ಗುರುವಾರ , ಮೇ 19, 2022
20 °C

ತೋಟಗಾರಿಕಾ ಬೆಳೆಗಾರರ ಸಂಗಾತಿ ಜೈವಿಕ ಕೇಂದ್ರ

ಪ್ರಜಾವಾಣಿ ವಾರ್ತೆ/ ಸುದೇಶ ದೊಡ್ಡಪಾಳ್ಯ Updated:

ಅಕ್ಷರ ಗಾತ್ರ : | |

ತೋಟಗಾರಿಕಾ ಬೆಳೆಗಾರರ ಸಂಗಾತಿ ಜೈವಿಕ ಕೇಂದ್ರ

ಮೈಸೂರು: ಜಿಲ್ಲೆಯ ತೋಟಗಾರಿಕೆ ಬೆಳೆಗಾರರಿಗೊಂದು ಸಿಹಿ ಸುದ್ದಿ. ನಗರದ ಕುಕ್ಕರಹಳ್ಳಿ ಕೆರೆಯಲ್ಲಿರುವ ತೋಟಗಾರಿಕಾ ಪ್ರದೇಶದಲ್ಲಿ `ಜೈವಿಕ ಕೇಂದ್ರ~ ಸ್ಥಾಪನೆಗೊಳ್ಳಲಿದೆ. ಇದರಿಂದಾಗಿ ಒಂದೇ ಕಡೆ ತೋಟಗಾರಿಕೆ ಬೆಳೆಗಾರರಿಗೆ ಅಗತ್ಯವಾದ ಹತ್ತು ಹಲವು ಸವಲತ್ತುಗಳು ಸಿಗಲಿವೆ.ರಾಷ್ಟ್ರೀಯ ತೋಟಗಾರಿಕಾ ವಿಕಾಸ ಯೋಜನೆ ಅಡಿಯಲ್ಲಿ ಜೈವಿಕ ಕೇಂದ್ರ ಮಂಜೂರಾಗಿದೆ. ಕೇಂದ್ರವನ್ನು ರೂಪಿಸುವ ಸಲುವಾಗಿ ಕೇಂದ್ರ ಸರ್ಕಾರ 6 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಈಗ ಟೆಂಡರ್ ಪ್ರಕ್ರಿಯೆ ಸಹ ಆರಂಭ ವಾಗಿದೆ. ಈ ಕೇಂದ್ರವು 18.1 ಎಕರೆ ಪ್ರದೇಶದಲ್ಲಿ ತಲೆಎತ್ತಲಿದೆ.ಕೇಂದ್ರದಲ್ಲಿ ಇಷ್ಟೆಲ್ಲ: ಜೈವಿಕ ಕೇಂದ್ರವು ತೋಟಗಾರಿಕೆ ಬೆಳೆಗಾರರಿಗೆ ವರವಾಗಲಿದೆ. ಇಲ್ಲಿ ಜೈವಿಕ ಗೊಬ್ಬರ, ಜೈವಿಕ ಕೀಟನಾಶಕ, ಸಾವಯವ ಗೊಬ್ಬರವನ್ನು ಉತ್ಪಾದಿಸಿ ರೈತರಿಗೆ ಇಲಾಖೆ ನಿಗದಿಪಡಿಸುವ ದರದಲ್ಲಿ ಮಾರಾಟ ಮಾಡುವುದು. ಬಾಳೆ, ಮಲ್ಲಿಗೆ, ವೀಳ್ಯೆದೆಲೆ, ಶ್ರೀಗಂಧದ ಸಸಿಗಳನ್ನು ಅಂಗಾಂಶ ಕಸಿ ಮೂಲಕ ಅಭಿವೃದ್ಧಿ ಪಡಿಸಿ ರೈತರಿಗೆ ಮಾರಾಟ ಮಾಡುವುದು. ಮಣ್ಣು, ನೀರು ಪರೀಕ್ಷೆ ಮಾಡುವುದು. ಮಾವು, ಸಪೋಟ ಎಲೆಗಳನ್ನು ವಿಶ್ಲೇಷಿಸುವುದು. ಒಟ್ಟಾರೆ ಹೇಳುವುದಾದರೆ ತೋಟಗಾರಿಕೆ ಬೆಳೆಗೆ ಸಂಬಂಧಿಸಿದ ಸಸಿಗಳು, ಗೊಬ್ಬರ ಉತ್ಪಾದನೆ, ತಾಂತ್ರಿಕತೆ, ಬೆಳೆಯುವ ವಿಧಾನ, ರೋಗ ನಿರೋಧಕ ಇತ್ಯಾದಿಗಳನ್ನು ಜೈವಿಕ ಕೇಂದ್ರ ಹೊಂದಿರುತ್ತದೆ. ಈ ಕೇಂದ್ರವು ತೋಟಗಾರಿಕೆ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿದೆ.ತೋಟಗಾರಿಕೆ ಬೆಳೆಗಾರರು ಒಂದೊಂದು ವಿಚಾರಕ್ಕೆ ಒಂದೊಂದು ಕಡೆ ಹೋಗಬೇಕಿದೆ. ಎಲ್ಲ ಸವಲತ್ತುಗಳು ಒಂದೇ ಸೂರಡಿಯಲ್ಲಿ ಸಿಗುವುದರಿಂದ ಅವರ ಶ್ರಮ ಮತ್ತು ಹಣ ಉಳಿತಾಯವಾಗುತ್ತದೆ. ಈಗಾಗಲೇ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಹುಳಿಮಾವಿನಲ್ಲಿ ಜೈವಿಕ ಕೇಂದ್ರ ಸ್ಥಾಪನೆಯಾಗಿದ್ದು, ಉತ್ತಮವಾಗಿ ಕೆಲಸ ಮಾಡುತ್ತಿದೆ. ಎರಡು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಸ್ಥಾಪನೆಗೊಂಡಿದೆ. ಈ ವರ್ಷ ಮೈಸೂರು, ಶಿವಮೊಗ್ಗ, ದಾವಣಗೆರೆಯಲ್ಲಿ ಜೈವಿಕ ಕೇಂದ್ರ ಅಸ್ತಿತ್ವಕ್ಕೆ ಬರಲಿದೆ.`ಜೈವಿಕ ಕೇಂದ್ರ ಸ್ಥಾಪನೆ ಆಗುವುದರಿಂದ ಜಿಲ್ಲೆಯ ತೋಟಗಾರಿಕೆ ಬೆಳೆಗಾರರಿಗೆ ತುಂಬಾ ಅನುಕೂಲವಾಗುತ್ತದೆ. ಇದು ಬೆಳೆಗಾರರಿಗೆ ಅಗತ್ಯವಾದ ಸಸಿಗಳು, ಗೊಬ್ಬರ, ತರಬೇತಿಯನ್ನು ನೀಡುತ್ತದೆ. ಇದರಿಂದ ಬೆಳೆಗಾರರು ಹೆಚ್ಚು ಇಳುವರಿಯನ್ನು ಪಡೆಯುವ ಮೂಲಕ ಹೆಚ್ಚು ಆದಾಯವನ್ನು ಗಳಿಸಬಹುದು. ಇದು ನಿಜಕ್ಕೂ ಅತ್ಯುತ್ತಮ ಕೇಂದ್ರವಾಗಲಿದೆ~ ಎಂದು ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕ ಎಂ.ಎಸ್.ರಾಜು ಹೇಳುತ್ತಾರೆ.ತೋಟಗಾರಿಕೆ ಬೆಳೆಗೆ ಬೇಕಾದ ಪೋಷಕಾಂಶಗಳನ್ನು ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಹಸಿರೆಲೆ ಗೊಬ್ಬರು ಹಿಂಡಿಗಳು, ಎರೆಹುಳು ಗೊಬ್ಬರ ಹಾಗೂ ಇತರೆ ಯಾವುದೇ ಸಾವಯವ ಗೊಬ್ಬರ ಹಾಕುವುದರಿಂದ ಭೂಮಿಯ ಫಲ ವತ್ತತೆಯನ್ನು ಕಾಪಾಡಬಹುದು ಹಾಗೂ ಗಿಡವನ್ನು ಚೆನ್ನಾಗಿ ಬೆಳೆಸಬಹುದು. ಹೀಗಾಗಿ ಜೈವಿಕ ಕೇಂದ್ರ ತೋಟಗಾರಿಕಾ ಬೆಳೆಗಾರರಿಗೆ ಸದಾ ಬೇಕಾಗುವ ಕೇಂದ್ರವಾಗುವುದು ಗ್ಯಾರಂಟಿ ಎನ್ನುವುದು ಇಲಾಖೆ ಅಧಿಕಾರಿಗಳ ಅಭಿಪ್ರಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.