ತೊಟ್ಟಿ ನೀರಿನಿಂದ ಟೊಮೆಟೊ ಬೆಳೆ

7

ತೊಟ್ಟಿ ನೀರಿನಿಂದ ಟೊಮೆಟೊ ಬೆಳೆ

Published:
Updated:
ತೊಟ್ಟಿ ನೀರಿನಿಂದ ಟೊಮೆಟೊ ಬೆಳೆ

ಬೆಳೆ ಇಡಲು ನೀರಿಲ್ಲ ಎಂಬ ಮಾತು ಕೋಲಾರ ಜಿಲ್ಲೆಯಲ್ಲಿ ಸಾಮಾನ್ಯ. ನಿಜ, ಅಂತರ್ಜಲ ಸಿಗುವುದೇ ಅಪರೂಪವಾಗುತ್ತಿದೆ. 1500 ಅಡಿ ತೋಡಿದರೂ ನೀರು ಸಿಗುವ ನಂಬಿಕೆ ಇಲ್ಲ. ಪರಿಸ್ಥಿತಿ ಹೀಗಿರುವಾಗ ಶ್ರೀನಿವಾಸಪುರ ತಾಲ್ಲೂಕಿನ ನಲ್ಲಪ್ಪಲ್ಲಿ ಗ್ರಾಮದ ಕೃಷಿಕ ಎಚ್.ನಾರಾಯಣಸ್ವಾಮಿ ತೊಟ್ಟಿ ನೀರಿನಲ್ಲಿ ಬೆಳೆ ಬೆಳೆಯುವ ಸಾಹಸಕ್ಕೆ ಕೈ ಹಾಕಿದ್ದಾರೆ.ಅವರಿಗೆ ಇರುವುದು ಕೇವಲ 11 ಗುಂಟೆ ಜಮೀನು. ಕೊಳವೆ ಬಾವಿ ನಿರ್ಮಿಸಲು ಕನಿಷ್ಠ ಎರಡು ಲಕ್ಷ ರೂ. ಬೇಕು. ಹಣ ಖರ್ಚು ಮಾಡಿದರೂ ನೀರು ಸಿಗುವ ಭರವಸೆ ಇಲ್ಲ. ಇಷ್ಟೊಂದು ಕಡಿಮೆ ಜಮೀನಿನಲ್ಲಿ ಕೊಳವೆ ಬಾವಿ ನಿರ್ಮಿಸುವುದು ವ್ಯಾವಹಾರಿಕವೂ ಅಲ್ಲ. ಇದೆಲ್ಲವನ್ನೂ ಆಲೋಚಿಸಿಯೇ ತೊಟ್ಟಿ ನೀರಿನ ಬೇಸಾಯಕ್ಕೆ ಇಳಿದಿದ್ದಾರೆ.ತಮ್ಮ ಜಮೀನಿನ ಒಂದು ಬದಿಯಲ್ಲಿ 5 ಸಾವಿರ ಲೀಟರ್ ನೀರು ಹಿಡಿಸುವ ಸಿಮೆಂಟ್ ತೊಟ್ಟಿಯೊಂದನ್ನು ನಿರ್ಮಿಸಿದ್ದಾರೆ. ಅದಕ್ಕೆ ಹನಿ ನೀರಾವರಿ ಸಂಪರ್ಕ ಕಲ್ಪಿಸಿದ್ದಾರೆ. ಟ್ಯಾಂಕರ್‌ನಲ್ಲಿ ನೀರು ತರಿಸಿ ತೊಟ್ಟಿ ತುಂಬಿಸುತ್ತಾರೆ. ಒಂದು ಟ್ಯಾಂಕರ್ ನೀರಿನ ಬೆಲೆ 300 ರೂ. ಅದರಲ್ಲಿಯೇ ಸದ್ಯಕ್ಕೆ ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿ ಟೊಮೆಟೊ ಮತ್ತು ಚೆಂಡು ಹೂವನ್ನು ಬೆಳೆದಿದ್ದಾರೆ.ಯಾವುದೇ ರಾಸಾಯನಿಕ ಗೊಬ್ಬರದ ಸೋಂಕಿಲ್ಲದೆ ಬೆಳೆ ತೆಗೆಯಬೇಕು ಎಂಬುದು ಅವರ ಇಚ್ಛೆ. ಅದಕ್ಕೆ ಪೂರಕವಾಗಿ ಜಮೀನಿನಲ್ಲಿ ಸುಮಾರು 3 ಅಡಿ ಆಳದ ಕಾಲುವೆಗಳನ್ನು ನಿರ್ಮಿಸಿ ಅದರಲ್ಲಿ ಹಸಿರು ಸೊಪ್ಪು ಮತ್ತು ಕೊಟ್ಟಿಗೆ ಗೊಬ್ಬರವನ್ನು ತುಂಬಿಸಿ ಮೇಲೆ ಮಣ್ಣು ಹಾಕಿ ಮುಚ್ಚಿದರು. ಈಗ ಆ ಫಲವತ್ತಾದ ಕಾಲುವೆಯ ಮೇಲೆಯೇ ಟೊಮೆಟೊ ಸಸಿ ನೆಟ್ಟು ಪೋಷಿಸುತ್ತಿದ್ದಾರೆ. ಜತೆಗೆ ನೆಟ್ಟ ಚೆಂಡು ಹೂವಿನ ಗಿಡಗಳಲ್ಲಿ ಮೊಗ್ಗು ಕಾಣಿಸಿಕೊಂಡಿದೆ.  ನಾರಾಯಣಸ್ವಾಮಿ ಹೇಳುವಂತೆ, ಈಗ ಟೊಮೆಟೊ ಬೆಳೆದಿದ್ದರೂ, ಅದರ ನಡುವೆಯೇ ಗುಲಾಬಿ ಸಸಿಗಳನ್ನೂ ನೆಟ್ಟಿದ್ದಾರೆ. `ಟೊಮೆಟೊ ಮುಗಿದ ಮೇಲೆ ಪುಷ್ಪ ಕೃಷಿಗೆ ಪೂರ್ಣ ಗಮನ ನೀಡುತ್ತೇನೆ~ ಎನ್ನುತ್ತಾರೆ. ಬೆಳೆಯ ಪ್ರಾರಂಭದಲ್ಲಿ ಹೆಚ್ಚು ನೀರಿನ ಅಗತ್ಯ ಇರುವುದಿಲ್ಲ. ಬೆಳೆ ಬೆಳೆದಂತೆ ಒಂದು ಟ್ಯಾಂಕರ್ ನೀರು 2-3 ದಿನ ಬರುತ್ತದೆ. ಆಗಾಗ ಮಳೆ ಬಿದ್ದರೆ ನೀರಿಗಾಗಿ ಹೆಚ್ಚು ಖರ್ಚು ಮಾಡಬೇಕಿಲ್ಲ. `ಬೆಳೆಗೆ ಅಗತ್ಯಕಿಂತ ಹೆಚ್ಚು ನೀರನ್ನು ಉಣಿಸುವುದು ಸರಿಯಲ್ಲ. ಸಮರ್ಪಕವಾಗಿ ಬಳಸಿಕೊಂಡರೆ ಲಭ್ಯವಿರುವ ನೀರಿನಲ್ಲೇ ಬೆಳೆ ವಿಸ್ತೀರ್ಣ ಹೆಚ್ಚಿಸಬಹುದು. ಮಿಶ್ರ ಬೆಳೆ ಪದ್ಧತಿಯಲ್ಲಿ ಲಾಭವಿದೆ. ಮುಂದೆ ಗುಲಾಬಿ ಗಿಡಗಳ ಪಾತಿಯಲ್ಲಿ ದಂಟು ಸೊಪ್ಪನ್ನು ಬೆಳೆಯಲು ತೀರ್ಮಾನಿಸಿದ್ದೇನೆ~ ಎಂದು ಹೇಳುವಾಗ ಅವರಲ್ಲಿ ಆತ್ಮವಿಶ್ವಾಸ ಪುಟಿಯುತ್ತದೆ.ಆರ್.ಚೌಡರೆಡ್ಡಿ . (94489 62724)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry