ತೋಟಗಾರಿಕೆ ಜಾಗ ಒತ್ತುವರಿಗೆ ವಿರೋಧ

7

ತೋಟಗಾರಿಕೆ ಜಾಗ ಒತ್ತುವರಿಗೆ ವಿರೋಧ

Published:
Updated:

ಮೂಡಿಗೆರೆ: ಒತ್ತುವರಿಯಾಗಲಿದ್ದ ತೋಟಗಾರಿಕೆ ಇಲಾಖೆಗೆ ಸೇರಿದ್ದ ಜಾಗವನ್ನು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ತೆರವುಗೊಳಿಸಿದ ಘಟನೆ ಸಮೀಪದ  ಬೀಜುವಳ್ಳಿ  ಎಂಬಲ್ಲಿ ಸೋಮವಾರ ನಡೆದಿದೆ.ತೋಟಗಾರಿಕಾ ಇಲಾಖೆಗೆ ಸೇರಿದ 36 ಎಕರೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಲು ರಿಚರ್ಡ್ ಅರಾನ್ಹಾ ಎಂಬವರು ಪ್ರಯತ್ನಿಸಿದ್ದರು. ಇದನ್ನು ತಿಳಿದ ಜಿ.ಪಂ. ಸದಸ್ಯ ವಿ.ಕೆ.ಶಿವೇಗೌಡ, ತಾ.ಪಂ. ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ಎಲ್.ಕಲ್ಲೇಶ್, ಹೋಬಳಿ ಅಧ್ಯಕ್ಷ ರಮೇಶ್, ಪಂಚಾಕ್ಷರಿ, ಕಣಚೂರು ವಿನೋದ್, ಬಿದರಹಳ್ಳಿ ಮನೋಜ್, ಚಂದ್ರು ಹುಲ್ಲೇಮನೆ, ಪುರುಷೊತ್ತಮ ರಾಜ ಅರಸ್ ಸ್ಥಳಕ್ಕೆ ಧಾವಿಸಿದರು.  ನಕಾಶೆ ಪರಿಶೀಲಸಿದಾಗ ಜಾಗ ಒತ್ತುವರಿಗೆ ಹುನ್ನಾರ ನಡೆಸಿರುವುದು ಬೆಳಕಿಗೆ ಬಂದಿತು.

ಈ ಜಾಗ ತಮಗೆ ಸೇರಬೇಕಾಗಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆ ತಮ್ಮ ಬಳಿ ಇರುವುದಾಗಿ ಅರಾನ್ಹಾ ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ.ಸದಸ್ಯ ವಿ.ಕೆ.ಶಿವೇಗೌಡ,  ತೋಟಗಾರಿಕೆ ಇಲಾಖೆಗೆ ಸೇರಿರುವ ಈ ಜಾಗದಲ್ಲಿ ಸುಮಾರು 60 ವರ್ಷಗಳ ಹಿಂದಿನ ಸಪೋಟ ಮರ, ಹಲಸಿನ ಮರ, ಮಾವಿನಮರ ಮತ್ತು ಬ್ರಿಟೀಷರು ನಿರ್ಮಿಸಿದ ಬೃಹತ್ ನೀರಿನ ತೊಟ್ಟಿ ಪ್ರತ್ಯಕ್ಷ ಸಾಕ್ಷಿಯಾಗಿ ಇದೆ. ಹೀಗಿರುವಾಗ ಸರ್ಕಾರಿ ಜಾಗವನ್ನು ಅಕ್ರಮವಾಗಿ ಕಬಳಿಸಲು ಸಂಚು ನಡೆಸಿರುವುದರ ಹಿಂದೆ ಯಾರ‌್ಯಾರ ಕೈವಾಡವಿದೆ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟಪಡಿಸಬೇಕು. ಈ ಕುರಿತು ತನಿಖೆ ನಡೆಸಿ ತಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry