ಸೋಮವಾರ, ನವೆಂಬರ್ 18, 2019
22 °C

ತೊಡೆ ತಟ್ಟಲು ಸಜ್ಜಾದ ರಾಜಾ ಸೋದರರು

Published:
Updated:

ರಾಯಚೂರು: ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರವು (ಹಿಂದೆ ಕಲ್ಮಲಾ ಕ್ಷೇತ್ರ) ವಿಶಿಷ್ಟ ಕ್ಷೇತ್ರ. ಈ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿ ಪ್ರತಿನಿಧಿಸಿದ ಪಕ್ಷವೇ ಬಹುತೇಕ ಸಂದರ್ಭಗಳಲ್ಲಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರೆ, ಈ ಕ್ಷೇತ್ರದಿಂದ ಆಯ್ಕೆಯಾದ ಪ್ರತಿನಿಧಿಗೆ ಸಚಿವ ಸ್ಥಾನ ಒಲಿಯುವ ಅದೃಷ್ಟವೂ ಹೆಚ್ಚಿಗೆ ಇದೆ.ಈ ರೀತಿಯ ನಂಬಿಕೆಯೇ ಅನೇಕರು ಈ ಕ್ಷೇತ್ರದಲ್ಲಿ ಕಣಕ್ಕಿಳಿದು ರಾಜಕೀಯ ಭವಿಷ್ಯ ಒರೆಗೆ ಹಚ್ಚಿದ ಸಾಕಷ್ಟು ಉದಾಹರಣೆಗಳಿವೆ. ಈ ನಂಬಿಕೆಯಿಂದಲೇ ಈ ಬಾರಿ ವಿಧಾನಸಭಾ ಚುನಾವಣೆಗೆ ಇಬ್ಬರು `ರಾಜರು', ಅದೂ ಅಣ್ಣ ತಮ್ಮಂದಿರೇ ಪರಸ್ಪರ ಎದುರು ಬದುರಾಗಿ ಸಡ್ಡು ಹೊಡೆದು ಬಲಾಬಲ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. ಅವರೇ ಲಿಂಗಸುಗೂರು ತಾಲ್ಲೂಕಿನ ಗುರುಗುಂಟಾ ಸಂಸ್ಥಾನದ ರಾಜಮನೆತನದ ಸಹೋದರರಾದ ರಾಜಾ ಅಮರೇಶ್ವರ ನಾಯಕ ಹಾಗೂ ರಾಜಾ ರಾಯಪ್ಪ ನಾಯಕ.ಹಾಲಿ ಶಾಸಕ ರಾಜಾ ರಾಯಪ್ಪ ನಾಯಕ ಕಾಂಗ್ರೆಸ್ ಪಕ್ಷದಿಂದ ಮರು ಸ್ಪರ್ಧೆ ಬಯಸಿದ್ದರೆ, ಇದೇ ಕ್ಷೇತ್ರದಿಂದ 1999ರಲ್ಲಿ ಚುನಾಯಿತರಾಗಿ ಮಂತ್ರಿಗಿರಿ ಅಧಿಕಾರದ ರುಚಿ ಕಂಡು ಬಳಿಕ ಅಜ್ಞಾತವಾಸ ಅನುಭವಿಸಿದ ರಾಜಾ ಅಮರೇಶ್ವರ ನಾಯಕ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದು ಸಹೋದರನ ವಿರುದ್ಧವೇ ಮತ ಯುದ್ಧಕ್ಕೆ ಸಜ್ಜಾಗುತ್ತಿದ್ದಾರೆ.2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಈ ಕ್ಷೇತ್ರ ರಾಯಚೂರು ಗ್ರಾಮೀಣ ವಿಧಾನಸಭಾ ಎಸ್‌ಟಿ ಮೀಸಲು ಕ್ಷೇತ್ರವಾಗಿದೆ. ಜಿಲ್ಲೆಯಲ್ಲಿ ಅತ್ಯಂತ ಗರಿಷ್ಠ ಪ್ರಮಾಣದ ಹಳ್ಳಿಗಳನ್ನು ಒಳಗೊಂಡ ವಿಧಾನಸಭಾ ಕ್ಷೇತ್ರವಿದು. ರಾಯಚೂರು ತಾಲ್ಲೂಕಿನ 198 ಹಳ್ಳಿಗಳು ಈ ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ.ಕಲ್ಮಲಾ ಕ್ಷೇತ್ರವಿದ್ದಾಗ 1972ರಲ್ಲಿ ಬಿ ಶಿವಣ್ಣ, 1978 ಮತ್ತು 1983ರಲ್ಲಿ  ಸುಧೀಂದ್ರರಾವ್ ಕಸ್ಬೆ, 1994 ಮತ್ತು 2004ರಲ್ಲಿ ವಿ. ಮುನಿಯಪ್ಪ ಮುದ್ದಪ್ಪ, 1999ರಲ್ಲಿ ರಾಜಾ ಅಮರೇಶ್ವರ ನಾಯಕ ಈ ಕ್ಷೇತ್ರದಿಂದ ಆಯ್ಕೆಗೊಂಡು  ಸಚಿವರಾಗಿ ಕಾರ್ಯ ನಿರ್ವಹಿಸಿದವರು. ಹೀಗಾಗಿ ಈ ಕ್ಷೇತ್ರದಲ್ಲಿ ಗೆದ್ದರೆ ಮಂತ್ರಿಗಿರಿ ಗ್ಯಾರಂಟಿ ಎಂಬ ನಂಬಿಕೆ ಹೆಚ್ಚಾಗಿದೆ.ಅಷ್ಟೇ ಅಲ್ಲ. ಮಹಿಳಾ ಅಭ್ಯರ್ಥಿಯನ್ನು ಎರಡು ಅವಧಿಗೆ ಆಯ್ಕೆ ಮಾಡಿದ ಹಿರಿಮೆಯೂ ಈ ಕ್ಷೇತ್ರದ್ದು. ಈ ಕ್ಷೇತ್ರ ಎಸ್.ಸಿ. ಮೀಸಲು ಕ್ಷೇತ್ರವಾಗಿದ್ದಾಗ 1962ರ ಮತ್ತು 67ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಗಮ್ಮ ಅವರನ್ನು ಈ ಕ್ಷೇತ್ರದ ಮತದಾರರು ಗೆಲ್ಲಿಸಿದ್ದರು. ಹಾಲಿ ಶಾಸಕ ರಾಜಾ ರಾಯಪ್ಪ ನಾಯಕ ಕಾಂಗ್ರೆಸ್‌ನಿಂದ 2008ರಲ್ಲಿ ಆಯ್ಕೆಗೊಂಡಿದ್ದಾರೆ. ಕೆ. ಶಿವನಗೌಡ ನಾಯಕರ ಆಪ್ತರಾದ ತಿಪ್ಪರಾಜ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ರಾಜಕೀಯ ಭವಿಷ್ಯ ಪರೀಕ್ಷೆಗೆ ಪ್ರಯತ್ನ ನಡೆಸಿದ್ದಾರೆ.

ಪ್ರತಿಕ್ರಿಯಿಸಿ (+)