ಬುಧವಾರ, ಜನವರಿ 22, 2020
25 °C

ತೊಡೆ ತಟ್ಟಿದರೂ ತಡೆಯಲಿಲ್ಲ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಅವರು ರಾಜ್ಯಪಾಲರ ಮುಂದೆಯೇ ಪದೇ ಪದೇ ತೋಳು, ತೊಡೆ ತಟ್ಟಿದರೂ ಅವರನ್ನು ತಡೆಯುವ ಸಾಹಸವನ್ನು ಯಾರೂ ಮಾಡಲಿಲ್ಲ !!ಗುರುವಾರ ಪೆರೇಡ್ ಮೈದಾನದಲ್ಲಿ ಬೆಳಗಾವಿಯ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್ ಸೆಂಟರ್‌ನ 30 ಜನ ಯೋಧರ ತಂಡ ಪ್ರದರ್ಶಿಸಿದ ಮಲ್ಲಕಂಬ ಕಸರತ್ತಿನ ವೇಳೆ ಕಂಡು ಬಂದ ದೃಶ್ಯವಿದು.ಸುಮಾರು ಇಪ್ಪತ್ತು ಅಡಿ ಎಲ್ಲರದ ಮಲ್ಲಕಂಬದ ಮೇಲೆ ವಿವಿಧ ಕಸರತ್ತುಗಳನ್ನು ನಡೆಸಿದರೂ ತಮ್ಮ ದೇಹ ದಣಿದಿಲ್ಲ ಎಂಬುದನ್ನು ತೋರಿಸಲು ಮಲ್ಲರು ತೋಳು, ತೊಡೆಗಳನ್ನು ತಟ್ಟಿ ಸಾಂಪ್ರದಾಯಿಕ ರೀತಿಯಲ್ಲಿಯೇ ತಮ್ಮ ಉತ್ಸಾಹ ಪ್ರದರ್ಶಿಸಿದರು.ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್ ಸೆಂಟರ್‌ನ 30 ಯೋಧರು ತೇಗದ ಮರದಿಂದ ತಯಾರಾದ 6.2 ಮೀಟರ್ ಎತ್ತರದ ಎರಡು ಮಲ್ಲಕಂಬಗಳ ಮೇಲೆ ಕೂರ್ಮಾಸನ, ಮಯೂರಾಸನ, ಪದ್ಮಾಸನಗಳನ್ನು ಸಲೀಸಾಗಿ ಮಾಡಿ ನೋಡುಗರ ಮನ ಸೂರೆಗೊಂಡರು. ಮಲ್ಲಕಂಬ ಏರಿ ಹನುಮಾನ್ ಪಿಟರಿ, ಬೆಂಕಯುಗುಳುವ ಸಾಹಸದ ದೃಶ್ಯಗಳನ್ನು ಪ್ರದರ್ಶಿಸಿದರು. ಅಲ್ಲದೇ ಕಮಲ, ಏಣಿ, ಕಾರಂಜಿ, ಗೋಪುರ ಹಾಗೂ ಪಿರಮಿಡ್‌ಗಳ ಆಕಾರಗಳನ್ನೂ ಮಲ್ಲಕಂಬದ ಮೇಲೆಯೇ ನಿರ್ಮಿಸಿ ಮೈದಾನದಲ್ಲಿದ್ದ ಜನತೆ ಉಸಿರು ಬಿಗಿಹಿಡಿಯುವಂತೆ ಮಾಡಿದರು.ಅತ್ತ ಮಲ್ಲರು ಮಲ್ಲಕಂಬದ ಮೇಲೆ ಮೈ ಕೈ ಮುರಿಯುವಂತಹ ಕಸರತ್ತು ಮಾಡುತ್ತಿದ್ದರೆ ಇದೇ ತಂಡದ ಇಬ್ಬರು ಜೋಕರ್‌ಗಳು ಅದೇ ಕಸರತ್ತನ್ನು ವಿಚಿತ್ರವಾಗಿ ಅನುಕರಿಸುತ್ತಾ ನೋಡುಗರಲ್ಲಿ ನಗೆಯುಕ್ಕಿಸಿದರು. ಮಲ್ಲಕಂಬದ ಕಸರತ್ತಿಗಾಗಿ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್ ಸೆಂಟರ್‌ನ ಯೋಧರು ಗಣರಾಜ್ಯೋತ್ಸವದ ವಿಶೇಷ ಪ್ರಶಸ್ತಿ ಪಡೆದುಕೊಂಡರು.ಟಿ.ಜಿ.ಪದ್ಮನಾಭ ಹಾಗೂ ಸಚಿನ್ ನಾಯಕ್ ಮಲ್ಲಕಂಬ ಪ್ರದರ್ಶನದ ಮಾರ್ಗದರ್ಶಕರಾಗಿದ್ದರು.

ಪ್ರತಿಕ್ರಿಯಿಸಿ (+)