ತೋಟಗಾರಿಕೆ ಬೆಳೆ: ಹೆಚ್ಚಿನ ಲಾಭ

7

ತೋಟಗಾರಿಕೆ ಬೆಳೆ: ಹೆಚ್ಚಿನ ಲಾಭ

Published:
Updated:
ತೋಟಗಾರಿಕೆ ಬೆಳೆ: ಹೆಚ್ಚಿನ ಲಾಭ

ರಾಮನಗರ: ಬಯಲು ಸೀಮೆಯ ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದರಿಂದ ಹೆಚ್ಚು ಲಾಭಗಳಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ರೈತರಿಗೆ ಕರೆ ನೀಡಿದರು.

ನಗರದ ನಗರಸಭೆ ಸಭಾಭವನದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ `ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಸಂಸ್ಕರಣೆಯಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ~ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಮನಗರ ಜಿಲ್ಲೆ ಬಯಲು ಪ್ರದೇಶವಾಗಿದ್ದರೂ ಇತ್ತೀಚೆಗೆ ನೀರಾವರಿ ಯೋಜನೆಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ಗರಕಳ್ಳಿ ಏತ ನೀರಾವರಿ ಯೋಜನೆಯಿಂದ ಹಲವಾರು ಕೆರೆಗಳಿಗೆ ನೀರು ಬಿಡಲಾಗಿದ್ದು. ಜಿಲ್ಲೆಯ ಇನ್ನಿತರ ತಾಲ್ಲೂಕುಗಳಿಗೆ ಹೇಮಾವತಿ ಹಾಗೂ ಕಾವೇರಿ ನದಿಯಿಂದ ನೀರು ಹರ ತ್ವರಿತವಾಗಿ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಆಹಾರ ಧಾನ್ಯಗಳನ್ನು ಬೆಳೆಯುತ್ತಿರುವ ರೈತರು ಇನ್ನು ಮುಂದೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಕಡೆಗೆ ಹೆಚ್ಚು ಗಮನ ಕೊಡಬೇಕು. ಬೆಂಗಳೂರಿಗೆ ಹತ್ತಿರ ಇರುವ ಜಿಲ್ಲೆಯಾಗಿರುವುದರಿಂದ ತೋಟಗಾರಿಕೆ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಇದೆ. ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸಲು ಸಾಧ್ಯವಾಗುತ್ತದೆ. ತೋಟಗಾರಿಕೆ ಬೆಳೆಗಳ ಮಾಹಿತಿ ಪಡೆದು ಬೆಳೆಯುವುದರಿಂದ ಜೀವನ ಮಟ್ಟ ಉತ್ತಮಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಸಂಸ್ಕರಣೆ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಮುಕ್ತ ಆಹ್ವಾನ ನೀಡಲಾಗಿದೆ. ಸರ್ಕಾರದ ವತಿಯಿಂದ ಹೂಡಿಕೆದಾರರಿಗೆ ಸಕಲ ಸೌಲಭ್ಯಗಳನ್ನು ದೊರಕಿಸಿಕೊಡಲಾಗುತ್ತದೆ. ಹೂಡಿಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ತಾವೂ ಪ್ರಯೋಜನ ಪಡೆಯಬೇಕು ಎಂದರು.

ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಮಾತನಾಡಿದ ಹಿತೈಷಿ ಗ್ರೂಪ್‌ನ ವ್ಯವಸ್ಥಾಪಕ ವಿಜಯ್‌ಕುಮಾರ್ ಮಾತನಾಡಿ ಸರ್ಕಾರ ಏಕಗವಾಕ್ಷಿ ಯೋಜನೆಯ ಮೂಲಕ ಭೂಮಿ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ದೊರಕಿಸಿಕೊಟ್ಟಾಗ ಅತೀ ಶೀಘ್ರವಾಗಿ ಉದ್ಯಮವನ್ನು ಪ್ರಾರಂಭಿಸಬಹುದು ಎಂದರು.

ಸಮಾವೇಶದಲ್ಲಿ 30 ಮಂದಿ ಬಂಡವಾಳ ಹೂಡಿಕೆದಾರರು ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಎಸ್.ಪುಟ್ಟಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಬಿಸನಳ್ಳಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ವೆಂಕಟೇಶಪ್ಪ, ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಚ್.ಎಲ್.ಚಂದ್ರು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಧನಂಜಯ, ತಾ.ಪಂ. ಅಧ್ಯಕ್ಷೆ ಸುಜಾತಶಿವಲಿಂಗಪ್ಪ, ನಗರಸಭೆ ಅಧ್ಯಕ್ಷ ಸಾಬಾನ್ ಸಾಬ್, ತೋಟಗಾರಿಕೆ ಜಂಟಿ ನಿರ್ದೇಶಕ ಎ.ನಾರಾಯಣಸ್ವಾಮಿ, ಉಪನಿರ್ದೇಶಕ ಡಾ.ಬಿ.ಕೃಷ್ಣ, ಸಹಾಯಕ ನಿರ್ದೇಶಕ ಕೆ.ರುದ್ರೇಶ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry