ರೈತರ ಸಂಘಟನೆಗಳು `ಅಮರಣಾಂತ ಉಪವಾಸ~, `ಎಪಿಎಂಸಿ ಬಂದ್~ ಸೇರಿ ವಿವಿಧ ಸ್ವರೂಪದ ಹೋರಾಟ ನಡೆಸುವುದಾಗಿ ಈಗಾಗಲೇ ಘೋಷಿಸಿವೆ. ಹೈದರಾಬಾದ್ ಕರ್ನಾಟಕ ಹಿಂದುಳಿದ ಪ್ರದೇಶದ ರೈತರ ಪ್ರಮುಖ ಬೆಳೆಯಾಗಿರುವ ತೊಗರಿಯನ್ನು ರಾಜ್ಯ ಸರ್ಕಾರವು ಆದಷ್ಟು ಶೀಘ್ರ ಖರೀದಿಸಲು ಮುಂದಾಗಲಿ ಎನ್ನುವ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry