ಸೋಮವಾರ, ಮೇ 17, 2021
23 °C

ತೋಟಗಾರಿಕೆ ಉತ್ಪನ್ನ ಸಂಗ್ರಹಕ್ಕೆ ಶೀತಲಗೃಹ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ತೋಟಗಾರಿಕೆ ವಲಯದಲ್ಲಿ ನೆರೆ ಜಿಲ್ಲೆ ವಿಜಾಪುರ ಅಪಾರ ಸಾಧನೆ ಮಾಡಿದೆ. ಎಲ್ಲ ಸಂಪನ್ಮೂಲ ಹೊಂಡಿರುವ ಗುಲ್ಬರ್ಗ ಜಿಲ್ಲೆ ಅದೇ ಸಾಧನೆಯನ್ನು ತೋರಿಸಬೇಕಿದೆ ಎಂದು ವಿಧಾನಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ ಸಲಹೆ ಮಾಡಿದರು.ಕರ್ನಾಟಕ ತೋಟಗರಿಕೆ ಒಕ್ಕೂಟ ಮತ್ತು ಜಿಲ್ಲಾ ಹಾಪ್‌ಕಾಮ್ಸ ಆಶ್ರಯದಲ್ಲಿ ಸೋಮವಾರ ಇಲ್ಲಿ ಹಮ್ಮಿ ಕೊಂಡಿದ್ದ `ಬಾಳೆ ಬೆಳೆಗಳ ಕೊಯ್ಲೋತ್ತರ ನಿರ್ವಹಣೆ ಮತ್ತು ಮಾರುಕಟ್ಟೆ ವ್ಯವಸ್ಥೆ~ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. “ತೋಟಗಾರಿಕೆ ಉತ್ಪನ್ನ ಬೆಳೆಯುವ ರೈತರಿಗೆ ಶೀತಲಗೃಹದ ಅಗತ್ಯವಿದೆ. ರೈತರು ಇದರಲ್ಲಿ ಉತ್ಪನ್ನ ಸಂಗ್ರಹಿಸಿಟ್ಟು, ಹೆಚ್ಚಿನ ಬೆಲೆ ಬಂದಾಗ ಮಾರಾಟ ಮಾಡಿ ಆದಾಯ ಗಳಿಸಬಹುದು. ಬೆಲೆ ಕೊಯ್ಲು   ಆದ ತಕ್ಷಣ ಮಾರಾಟ ಮಾಡುವ ಬದಲಿಗೆ ಶೀತಲಗೃಹದ ಸೌಲಭ್ಯ ಪಡೆದರೆ ರೈತರು ಹೆಚ್ಚಿನ ಲಾಭ ಪಡೆಯಲು ಸಾಧ್ಯವಿದೆ” ಎಂದು ಅವರು ಹೇಳಿದರು.ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ಆಗ್ರಹಕ್ಕೆ ಮಣಿದು ಸರ್ಕಾರ ಗುಲ್ಬರ್ಗ ಜಿಲ್ಲೆಯನ್ನು ರಾಷ್ಟ್ರೀಯ ತೋಟಗಾರಿಕೆ ಮಿಶನ್ ಯೋಜನೆಗೆ ಆಯ್ಕೆ ಮಾಡಿದೆ.ಆದರೆ ಸರಿಯಾದ ಸಮಯಕ್ಕೆ ಹಣ ಬಾರದೇ ಇರುವುದರಿಂದ ರೈತರು ತೋಟಗಾರಿಕೆ ಬೆಳೆಗೆ ಮುಂದಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ   ಅಲ್ಲಮಪ್ರಭು, ಕೃಷಿ ಯೋಜನೆಗೆ ಸರ್ಕಾರದಿಂದ ಬರುವ ಹಣವನ್ನು ಸಮಯಕ್ಕೆ ಬಿಡುಗಡೆ ಮಾಡದೇ ಹೋದರೆ ರೈತರಿಗೆ ಅದರಿಂದ ಉಪಯೋಗ ಇರುವುದಿಲ್ಲ ಎಂದು  ಅಭಿಪ್ರಾಯಪಟ್ಟರು.

 

`ಅಂಗಾಂಶ ಬಾಳೆಗೆ ಆದ್ಯತೆ~

ತೋಟಗಾರಿಕೆ ಉಪನಿರ್ದೇಶಕ ಸಿ.ಎಸ್.ಮುಲಗೆ ಮಾತನಾಡಿ, ವರ್ಷದ ಹನ್ನೆರಡು ತಿಂಗಳು ಬೆಳೆಯುವ ಬಾಳೆಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇರುತ್ತದೆ. ಗುಲ್ಬರ್ಗ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳ ಮಾರುಕಟ್ಟೆ ದರ ಗಮನಿಸಿದರೆ ಬಾಳೆಗೆ ಬೆಲೆ ಏರುತ್ತಲೇ ಇದೆ ಎಂದರು.“ಬಾಳೆಯಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು, ಕೃಷಿ ಖರ್ಚು ಕಡಿಮೆ ಮಾಡಿಕೊಳ್ಳಬೇಕು. ಅಂಗಾಂಶ ಬಾಳೆಯತ್ತ ರೈತರು ಒಲವು ತೋರುತ್ತಿದ್ದು ಇದರ ಬೇಸಾಯದ ಕುರಿತಂತೆ ಹೆಚ್ಚಿನ ಜ್ಞಾನ ಪಡೆಯಬೇಕು. ಅಗತ್ಯವಿದ್ದರೆ ರೈತರು ಅಧಿಕಾರಿಗಳು ಹಾಗೂ ವಿಜ್ಞಾನಿಗಳಿಂದ ಬೇಸಾಯ ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆಯಬಹುದು”ಎಂದು ಮುಲಗೆ ತಿಳಿಸಿದರು.ಗುಲ್ಬರ್ಗ ಜಿಲ್ಲೆಯಲ್ಲಿ ಸದ್ಯ 3,600 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯಲಾಗುತ್ತಿದ್ದು, ಸರಾಸರಿ ಇಳುವರಿ ಹೆಕ್ಟೇರ್‌ಗೆ 30 ಟನ್ ಇದೆ. ಬಾಳೆ ಕೃಷಿ ವಿಧಾನದಲ್ಲಿ ಸ್ವಲ್ಪ ಜಾಣತನ ಅನುಸರಿಸಿದರೆ ಅಧಿಕ ಆದಾಯವನ್ನು ಇದರಲ್ಲಿ ಗಳಿಸಲು ರೈತರಿಗೆ ಸಾಧ್ಯವಿದೆ ಎಂದು ಅವರು ಹೇಳಿದರು. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ದಂಗಾಪುರ ಮಾತನಾಡಿದರು. ಜಿಲ್ಲಾ ಹಾಪ್‌ಕಾಮ್ಸ ಅಧ್ಯಕ್ಷ ಉಮಾರೆಡ್ಡಿ ಭಾಸರೆಡ್ಡಿ, ಜಿಲ್ಲಾ ಪಂಚಾಯಿತಿ ಕೃಷಿ, ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಸವಳೇಶ್ವರ, ಕೆಎಚ್‌ಎಫ್ ನಿರ್ದೇಶಕ ಬಸವರಾಜ ಪಾಟೀಲ ಇತರರು ಇದ್ದರು.ಮಧ್ಯಾಹ್ನ ನಡೆದ ಗೋಷ್ಠಿಯಲ್ಲಿ ಚಂದ್ರಶೇಖರ ಹಂಚಿನಮನಿ, ಡಾ. ದಯಾನಂದ ಮಹಾಲಿಂಗ ಹಾಗೂ ಬಿ.ವಿ.ಜತ್ತಿ ಉಪನ್ಯಾಸ ನೀಡಿದರು. ವಿವಿಧ ಗ್ರಾಮಗಳ ರೈತರು ವಿಚಾರಸಂಕಿರಣದಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.