ಗುರುವಾರ , ಮೇ 13, 2021
39 °C

ತೊಟ್ಟಿಯಲ್ಲಿ ಸಂಗ್ರಹವಾಗದ ಮಳೆ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಷ್ಮೇಶ್ವರ: ಮಳೆ ನೀರಿನ ಉಪಯೋಗದ ಬಗ್ಗೆ ವಿದ್ಯಾರ್ಥಿ ಜೀವನದಿಂದಲೇ ಶಾಲಾ ಮಕ್ಕಳು ತಿಳಿದುಕೊಳ್ಳಬೇಕು ಹಾಗೂ ಆ ಮೂಲಕ ಮಳೆ ನೀರು ಪುನಃ ಬಳಸುವಂತಾಗಬೇಕು ಎಂದು ಉದ್ದೇಶದಿಂದ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶಾಲೆಗಳಲ್ಲಿ ಮಳೆ ನೀರು ಸಂಗ್ರಹ ಘಟಕಗಳನ್ನು ಆರಂಭಿಸಿತು. ಆದರೆ ಅವುಗಳ ನಿರ್ವಹಣೆ ಇಲ್ಲದೆ ಯೋಜನೆಯ ಉದ್ದೇಶ ವಿಫಲವಾಗಿದೆ.ಪ್ರತಿವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಪಟ್ಟಣದ ಜನರು ಹಾಹಾಕಾರ ನಡೆಸುವರು. ಮಕ್ಕಳನ್ನು ಶಾಲೆ ಬಿಡಿಸಿ ನೀರು ತುಂಬುವ ಕೆಲಸಕ್ಕೂ ಬಳಸಿಕೊಳ್ಳುವರು. ನೀರಿನ ಮಹತ್ವ ಏನು ಎಂಬುದು ಎಲ್ಲರಿಗೂ ಗೊತ್ತು. ಆದರೆ ಮಕ್ಕಳಿಗೆ ಶಿಸ್ತು ಬದ್ಧವಾಗಿ ನೀರಿನ ಸಂಗ್ರಹ, ಪೋಷಣೆ ಹಾಗೂ ಸದ್ಬಳಕೆ ಬಗ್ಗೆ ಮಾಹಿತಿ ನೀಡುವುದು ಅಗತ್ಯ. ಈ ನಿಟ್ಟಿನಲ್ಲಿ ಪ್ರತಿ ಶಾಲೆಯಲ್ಲಿಯೂ ಸರ್ಕಾರ ಮಳೆ ನೀರು ಸಂಗ್ರಹ ಯೋಜನೆ ಅನುಷ್ಠಾನಕ್ಕೆ ತಂದಿತು.ಯೋಜನೆ ಅನುಷ್ಠಾನಕ್ಕಾಗಿ ಸರ್ಕಾರ ಪ್ರತಿ ಶಾಲೆಗೆ ಕನಿಷ್ಠ ಒಂದು ಲಕ್ಷ ರೂಪಾಯಿ ಅನುದಾನ ನೀಡಿದೆ. ಶಾಲಾ ಕಟ್ಟಡದ ಮೇಲೆ ಬೀಳುವ ನೀರನ್ನು ಸಂಗ್ರಹಿಸಲು ಪೈಪ್‌ಲೈನ್ ಜೋಡಿಸಿ, ಅದರ ಮೂಲಕ ನೀರು ತೊಟ್ಟಿಯಲ್ಲಿ ಸಂಗ್ರಹಿಸುವ ವ್ಯವಸ್ಥೆಯನ್ನೂ ರೂಪಿಸಿದೆ. ತೊಟ್ಟಿಯಲ್ಲಿ ಸಂಗ್ರಹವಾಗುವ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವ, ಶಾಲೆ ಆವರಣದಲ್ಲಿ ಕೈಗೊಳ್ಳುವ ತೋಟಗಾರಿಕೆ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಬೇಕು ಎನ್ನುವುದು ಮಳೆ ನೀರು ಸಂಗ್ರಹ ಯೋಜನೆಯ ಉದ್ದೇಶವಾಗಿದೆ.ಶಾಲಾ ಕಟ್ಟಡದ ಮೇಲೆ ಬಿದ್ದ ಮಳೆ ನೀರು ಸಂಗ್ರಹಿಸಿ ಪುನಃ ಅದನ್ನು ಬಳಕೆ ಮಾಡಬೇಕು ಎಂಬ ಯೋಜನೆಯಿಂದ ಎಲ್ಲ ಸರ್ಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಪೈಪ್‌ಲೈನ್ ಅಳವಡಿಸಲಾಗಿದೆ. ನೀರು ಸಂಗ್ರಹಕ್ಕಾಗಿ ದೊಡ್ಡ ಟ್ಯಾಂಕ್ ನಿರ್ಮಿಸಲು ಸರ್ಕಾರ ಅನುದಾನ ನೀಡಿತ್ತು. ಆರಂಭದ ಕೆಲ ವರ್ಷಗಳಲ್ಲಿ ಚೆನ್ನಾಗಿದ್ದ ಮಳೆ ನೀರು ಸಂಗ್ರಹ ಘಟಕಗಳು ನಂತರದ ದಿನಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದವು. ಶಾಲೆಗಳಲ್ಲಿ ಅಳವಡಿಸಿದ್ದ ಮಳೆ ನೀರು ಸಂಗ್ರಹದ ಘಟಕಗಳು ಸಂಪೂರ್ಣ ಹಾಳಾಗಿ ಹೋಗಿವೆ.ಸರ್ಕಾರದ ಮಹತ್ವದ ಯೋಜನೆ ಸಂಬಂಧಿಸಿದವರ ನಿರಾಸಕ್ತಿ, ನಿರ್ಲಕ್ಷ್ಯದಿಂದ ನೆಲ ಕಚ್ಚಿದೆ. ಮಳೆ ನೀರು ಸಂಗ್ರಹಕ್ಕಾಗಿ ಶಾಲಾ ಕಟ್ಟಡದ ಸುತ್ತ ಅಳವಡಿಸಿದ್ದ ಪೈಪ್‌ಲೈನ್‌ಗಳೆಲ್ಲ ಮುರಿದು ಬಿದ್ದಿವೆ. ನೀರು ಸಂಗ್ರಹದ ವ್ಯವಸ್ಥೆ ಹಾಳಾಗಿದೆ. ತೊಟ್ಟಿಯಲ್ಲಿ ಕಸ ತುಂಬಿಕೊಂಡಿದೆ. ಅದರ ಸ್ವಚ್ಛತೆ ಮಾಡಿಲ್ಲ. ನಿರ್ವಹಣೆಗೆ ಯಾರೊಬ್ಬರೂ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಮಳೆ ನೀರು ವ್ಯರ್ಥವಾಗಿ ಎಂದಿನಂತೆ ಹರಿದು ಕಾಲುವೆ ಸೇರುತ್ತಿದೆ ಸ್ಥಳೀಯರ ಆರೋಪ.ಮಕ್ಕಳಿಗೆ ನೀರಿನ ಮಹತ್ವ ಕುರಿತು ತಿಳಿವಳಿಕೆ ನೀಡಬೇಕಾದ ಶಿಕ್ಷಕರೇ ಮಳೆ ನೀರನ್ನು ತಡೆಹಿಡಿಯಲು ಅಸಮರ್ಥರಾಗಿದ್ದಾರೆ. ಕಾರಣ ಮಳೆ ನೀರು ಸಂಗ್ರಹಕ್ಕಾಗಿ ಖರ್ಚು ಮಾಡಿದ ಲಕ್ಷಾಂತರ ರೂಪಾಯಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎನ್ನುವುದು ವಿದ್ಯಾರ್ಥಿಗಳ ಪಾಲಕರು ಹೇಳುವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.