ತೋಟಗಾರಿಕೆ ಮೇಳಕ್ಕೆ 15 ಸಾವಿರ ಮಂದಿ

7

ತೋಟಗಾರಿಕೆ ಮೇಳಕ್ಕೆ 15 ಸಾವಿರ ಮಂದಿ

Published:
Updated:

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಕ್ರಾಸ್ ಸಮೀಪದ ಪಿಆರ್‌ಎಸ್ ತೋಟಗಾರಿಕೆ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಫಲಪುಷ್ಪ ಪ್ರದರ್ಶನ ಮತ್ತು ತೋಟಗಾರಿಕೆ ಮೇಳ ಭಾನುವಾರ ಸಮಾರೋಪಗೊಂಡಿತು.ಮೂರು ದಿನಗಳ ನಡೆದ ಮೇಳಕ್ಕೆ ಸುಮಾರು 15 ಸಾವಿರಕ್ಕೂ ಹೆಚ್ಚು ರೈತರು, ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಭೇಟಿ ನೀಡಿ, ಹಲವು ವಿಷಯಗಳ ಬಗ್ಗೆ ಮಾಹಿತಿ ಪಡೆದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಮತ್ತು ನಂದಿ ಕಲಾ ಉದ್ಯಾನ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಮೇಳದಲ್ಲಿ 30ಕ್ಕೂ ಹೆಚ್ಚು ಮಳಿಗೆ ಸ್ಥಾಪಿಸಲಾಗಿತ್ತು. ವಿವಿಧ ಇಲಾಖೆಗಳ ಮತ್ತು ಖಾಸಗಿ ಸಂಸ್ಥೆಗಳು ಕೃಷಿ, ತೋಟಗಾರಿಕೆ ಮತ್ತು ಪುಷ್ಪೋದ್ಯಮಕ್ಕೆ ಸಂಬಂಧಿಸಿದಂತೆ  ಉತ್ಪನ್ನ ಮತ್ತು ಉಪಕರಣಗಳನ್ನು ಪ್ರದರ್ಶಿಸಿದ್ದರು. ಮೇಳದಲ್ಲಿ ಪಾಲ್ಗೊಂಡ ಎಲ್ಲ ಮಳಿಗೆದಾರರಿಗೆ ಪ್ರಮಾಣಪತ್ರ ವಿತರಿಸಲಾಯಿತು.

`ರಾಜ್ಯ ಸರ್ಕಾರದಿಂದ ಅನುದಾನ ಲಭ್ಯವಿದ್ದು, ಅದನ್ನು ಸದ್ಬಳಕೆ ಮಾಡಬೇಕು ಎಂಬ ಏಕಮೇವ ಉದ್ದೇಶದಿಂದ ಅತ್ಯಂತ ಕಡಿಮೆ ಅವಧಿಯಲ್ಲಿ ಫಲಪುಷ್ಪ ಪ್ರದರ್ಶನ ಮತ್ತು ತೋಟಗಾರಿಕೆ ಮೇಳ ಆಯೋಜಿಸಲು ತೀರ್ಮಾನಿಸಿದ್ದೆವು. ಮೊದಲ ಮೇಳವಾಗಿರುವ ಕಾರಣ ಯಶಸ್ವಿಯ ಬಗ್ಗೆ ಆತಂಕವಿತ್ತು. ಆದರೆ ಮೇಳದ ಬಗ್ಗೆ ರೈತ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ಪ್ರಯತ್ನದಲ್ಲೇ ಯಶಸ್ಸು ದೊರೆತ ಸಮಾಧಾನವಿದೆ~ ಎಂದು ನಂದಿ ಕಲಾ ಉದ್ಯಾನ ಸಂಘದ ಅಧ್ಯಕ್ಷ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

`ಮೂರು ದಿನಗಳಲ್ಲಿ ಮೇಳಕ್ಕೆ 15 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ. 12 ಸಾವಿರ ಗುಲಾಬಿ ಗಳಿಂದ ನಿರ್ಮಿಸಲಾಗಿದ್ದ ನಂದಿ, ಬಾಳೆದಿಂಡಿನಿಂದ ಕಟ್ಟಲಾಗಿದ್ದ ಶಿವನ ಮಂಟಪ, ಬಾಳೆಎಲೆಗಳಿಂದ ತಯಾರಿಸಲಾಗಿದ್ದ ಡ್ರಾಗನ್ ಮುಂತಾದವುಗಳ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ~ ಎಂದು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry