ತೊಗರಿ ಲಾಭ ತಂದುಕೊಡುವ ನಿರೀಕ್ಷೆಯಲ್ಲಿ ರೈತ

ವಿಜಯಪುರ: ಜಿಲ್ಲೆಯ ವಿವಿಧೆಡೆ ಕೆಲ ದಿನಗಳಿಂದ ಸುರಿಯುತ್ತಿದ್ದ ಜಿಟಿಜಿಟಿ ಮಳೆ ಬಿಡುವು ನೀಡಿದ್ದು, ರೈತರ ಕೃಷಿ ಕಾರ್ಯಕ್ಕೆ ಅನುಕೂಲವಾಗಿದೆ.
ತೊಗರಿ ಬಿತ್ತನೆಯಾದ ಆರಂಭದ ದಿನಗಳಿಂದಲೂ ಮಳೆ ಬೆಳೆಗೆ ಪೂರಕವಾಗಿತ್ತು. ಇದರ ಜೊತೆಗೆ ಕಳೆಯೂ ಹುಲುಸಾಗಿಯೇ ಬೆಳೆದಿತ್ತು. ಮಳೆ ತುಸು ಬಿಡುವು ನೀಡಿದರೆ ಮೊದಲು ಕಳೆ ತೆಗೆದು, ಆ ಬಳಿಕ ಗೊಬ್ಬರ ಹಾಕಬಹುದು ಎಂದು ರೈತರು ಕಾಯುತ್ತಿದ್ದರು.
ಇದೀಗ ಕುಂಟೆ ಹೊಡೆದು ಕಳೆ ಕೀಳಲು ಹದವಾದ ವಾತಾವರಣವಿದ್ದು, ಕೃಷಿ ಚಟುವಟಿಕೆಗಳು ಬಿರುಸು ಗೊಂಡಿವೆ. ವಾರದಿಂದ ಈಚೆಗೆ ಆಗಸ ಶುಭ್ರವಾಗಿದ್ದು, ಬಿಸಿಲುಂಡ ಬೆಳೆ ಕಸುವಿನಿಂದ ಬೆಳೆಯುತ್ತಿದೆ.
ಟ್ರ್ಯಾಕ್ಟರ್ನಿಂದ ಎಡೆ: ಎಲ್ಲರೂ ಏಕಕಾಲಕ್ಕೆ ಕಳೆ ಕೀಳಲು ಮುಂದಾಗಿದ್ದರಿಂದ ಕೃಷಿ ಕಾರ್ಮಿಕರು ಸಿಗುತ್ತಿಲ್ಲ. ಹೀಗಾಗಿ ಟ್ರ್ಯಾಕ್ಟರ್ಗೆ ಮೊರೆ ಹೋಗಿದ್ದು, ತೊಗರಿ ಸಾಲುಗಳ ನಡುವೆ ಟ್ರ್ಯಾಕ್ಟರ್ ಚಲಿಸಿ ಎಡೆ ಹೊಡೆಸುವ ಮೂಲಕ ಕಳೆ ನಿಯಂತ್ರಿಸುತ್ತಿರುವುದಾಗಿ ವಿಜಯಪುರ ತಾಲ್ಲೂಕು ಸಾರವಾಡ ಗ್ರಾಮದ ರೈತ ಬಸವರಾಜ ಕೌಲಗಿ ‘ಪ್ರಜಾವಾಣಿ’ಗೆ ತಿಳಿಸಿದರು.
ಬೆಳೆ ಸ್ವಲ್ಪ ದೊಡ್ಡದಾದ ಮೇಲೆ ವಿಧಿಯಿಲ್ಲದೆ ಕೃಷಿ ಕಾರ್ಮಿಕರಿಗೇ ಮೊರೆ ಹೋಗಬೇಕು ಎನ್ನುವ ಇವರು 30 ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದಾರೆ. ಈ ಅಡೆತಡೆಗಳ ನಡುವೆಯೂ ಬೆಳೆ ಉತ್ತಮವಾಗಿರುವುದು ಅವರಿಗೆ ಖುಷಿ ತಂದಿದೆ.
ಕೈಹಿಡಿಯಲಿದೆ ತೊಗರಿ: ‘ಸತತ ಬರ ಕಾಡಿದ್ದರಿಂದ ಕೈಯಲ್ಲಿ ದುಡ್ಡಿರಲಿಲ್ಲ. ಬಿತ್ತನೆಗೂ ಸಾಲ ಮಾಡಿದ್ದೆ. ಹಿಂದಿನ ವರ್ಷಗಳಂತೆಯೇ ಆಗಿದ್ದರೆ ಯಾವ ಕಾರಣಕ್ಕೂ ಹೊಲಕ್ಕೆ ಕಾಲಿಡುತ್ತಿರಲಿಲ್ಲ. ಇದೀಗ ಬೆಳೆ ಉತ್ತಮವಾಗಿದೆ.
ಮಳೆಯೂ ಬಿಡುವು ನೀಡಿದೆ. ಸಾಲ ಮಾಡಿ, ಆಳುಗಳ ಮೂಲಕ ಹೊಲದಲ್ಲಿನ ಕಸ ತೆಗೆಸುತ್ತಿದ್ದೇನೆ. ಈ ವರ್ಷ ತೊಗರಿ ನನ್ನ ಕೈಹಿಡಿಯುತ್ತದೆ’ ಎಂದು ಇಂಡಿ ತಾಲ್ಲೂಕು ತಾಂಬಾ ಗ್ರಾಮದ ಶಿವಯ್ಯ ಹಾರೇಕರ ವಿಶ್ವಾಸ ವ್ಯಕ್ತಪಡಿಸಿದರು.
‘ಈಗಾಗಲೇ ಸಾಕಷ್ಟು ಸಾಲ ಮಾಡಿಕೊಂಡಿರುವ ನನಗೆ ಇನ್ನಷ್ಟು ಸಾಲ ಮಾಡುವ ಶಕ್ತಿ ಇಲ್ಲ. ಹೀಗಾಗಿ ನಮ್ಮ ಕುಟುಂಬದ ಏಳೆಂಟು ಸದಸ್ಯರೇ ಮೂರ್ನಾಲ್ಕು ದಿನದಿಂದ ಹೊಲದಲ್ಲಿನ ಕಳೆ ಕೀಳುತ್ತಿದ್ದಾರೆ. ಬಹುತೇಕ ಕೆಲಸ ಪೂರ್ಣಗೊಂಡಿದೆ’ ಎನ್ನುತ್ತಾರೆ ರೈತ ಶಾಂತಪ್ಪ ಹಂಚಿನಾಳ.
‘ನೀರಿನ ಅಭಾವದಿಂದ ಈ ಬಾರಿ ಕಬ್ಬು ಬೆಳೆಯುವುದನ್ನು ಕಡಿಮೆ ಮಾಡಿ, ತೊಗರಿ ಬೆಳೆಯನ್ನೇ ಹೆಚ್ಚು ಹಾಕಿದ್ದೇವೆ. ಆದರೆ ಕಳೆ ನಿಯಂತ್ರಣವೇ ಕಷ್ಟವಾಗಿದೆ. ಪಕ್ಕದ ದದಾಮಟ್ಟಿ, ಸೋಮಹಳ್ಳಿ ಗ್ರಾಮಗಳಿಂದ ಕೃಷಿ ಕಾರ್ಮಿಕರನ್ನು ಕರೆತಂದು ಕಸ ತೆಗೆಸುತ್ತಿದ್ದೇವೆ’ ಎಂದು ವಿಜಯಪುರ ತಾಲ್ಲೂಕು ಜುಮನಾಳ ಗ್ರಾಮದ ಯುವ ರೈತ ರಮೇಶ ಉಮರಾಣಿ ಹೇಳುತ್ತಾರೆ.
*
ಬ್ಯಾರೇದವ್ರ ಹೊಲಾ ಮಾಡೇನ್ರಿ. ನಾಕೈದ್ ವರ್ಸದ್ ಮ್ಯಾಲ ಬೆಳಿ ಛಲೋ ಐತ್ರಿ. ಈ ಸಲ ಲಾಭ ಆಗತೈತಿ ಅಂತ ಅನಸತೈತ್ರಿ. ಭೂಮಿ ತಾಯಿ ಕೈ ಹಿಡಿತಾಳಂತ ನಂಬಿಕಿ ಐತಿ.
–ಬಸಪ್ಪ ಹೂಗಾರ,
ತಾಂಬಾ ಗ್ರಾಮದ ರೈತ
*
ಕಳೆ ತೆಗೆಯಲು ರೈತ ಸಂಪರ್ಕ ಕೇಂದ್ರಗಳಲ್ಲಿ ಸೈಕಲ್ ವ್ಹೀಡರ್ ಯಂತ್ರಗಳು ಲಭ್ಯವಿವೆ. ಕೆಲವರು ಈ ಸೌಕರ್ಯ ಬಳಸಿಕೊಂಡಿದ್ದಾರೆ. ಆದರೆ, ರೈತರ ಬೇಡಿಕೆಗೆ ತಕ್ಕಷ್ಟು ಯಂತ್ರಗಳು ಇಲ್ಲ
–ಶಿವನಗೌಡ ಪಾಟೀಲ,
ತಾಂತ್ರಿಕ ವಿಭಾಗದ ಕೃಷಿ ಅಧಿಕಾರಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.