ಭಾನುವಾರ, ಮೇ 16, 2021
28 °C

ತೋಟಗಾರಿಕಾ ಕಾಮಗಾರಿಯಲ್ಲಿ ಅವ್ಯವಹಾರ: ಜೆಡಿಎಸ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಬೆಂಗಳೂರು: ಬಿಬಿಎಂಪಿ ತೋಟಗಾರಿಕಾ ಇಲಾಖೆಯಲ್ಲಿ 2010-11ನೇ ಸಾಲಿನ ಮುಂದುವರಿದ ಕಾಮಗಾರಿಗಳಲ್ಲಿ ಸುಮಾರು 113.58 ಕೋಟಿ ರೂಪಾಯಿಗಳಷ್ಟು ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಪಾಲಿಕೆ ಜೆಡಿಎಸ್ ಗುಂಪಿನ ನಾಯಕ ಪದ್ಮನಾಭರೆಡ್ಡಿ, ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `2010-11ನೇ ಸಾಲಿನಲ್ಲಿ ಮುಂದುವರಿದ 1685 ಕಾಮಗಾರಿಗಳಲ್ಲಿ 113.58 ಕೋಟಿ ರೂಪಾಯಿಗಳಷ್ಟು ಅವ್ಯವಹಾರ ನಡೆದಿದೆ ಎಂದು ತೋಟಗಾರಿಕಾ ಇಲಾಖೆಯ ಎಂಜಿನಿಯರ್ ಹಾಗೂ ಟಿವಿಸಿಸಿ ಅಧೀಕ್ಷಕ ಎಂಜಿನಿಯರ್ ವರದಿ ನೀಡಿದ್ದಾರೆ. 11 ಮಂದಿ ತೋಟಗಾರಿಕಾ ಅಧೀಕ್ಷಕರು ಹಾಗೂ ಒಬ್ಬ ಜಂಟಿ ನಿರ್ದೇಶಕರು ಈ ಕಾಮಗಾರಿಗಳಲ್ಲಿ ಮನಸೋ ಇಚ್ಛೆ ಗುತ್ತಿಗೆ ಪ್ರಕ್ರಿಯೆ ನಡೆಸಿದ್ದಾರೆ~ ಎಂದು ದೂರಿದರು.`ಎರವಲು ಸೇವೆ ಮೇಲೆ ಬಂದ ಐವರು ತೋಟಗಾರಿಕಾ ಅಧೀಕ್ಷಕರು ಈಗಾಗಲೇ ಪಾಲಿಕೆ ಸೇವೆಯಿಂದ ಬಿಡುಗಡೆಯಾಗಿದ್ದಾರೆ. ಈ ಅಧಿಕಾರಿಗಳನ್ನು ಅಮಾನತುಗೊಳಿಸುವ ಮೂಲಕ ಶಿಸ್ತು ಕ್ರಮ ಜರುಗಿಸುವಂತೆ ಪಾಲಿಕೆಯ ವಿಶೇಷ ಆಯುಕ್ತರು (ಆಡಳಿತ) ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಒಂದು ವರ್ಷವಾದರೂ ಇದುವರೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದಲ್ಲದೆ, ಕರ್ತವ್ಯಲೋಪವೆಸಗಿ ಹಾಲಿ ಪಾಲಿಕೆಯ ತೋಟಗಾರಿಕಾ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಏಳು ಮಂದಿ ಅಧೀಕ್ಷಕರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಕೋರಿ ಉಪ ಆಯುಕ್ತರು (ಆಡಳಿತ) ಮತ್ತೊಂದು ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ~ ಎಂದು ಅವರು ವಿಷಾದ ವ್ಯಕ್ತಪಡಿಸಿದರು.`ಕರ್ತವ್ಯಲೋಪವೆಸಗಿದ ಈ 12 ಮಂದಿ ಅಧಿಕಾರಿಗಳಿಗೆ ಶಾಸಕರು ರಕ್ಷಣೆಗೆ ನಿಂತಿರುವುದರಿಂದ ಸರ್ಕಾರ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಈ ಹಗರಣದ ಬಗ್ಗೆ ಸರ್ಕಾರ ಕೂಡಲೇ ಲೋಕಾಯುಕ್ತ ತನಿಖೆಗೆ ಆದೇಶಿಸಬೇಕು. ಇಲ್ಲದಿದ್ದಲ್ಲಿ ಪಕ್ಷದ ವತಿಯಿಂದ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.