ತೋಟವೇ ಪಾಠಶಾಲೆ

7

ತೋಟವೇ ಪಾಠಶಾಲೆ

Published:
Updated:
ತೋಟವೇ ಪಾಠಶಾಲೆ

ಪತಿ ದೆಹಲಿಯ ಪ್ರತಿಷ್ಠಿತ ಕಂಪೆನಿಯೊಂದರ ಉದ್ಯೋಗಿ. ಬಾಲ್ಯವನ್ನೆಲ್ಲ ವಿದೇಶಗಳಲ್ಲಿಯೇ ಕಳೆದಾಕೆ ಮೈಸೂರು ಮೂಲದ ಪತ್ನಿ. ಕೃಷಿಯಲ್ಲಿಯೇ ಇವರಿಬ್ಬರ ಆಸಕ್ತಿ. ಇದೇ ಕಾರಣಕ್ಕೆ ದೆಹಲಿಯೂ ಬೇಡ, ವಿದೇಶವೂ ಬೇಡವೆಂದು ಮೈಸೂರಿನಲ್ಲಿಯೇ ಜಮೀನು ಖರೀದಿಸಿರುವ ಇವರು ಈಗ ಕೃಷಿ ಸಾಧಕರು.ಇದು ವಿವೇಕ್ ಮತ್ತು ಜ್ಯೂಲಿ ದಂಪತಿ ಕಥೆ. ಕೃಷಿ ಎನ್ನುವುದು ಯಾವ ಐಟಿ ಬಿಟಿ ಕಂಪೆನಿ ಉದ್ಯೋಗಕ್ಕಿಂತಲೂ ಕಡಿಮೆಯಿಲ್ಲ ಎನ್ನುವುದು ಇವರ ಮಾತು. ಇದೇ ಕಾರಣಕ್ಕೆ ತಮ್ಮ ಇಬ್ಬರೂ ಮಕ್ಕಳನ್ನು ಶಾಲೆಗೆ ಸೇರಿಸಲಿಲ್ಲ! ತೋಟವೇ ಇವರ ಪಾಠ ಶಾಲೆ ಎನ್ನುವ ದಂಪತಿ ಕೃಷಿಯ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಕೊಡಗು ಮೂಲದ ವಿವೇಕ್ ಅವರಿಗೆ ದೆಹಲಿಯಲ್ಲಿಯೇ `ಆಮದು ರಫ್ತು' ಕಂಪೆನಿಯಲ್ಲಿ ನೌಕರಿ ದೊರೆಯಿತು. ಜ್ಯೂಲಿ ಹುಟ್ಟಿದ್ದು ಮೈಸೂರು ಆದರೂ ಅವರ ತಾಯಿ ಅಮೆರಿಕ ಪ್ರಜೆ. ಇದೇ ಕಾರಣಕ್ಕೆ ಜ್ಯೂಲಿ ಅವರ ಬಾಲ್ಯ ಅಮೆರಿಕ, ರೋಮ್‌ಗಳಲ್ಲಿ ಕಳೆಯಿತು.

ಇವರಿಬ್ಬರ ವಿವಾಹ ನೆರವೇರಿದ ಮೇಲೆ ಪತಿಯ ಕೃಷಿಯ ಕನಸಿಗೆ ಜ್ಯೂಲಿ ಸಾಥ್ ನೀಡಿದರು. ಇದೇ ಕಾರಣಕ್ಕೆ 1986ರಲ್ಲಿ ಮೈಸೂರಿನ ಸರಗೂರು ಬಳಿ ಎಂಟು ಎಕರೆ ಜಮೀನನ್ನು ಖರೀದಿಸಿದರು. ಕೊಡಗಿನಲ್ಲಿ ತಂದೆ ಹೆಸರಿನಲ್ಲಿರುವ ಎಕರೆಗಟ್ಟಲೆ ಭೂಮಿಯಲ್ಲಿ ಕಾಫಿ ಬೆಳೆಯುವುದು ಅದ್ಯಾಕೋ ವಿವೇಕ್‌ಗೆ ಹಿಡಿಸಲಿಲ್ಲ.

ಬಗೆ ಬಗೆಯ ಕೃಷಿಗಳತ್ತ ಒಲವು ತೋರಿದ ದಂಪತಿಗೆ ಕೃಷಿಯ ಕುರಿತಿದ್ದ ಅನುಭವ ಅಷ್ಟಕಷ್ಟೆ. ಆರಂಭದ ದಿನಗಳಲ್ಲಿ ಸಾಕಷ್ಟು ನಷ್ಟ ಅನುಭವಿಸಿದರು. ಆದರೂ ಸೋಲದೆ ಒಂದಿಷ್ಟು ಪ್ರಯೋಗ ಮಾಡಿ ಈಗ ಯಶಸ್ಸು ಗಳಿಸಿದ್ದಾರೆ.ಏನೆಲ್ಲಾ ಇದೆ?ಭೂಮಿಯನ್ನು ಹೆಚ್ಚು ಅಗೆಯದೆ ಮಾಡುವ ಸಹಜ ಕೃಷಿ ವಿಧಾನ ಇವರ ಕೃಷಿಯ ವಿಶೇಷತೆ. ತಮಗಿರುವ 38 ಎಕರೆ ಭೂಮಿ ತುಂಬಾ ತೆಂಗು, ಅಡಿಕೆ, ಕೋಕೋ, ಮಾವು, ಬೇವು, ಕಾಫಿ, ಚಿಕ್ಕು, ದಾಳಿಂಬೆ, ನಿಂಬೆ, ಸೀಬೆ, ಬಾಳೆ, ತರಕಾರಿ, ಕಬ್ಬು, ಕಿತ್ತಳೆ, ಲವಂಗ, ಬತ್ತ, ಬೆಣ್ಣೆ ಹಣ್ಣು, ಅಂಬಟೆ, ಮೆಣಸು, ರಾಗಿ, ಜೋಳ, ಹಸಿರು ಹುಲ್ಲು, ಎರೆಗೊಬ್ಬರ, ಬಗೆ ಬಗೆಯ ಹೂವಿನ ಗಿಡಗಳು... ಹೀಗೆ ದಿನಬಳಕೆಗೆ ಬೇಕಾದ ಎಲ್ಲಾ ತರಕಾರಿ, ಹಣ್ಣು ಹಂಪಲುಗಳು ಹೀಗೆ ಇವರ ಬಳಿ ಇಲ್ಲದ ಕೃಷಿಗಳಿಲ್ಲ.

30 ಎಕರೆಯಲ್ಲಿ ಮಾತ್ರ ಕೃಷಿ. ಉಳಿದ ಎಂಟು ಎಕರೆಯಲ್ಲಿ ಬಗೆ ಬಗೆಯ ಹಳ್ಳಿ ಹಣ್ಣಿನ, ಔಷಧೀಯ ಗಿಡಗಳನ್ನು ನಾಟಿ ಮಾಡಿದ್ದಾರೆ. ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ನೇರವಾಗಿ ಮಾರಾಟ ಮಾಡುವುದಿಲ್ಲ. ಕಚ್ಚಾ ವಸ್ತುಗಳಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವುದು ಈ ದಂಪತಿಗೆ ಒಲಿದ ಕಲೆ.`ಕಬ್ಬಿನಿಂದ ಪ್ರತಿವರ್ಷ ಐದರಿಂದ ಏಳು ಟನ್ ಬೆಲ್ಲವನ್ನು ತಯಾರಿಸುತ್ತೇನೆ. ರಾಗಿಗೆ ಕೆ.ಜಿಗೆ 15 ರೂಪಾಯಿ ಮಾರುಕಟ್ಟೆ ಬೆಲೆ ಇದೆ. ಅವನ್ನು ಮಾಲ್ಟ್ ಮಾಡಿ ಮಾರಾಟ ಮಾಡಿ ಐವತ್ತು ರೂಪಾಯಿ ಗಳಿಸುತ್ತೇನೆ' ಎನ್ನುವ ವಿವೇಕ್ ಕೊಬ್ಬರಿ ಎಣ್ಣೆಯಿಂದ ಸಾಬೂನು, ತಮ್ಮಲ್ಲಿರುವ 220 ಬಗೆಯ ಹತ್ತಿಯಿಂದ ನೂಲು ತಯಾರಿಸಿ ಅಪ್ಪಟ ಖಾದಿ ಬಟ್ಟೆಯನ್ನು ತಯಾರಿಸುತ್ತಾರೆ.

ತಾವು ಬೆಳೆದ ವಸ್ತುಗಳನ್ನು ತಾವೇ ಬಳಸುವ ಮೂಲಕ ಹಳ್ಳಿ ಹಣ ಹಳ್ಳಿಯಲ್ಲೇ ಚಲಾವಣೆಯಾಗಬೇಕೆಂಬುವುದು ಇವರ ಪ್ರಯತ್ನ. ಇವರ ಭೂಮಿಗೆ ಸುತ್ತಿಕೊಂಡಂತಿರುವ ನದಿ ನೀರಾವರಿ ಸೌಲಭ್ಯವನ್ನೊದಗಿಸಿದೆ.ಕೈಮಗ್ಗದ ಪ್ರಯತ್ನಗಾಂಧೀಜಿಯ ಮೊಮ್ಮಗಳು ಜ್ಯೂಲಿ ಅವರ ಕುಟುಂಬ ಸ್ನೇಹಿತೆ. ಇದೇ ಕಾರಣಕ್ಕೋ ಏನೋ ಗಾಂಧೀಜಿಯ ಸ್ವಾಭಿಮಾನದ ಸ್ವದೇಶಿ ಚಿಂತನೆಯ ಕನಸುಗಳು ಜ್ಯೂಲಿ ಅವರಿಗೆ ಬಾಲ್ಯದಿಂದಲೇ ಒಡಮೂಡಿದ್ದವು. ಇದರ ಫಲವಾಗಿ ಈ ದಂಪತಿ ಇರುವ ಸರಗೂರಿನ ಮನೆಯಲ್ಲೆಗ ಖಾದಿ ನೂಲಿನ ಗಿರಾಣಿ ಇದೆ.

ಪ್ರಕೃತಿ ಸಹಜ ಕಾಯಿ ಪಲ್ಯೆಗಳಿಂದ ತಯಾರಿಸುವ ಪೈಂಟ್‌ನ ಘಟಕವೊಂದು ತೆರೆದುಕೊಂಡಿದೆ. ಅಡಿಕೆ ಸಿಪ್ಪೆ, ಬಗೆ ಬಗೆಯ ಹಣ್ಣುಗಳಿಂದ ಬಣ್ಣ ತಯಾರಿಸುವ ಮೂಲಕ ತಾವೇ ತಯಾರಿಸಿದ ಖಾದಿ ಬಟ್ಟೆಗಳಿಗೆ ಬಣ್ಣ ಕೊಡುವ ಕೆಲಸ ಇಲ್ಲಿ ದಿನಲೂ ನಡೆಯುತ್ತಿದೆ.

ಹಳ್ಳಿಗಳಲ್ಲಿ ಉದ್ಯೋಗವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೈಮಗ್ಗ ಕಾಯಕದ ಕುರಿತು ಮಾಹಿತಿ, ತರಬೇತಿ, ಮಾರ್ಗದರ್ಶನ ನೀಡುವ ಪ್ರಯೋಗದಲ್ಲಿ ಕಳೆದ ಎಂಟು ವರ್ಷಗಳಿಂದ ದಂಪತಿ ತೊಡಗಿದ್ದಾರೆ.ಉಳುಮೆಗೆ ಅಗತ್ಯವಾಗಿ ಬೇಕಾದ ಉಳುವ ಟ್ರಾಕ್ಟರ್, ಬತ್ತ ನಾಟಿ, ಕಟಾವು ಯಂತ್ರ, ಬುಲ್ಡೋಜರ್, ಪಿಕ್‌ಆಫ್, ಅಡಿಕೆ ಸಾಗಿಸುವ ಯಂತ್ರ, ತೋಟ ಸುತ್ತಲೂ ಬೇಕಾದ ಮೋಟಾರ್ ಸೈಕಲ್, ಬೆಲ್ಲದ ಗಾಣವನ್ನು ತಿರುಗಿಸುವ ಯಂತ್ರ, ಸಗಣಿ ಮಿಶ್ರ ಮಾಡುವ ಯಂತ್ರ ಎಲ್ಲವೂ ಇವರ ಬಳಿ ಇವೆ. ಇವುಗಳ ದುರಸ್ತಿ ಕಾರ್ಯವನ್ನು ಇವರ ಮಕ್ಕಳಾದ ಅಜಾದ್ ಮತ್ತು ಕಬಿರ್ ಮಾಡುತ್ತಾರೆ.ಅದಕ್ಕಾಗಿಯೇ ಮನೆಯಂಗಳಕ್ಕೆ ತಾಗಿಕೊಂಡಂತೆ ಗ್ಯಾರೇಜೊಂದನ್ನು ನಿರ್ಮಿಸಿದ್ದಾರೆ. ಮಕ್ಕಳಿಗೆ ಶಾಲೆಯ ಬದಲು ಉಳುಮೆ, ಟ್ರಾಕ್ಟರ್ ಉಳುಮೆ, ಆಟೊ ಮೆಕ್ಯಾನಿಕ್, ಮನೆಕಟ್ಟುವ ತಾಂತ್ರಿಕತೆ, ಮಿಲ್, ಗಿರಾಣಿಗಳ ಯಾಂತ್ರಿಕ ದುರಸ್ತಿ ಇವುಗಳನ್ನೆಲ್ಲಾ ಸ್ವತಃ ಕಲಿಸಿಕೊಟ್ಟಿದ್ದಾರೆ.ಮೈಸೂರಿನ ಎಚ್. ಡಿ.ಕೋಟೆಯಿಂದ ಸರಗೂರಿನಲ್ಲಿರುವ ನೆಗು (ಕಬಿನಿ) ಜಲಾಶಯದಿಂದ ಎಡಕ್ಕೆ ಕಚ್ಚಾ ರಸ್ತೆಯಲ್ಲಿ ಮೂರು ಕಿ.ಲೋ ಮೀಟರ್ ಸಾಗಿದರೆ ವಿವೇಕ್ ದಂಪತಿಗಳ ಕೃಷಿತೋಟ ಎದುರಾಗುತ್ತದೆ.

ವಿವೇಕ್‌ರವರ ಸಂಪರ್ಕಕ್ಕೆ : 9591905291.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry