ಗುರುವಾರ , ಏಪ್ರಿಲ್ 22, 2021
29 °C

ತೋಟದಿಂದ ತಟ್ಟೆಗೆ...

ಸುಮಲತಾ ಎನ್. Updated:

ಅಕ್ಷರ ಗಾತ್ರ : | |

ಹುಟ್ಟುಹಬ್ಬವಾಗಲೀ, ಮದುವೆ ಮುಂಜಿಯಾಗಲೀ, ಮನೆಯಲ್ಲಿ ಸಣ್ಣ ಪುಟ್ಟ ಹಬ್ಬವಾಗಲೀ, ಮರುದಿನವೇ ರಸ್ತೆಗಳ ಮೇಲೆ ಪ್ಲಾಸ್ಟಿಕ್, ಪೇಪರ್ ತಟ್ಟೆ ಲೋಟಗಳು ಹರಡಿಕೊಂಡಿರುತ್ತವೆ. ಮಳೆ ಬಂದರಂತೂ ನೋಟ ದುಸ್ತರ. ಮಣ್ಣಿನಲ್ಲಿ ಕರಗದ ಈ ವಸ್ತುಗಳು ಭೂಮಿಯನ್ನು ದಿನೇ ದಿನೇ ಹೀನಾಯ ಸ್ಥಿತಿಯತ್ತ ತಲುಪಿಸುತ್ತವೆ. ಪರಿಸರ ರಕ್ಷಣೆ ಕುರಿತು ಭಾಷಣ ಮಾಡುವವರ ಮನೆಯಲ್ಲೂ ಪ್ಲಾಸ್ಟಿಕ್ ವಸ್ತುಗಳದ್ದೇ ಹೆಚ್ಚಿನ ಪಾಲು.

`ಈ ಪ್ಲಾಸ್ಟಿಕ್‌ಗೆ ಪರ್ಯಾಯ ಮಾರ್ಗ ಹುಡುಕುವುದು ನನ್ನ ಉದ್ದೇಶವಾಗಿತ್ತು. ಅದಕ್ಕೆ ಆರಿಸಿಕೊಂಡದ್ದು ಅಡಿಕೆ, ಬಾಳೆ ಮತ್ತು ತೆಂಗಿನ ಮರಗಳಿಂದ ಉತ್ಪನ್ನಗಳನ್ನು ತಯಾರಿಸುವ ಹಾದಿಯನ್ನು~ ಎಂದರು ಭೂಮಿ ಗ್ರೀನ್ ಸೊಲ್ಯೂಷನ್ಸ್ ಸಂಸ್ಥೆಯ ಮುಖ್ಯಸ್ಥ ರವೀಂದ್ರ.

`ಎಲ್ಲರೂ ಭೂಮಿಯನ್ನು ರಕ್ಷಿಸುವ ಕುರಿತು ಮಾತನಾಡುತ್ತಲೇ ಇರುತ್ತಾರೆ. ಆದರೆ ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ವಿದೇಶಿಯರು ಪರಿಸರದ ಕಾಳಜಿ ವಹಿಸುವಲ್ಲಿ ಅರ್ಧದಷ್ಟೂ ನಮ್ಮ ಮಂದಿ ಎಚ್ಚೆತ್ತುಕೊಂಡಿಲ್ಲ. ಐಟಿ ಕಂಪೆನಿಗಳು ಪರಿಸರದ ದಿನ ವಿಶೇಷ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಆದರೆ ಅವರ ಕಚೇರಿಯ ಕಸದ ಬುಟ್ಟಿಗಳನ್ನು ಒಮ್ಮೆ ನೋಡಿ, ಆಗ ಗೊತ್ತಾಗುತ್ತದೆ ಅಸಲಿ ಪರಿಸರ ಕಾಳಜಿ~ ಎಂದು ವಾಸ್ತವದ ಮಾತನಾಡಿದರು ಅವರು.

`ಪರಿಸರಕ್ಕೆ ಮಾರಕವಾಗುವ ಸ್ಥಾನದಲ್ಲಿ ಮೊದಲಾಗಿರುವ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಅಡಿಕೆ, ಬಾಳೆ, ತೆಂಗಿನ ಕರಟ ಬಳಸಿಕೊಂಡು ದಿನಬಳಕೆ ಉತ್ಪನ್ನಗಳನ್ನು ಏಕೆ ತಯಾರಿಸಬಾರದು ಎಂಬ ಯೋಚನೆ ಬಂತು. ಇದೇ ಕಾರಣಕ್ಕೆ ಮೂರು ವರ್ಷಗಳ ಹಿಂದೆ ಭೂಮಿ ಸಂಸ್ಥೆ ತೆರೆದೆವು~ ಎಂದರು ಮಧು ರವೀಂದ್ರ.

ಈ ಸಂಸ್ಥೆಯ ಮುಖ್ಯ ಉದ್ದೇಶ ಭೂಮಿಯನ್ನು ಕೈಲಾದಷ್ಟು ಉಳಿಸುವುದು. ಅದೇ ಕಾರಣಕ್ಕೆ ಸಂಸ್ಥೆಗೆ `ಭೂಮಿ~ ಎಂಬ ಹೆಸರಿಟ್ಟಿದೆ. ಉತ್ಪನ್ನಗಳ ತಯಾರಿಕೆ ಕಾರ್ಯದಲ್ಲಿ 15 ಮಂದಿ ಸಹಾಯಕರಿದ್ದಾರೆ.

`ಅಡಿಕೆ ಹಾಳೆಗಳಿಂದ ತಟ್ಟೆಗಳನ್ನು ತಯಾರಿಸುವ ಸಂಸ್ಥೆಗಳು ಹಲವಾರು ಇವೆ ನಿಜ. ಆದರೆ ನಾವು ವಿಭಿನ್ನವಾಗಿ ತಯಾರಿಸಲು ಮುಂದಾಗಿದ್ದೇವೆ. ಇಲ್ಲಿ ಅಡಕೆ ತಟ್ಟೆಗಳೊಂದಿಗೆ ಬಟ್ಟಲುಗಳನ್ನೂ ತಯಾರಿಸಲಾಗುತ್ತದೆ. ವೃತ್ತ, ಚೌಕ, ಆಯತ, ಮೊಟ್ಟೆಯಾಕಾರ ಹೀಗೆ ವಿವಿಧ ಗಾತ್ರದಲ್ಲಿ ಸ್ವಚ್ಛ, ಆಕರ್ಷಕವಾಗಿ  ಕಾಣುವಂತೆ ಉತ್ಪನ್ನಗಳನ್ನು ತಯಾರಿಸುತ್ತೇವೆ. ಆದರೆ ಇವುಗಳನ್ನು ತಯಾರಿಸಲು ಮರ ಕಡಿದು ಭೂಮಿಗೆ ದ್ರೋಹ ಮಾಡುವುದಿಲ್ಲ. ಮರದ ನಿರುಪಯುಕ್ತ ಭಾಗವನ್ನು ಇದಕ್ಕೆ ಉಪಯೋಗಿಸುತ್ತೇವೆ. ತುಮಕೂರು, ಕುಣಿಗಲ್‌ನಿಂದ ಅಡಿಕೆ ಹಾಳೆಗಳನ್ನು ತರಿಸಿಕೊಳ್ಳುತ್ತೇವೆ. ರೈತರಿಗೂ ಅನುಕೂಲ ಮಾಡಿಕೊಡುವ ಉದ್ದೇಶ ನಮ್ಮದು~ ಎನ್ನುತ್ತಾರೆ.

ತೆಂಗಿನ ಕರಟದಿಂದಲೂ ಚಮಚ, ಸೌಟು, ಲೋಟ, ಬಟ್ಟಲು ಇತ್ಯಾದಿ ಗೃಹೋಪಯೋಗಿ ಮತ್ತು ಆಲಂಕಾರಿಕ ಪರಿಕರಗಳನ್ನು ಇವರು ತಯಾರಿಸಿದ್ದಾರೆ. ಇನ್ನು ಪ್ಲಾಸ್ಟಿಕ್ ಚೀಲದಿಂದ ಮುಕ್ತಿ ಹೊಂದಲು ಬಾಳೆ ದಿಂಡನ್ನು ಬಳಸಿ ತರಹೇವಾರಿ ಬ್ಯಾಗ್‌ಗಳನ್ನು ತಯಾರಿಸಿದ್ದಾರೆ. ಒಮ್ಮೆ ಫಸಲು ಬಂದ ಬಾಳೆಗಿಡವನ್ನು ಕತ್ತರಿಸಿ ಎಸೆಯುವ ಬದಲು ಅದರಿಂದಲೇ ಬ್ಯಾಗ್ ತಯಾರಿಸಲು ಶುರು ಮಾಡಿಕೊಂಡರಂತೆ. ಸಣ್ಣದಾಗಿ ಆರಂಭವಾದ ಈ ಉದ್ಯಮಕ್ಕೆ ಈಗ ಯಂತ್ರವೂ ಸಾಥ್ ನೀಡಿದೆ. ಸಂಸ್ಥೆ ಆರಂಭಿಸಿದಾಗ ತಯಾರಿಸಿದ್ದು ಟೀ, ಕಾಫಿ ಕುಡಿಯುವ ಮಡಿಕೆ ರೂಪದ ಲೋಟಗಳನ್ನು. ಆದರೆ ಈ ಪ್ರಯೋಗ ಯಶಸ್ವಿಯಾಗಲಿಲ್ಲ. ಇದನ್ನು ತಯಾರಿಸುವ ಕುಶಲಕರ್ಮಿಗಳ ಕೊರತೆಯಿರುವ ಕಾರಣ ಈ ಯೋಜನೆ ಕೈಬಿಟ್ಟಿದ್ದಾರೆ.

`ಅಭಿವೃದ್ಧಿ ಹೆಸರಿನಲ್ಲಿ ನಾವು ಭೂಮಿಯನ್ನು ನಿರ್ಲಕ್ಷಿಸುತ್ತಿದ್ದೇವೆ. ಸಂತೋಷ ಕೂಟದ ನೆಪದಲ್ಲಿ ಪರಿಸರ ಹಾಳುಮಾಡುವ ಹಕ್ಕು ನಮಗಿಲ್ಲ. ಪ್ರವಾಸಕ್ಕೆ ಹೋಗುವವರೂ ಕುಡಿದು, ತಿಂದು, ಪ್ಲಾಸ್ಟಿಕ್, ಪೇಪರ್, ಬಾಟಲಿಗಳನ್ನು ಅಲ್ಲೇ ಎಸೆದು ಬರುತ್ತಾರೆ. ಬೀಚ್, ಪ್ರಾಣಿಸಂಗ್ರಹಾಲಯ, ಉದ್ಯಾನ, ಬೆಟ್ಟಗುಡ್ಡದಂತಹ ಸುಂದರ ತಾಣಗಳು ಗಲೀಜು ಪ್ರದೇಶಗಳಾಗಿ ಪರಿವರ್ತನೆ ಹೊಂದಲೂ ಇದೇ ಕಾರಣ. ಮನಸ್ಥಿತಿ ಬದಲಾಗದೆ ಕೇವಲ ನಿರ್ಬಂಧದಿಂದ ಇದು ಬದಲಾಗುವುದಿಲ್ಲ. ಕಂಡಲ್ಲಿ ಎಸೆಯುವ ಕೆಟ್ಟ ಚಾಳಿ ಎಲ್ಲರಲ್ಲಿಯೂ ಮುಂದುವರೆಯುತ್ತಿದೆ. ಆದ್ದರಿಂದ ಅಂಥವರಿಗೆ ಈ ರೀತಿಯಾದರೂ ತಿಳಿವಳಿಕೆ ಹೇಳಬೇಕು ಎನ್ನುವುದಷ್ಟೇ ನಮ್ಮ ಕಾಳಜಿ~ ಎನ್ನುತ್ತಾರೆ ರವೀಂದ್ರ.

ಅಡಿಕೆ ಹಾಳೆಗಳೆಂದರೆ ಸ್ವಚ್ಛವಿರುವುದಿಲ್ಲ, ಬೇಕಾದ ಆಕಾರದಲ್ಲಿರುವುದಿಲ್ಲ ಎಂದು ಗ್ರಾಹಕರು ದೂರುತ್ತಾರಂತೆ. ಅವರ ಅನುಕೂಲಕ್ಕೆ ತಕ್ಕಂತೆ ಉತ್ಪನ್ನಗಳನ್ನು ವಿವಿಧ ವಿನ್ಯಾಸಗಳಲ್ಲಿ ತಯಾರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  ಪರಿಸರಸ್ನೇಹಿಗಳಾದ ಇವು  ಸುಲಭವಾಗಿ ಮಣ್ಣಿನೊಂದಿಗೆ ಬೆರೆತು ಸಾವಯವ ಗೊಬ್ಬರವಾಗುತ್ತದೆ. ಇನ್ನು ಗುಣಮಟ್ಟದ ಬಗ್ಗೆ ಸಂಶಯವೇ ಬೇಡ ಎಂಬ ಸ್ಪಷ್ಟನೆ ಸಂಸ್ಥೆಯದ್ದು.

ಮಹಾನಗರಪಾಲಿಕೆ ತ್ಯಾಜ್ಯ ವಿಲೇವಾರಿ ಬಗ್ಗೆ ಎಷ್ಟೇ ಪ್ರಯತ್ನ ಮಾಡಿದರೂ ಪ್ರತಿಯೊಬ್ಬರಲ್ಲೂ ಈ ಕುರಿತು ಜಾಗೃತಿ ಮೂಡಿಸದಿದ್ದರೆ ಪರಿಣಾಮವಾಗುವುದು ಭೂಮಿಯ ಮೇಲೆಯೇ. ಇಂತಹ ಪರಿಸರಸ್ನೇಹಿ ಉತ್ಪನ್ನಗಳ ಬಗ್ಗೆ ಎಷ್ಟೋ ಮಂದಿಗೆ ಇನ್ನೂ ತಿಳಿದಿಲ್ಲ. ಕೆಲವರು ಯೋಚಿಸಿದರೂ, ಬೆಲೆ ಹೆಚ್ಚು ಎಂಬ ಕಾರಣಕ್ಕೆ ಮತ್ತೆ ಪ್ಲಾಸ್ಟಿಕ್‌ಗಳಿಗೇ ಮೊರೆ ಹೋಗುತ್ತಾರೆ.

ಸ್ಥಳೀಯ ಆಡಳಿತ ಸಂಸ್ಥೆಗಳು ಇಂತಹ ಉತ್ಪನ್ನಗಳ ಪ್ರಚಾರಕ್ಕೆ ಮುಂದಾದರೆ  ಮರಗಿಡಗಳನ್ನು ಕಣ್ಣಾರೆ ಕಾಣುವ ಸೌಭಾಗ್ಯ ಮುಂದಿನ ಜನಾಂಗಕ್ಕೂ ಸಿಗಬಹುದೇನೊ ಎನ್ನುವ ಕಳಕಳಿ `ಭೂಮಿ~ಯದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.