ಶನಿವಾರ, ಅಕ್ಟೋಬರ್ 19, 2019
29 °C

ತೋಟಗಾರಿಕೆ: ಬಳಕೆಯಾಗದ ಖಾತ್ರಿ ಹಣ

Published:
Updated:

ದಾವಣಗೆರೆ: ಕೇಂದ್ರ ಸರ್ಕಾರದ `ಉದ್ಯೋಗ ಖಾತ್ರಿ~ ಯೋಜನೆಯಡಿ ತೋಟಗಾರಿಕೆ ಬೆಳೆಗೆ ಅನುದಾನ ಪಡೆಯುವುದಕ್ಕೆ ಅವಕಾಶವಿದೆ. ಆದರೆ, ಮಾಹಿತಿ ಕೊರತೆ ಮತ್ತಿತರ ಕಾರಣಗಳಿಂದ ಅತ್ಯುತ್ತಮ ಅವಕಾಶವೊಂದು ಸರಿಯಾಗಿ ಬಳಕೆ ಆಗುತ್ತಿಲ್ಲ. ಇದರಿಂದ ಕೋಟ್ಯಂತರ ರೂಪಾಯಿ ವಿನಿಯೋಗ ಆಗುತ್ತಿಲ್ಲ!ಉದ್ಯೋಗ ಖಾತ್ರಿ ಯೋಜನೆಯಡಿ, ಕೂಲಿ ಪಡೆಯುವುದಷ್ಟೇ ಅಲ್ಲ. ವಿವಿಧ ಬೆಳೆಗಳನ್ನು ಬೆಳೆದು ಆರ್ಥಿಕ ಸಬಲತೆ ಹೊಂದಬಹುದು. ಈ ಪೈಕಿ, ತೋಟಗಾರಿಕೆ ಬೆಳೆಗಳನ್ನು ಪ್ರೋತ್ಸಾಹಿ ಸುವುದು ಮಹತ್ವದ್ದಾಗಿದೆ. ಪರಿಶಿಷ್ಟ ಜಾತಿ, ಪಂಗಡ, ಸಣ್ಣ, ಅತಿಸಣ್ಣ ಹಿಡುವಳಿ ಹೊಂದಿರುವ ರೈತರು ಯೋಜನೆಯ ಲಾಭ ಪಡೆಯಬಹುದು. ಆದರೆ, ಪ್ರತಿ ವರ್ಷ ನಿರೀಕ್ಷಿಸಿದಷ್ಟು ಪ್ರಯೋಜನವನ್ನು ರೈತರು ಪಡೆಯುತ್ತಿಲ್ಲ.ಇದರಿಂದ, ರಾಜ್ಯದಲ್ಲಿ ತೋಟಗಾರಿಕೆ ಬೆಳೆಗಳ ಕ್ಷೇತ್ರ ವಿಸ್ತರಣೆ ಉದ್ದೇಶಕ್ಕೂ ತೊಡಕು ಉಂಟಾಗಿದೆ.

ತೋಟಗಾರಿಕೆ ಬೆಳೆಗಳಾದ ಮಾವು, ಬಾಳೆ, ಸಪೋಟ, ದಾಳಿಂಬೆ, ಮೋಸಂಬಿ, ಕೋಕೋ, ಗೋಡಂಬಿ ಮತ್ತು ವಿವಿಧ ಹೂವು ಬೆಳೆಯಲು ತಗಲುವ ವೆಚ್ಚವನ್ನು  ಖಾತ್ರಿ ಯೋಜನೆಯಡಿ ನೀಡಲಾಗುವುದು (ಅಡಿಕೆಗೆ ಇಲ್ಲ).ಇದಕ್ಕಾಗಿ ರೈತರು, ಬೆಳೆಯಲು ಉದ್ದೇಶಿಸಿರುವ ಬೆಳೆಯ ಬಗ್ಗೆ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗೆ ಅರ್ಜಿ ಸಲ್ಲಿಸಬೇಕು. ಇದಕ್ಕೆ ತೋಟಗಾರಿಕೆ ಇಲಾಖೆಯು ಪೂರ್ವ ನಿಗದಿತ ಅಂದಾಜು ಪಟ್ಟಿ ಆಧರಿಸಿ ಆರ್ಥಿಕ ಮಂಜೂರಾತಿ (ಎಕರೆಗೆ ಇಂತಿಷ್ಟು ಎಂದು) ನೀಡುತ್ತದೆ. ಇದಾದ ನಂತರ ಗ್ರಾಮ ಪಂಚಾಯ್ತಿಯವರು ಆಡಳಿತಾತ್ಮಕ ಮಂಜೂರಾತಿ ಕೊಡು ತ್ತಾರೆ. ಈ ಪ್ರಕ್ರಿಯೆ ಮೂಲಕ ರೈತರು ಹಣಕಾಸು ನೆರವು ಪಡೆಯಬಹುದು.`ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದಕ್ಕೆ ತಗಲುವ ವೆಚ್ಚವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಪಡೆಯಬಹುದು. ಆರ್ಥಿಕ ಮಂಜೂರಾತಿ ಪಡೆದವರು, ತಮ್ಮ ಜಮೀನಿನಲ್ಲಿ ಗಿಡ ಹಾಕಲು ಗುಂಡಿ ತೆಗೆಯುವುದು, ನೆಡುವುದು, ಪಾತಿ ಮಾಡುವುದು, ಕಳೆ ಕೀಳುವುದು ಮತ್ತಿತರ ಕೆಲಸಗಳನ್ನು `ಖಾತ್ರಿ~ ಯೋಜನೆಯಡಿ ಉದ್ಯೋಗ ಚೀಟಿ (ಜಾಬ್ ಕಾರ್ಡ್) ಹೊಂದಿರು ವವರಿಂದ ಮಾಡಿಸಬಹುದು. ಇವರಿಗೆ ಕೂಲಿಯನ್ನು ಗ್ರಾ.ಪಂ. ನಿಂದ ನೇರವಾಗಿ, ಕೆಲಸ ಮಾಡಿದವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.

 

ಗಿಡಗಳು, ರಸಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಇತರೆ ಪದಾರ್ಥಗಳಿಗೆ ಶೇ. 40ರಷ್ಟು ಹಣವನ್ನು `ಸಾಮಗ್ರಿ ವೆಚ್ಚ~ವಾಗಿ ನೀಡಲಾಗುವುದು (ಕ್ಷೇತ್ರ ಪರಿಶೀಲನೆ ಬಳಿಕ, ಇಲಾಖೆ ಅಧಿಕಾರಿಗಳ ಶಿಫಾರಸು ಆಧರಿಸಿ). ಇದರಿಂದ ರೈತರು ಬಹುತೇಕ ವೆಚ್ಚ ಪಡೆದಂತಾಗುತ್ತದೆ. ಈ ಮೂಲಕ ಆರ್ಥಿಕ ಸ್ಥಿತಿ ಸುಧಾರಣೆಯೂ ಸಾಧ್ಯವಿದೆ. ಆದರೆ, ಇಂತಹ ಮಹತ್ವದ ಯೋಜನೆಯ ಲಾಭ ಪಡೆಯುವುದಕ್ಕೂ ರೈತರು ಆಸಕ್ತಿ ತೋರುತ್ತಿಲ್ಲ. ಹೀಗಾಗಿ, ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕದಿರೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.2009-10ನೇ ಸಾಲಿನಲ್ಲಿ ಎಲ್ಲ ರೈತರಿಗೂ ಯೋಜನೆಯಡಿ ಅನುದಾನ ಪಡೆಯಲು ಅವಕಾಶವಿತ್ತು. ಆಗ ಜಿಲ್ಲೆಯಲ್ಲಿ ರೂ 3.40 ಕೋಟಿ ಖರ್ಚಾಗಿತ್ತು. ನಂತರ 2010-11ನೇ ಸಾಲಿನಿಂದ ಪರಿಶಿಷ್ಟ ಜಾತಿ, ಪಂಗಡ, ಸಣ್ಣ, ಅತಿಸಣ್ಣ ರೈತರಿಗೆ ಮಾತ್ರ ಎಂದು ನಿಗದಿಪಡಿಸಲಾಯಿತು. ಪ್ರಸಕ್ತ ಸಾಲಿನಲ್ಲಿ ಕೇವಲ ರೂ 4.5 ಲಕ್ಷ ಮಾತ್ರ ಬಳಕೆಯಾಗಿದೆ. ರೂ 9 ಕೋಟಿ ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಅಷ್ಟನ್ನೂ ಬಳಸಿಕೊಳ್ಳಬಹುದು. ರೈತರು ಯೋಜನೆಯ ಲಾಭ ಪಡೆಯಬೇಕು ಎಂದು ಕೋರುತ್ತಾರೆ ಅವರು.ಗ್ರಾ.ಪಂ. ಅಧಿಕಾರಿಗಳ ಅಸಹಕಾರ ಹಾಗೂ `ಅಲೆದಾಡಿಸುವ ಪ್ರವೃತ್ತಿ~ ಯಿಂದ ತೋಟಗಾರಿಕೆ ಬೆಳೆಗಳಿಗೆ ಅನುದಾನ ಪಡೆಯಲು ರೈತರು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

Post Comments (+)